ತ್ಯಾಜ್ಯ ಸೇವಿಸಿ ಸಾವಿಗೀಡಾದ ಹಸುಗಳು

ಅರಸೀಕೆರೆ: ನಗರದ ಎ.ಪಿ.ಎಂ.ಸಿ. ಪ್ರಾಂಗಣದಲ್ಲಿ ಎಸೆಯಲಾಗಿದ್ದ ಅನುಪಯುಕ್ತ ತ್ಯಾಜ್ಯ ಸೇವಿಸಿ ಎರಡು ಸಿಂಧಿ ಹಸುಗಳು ಮೃತಪಟ್ಟಿವೆ.


ಇದರಿಂದ ಆಕ್ರೋಶಗೊಂಡ ಜಾನುವಾರುಗಳ ಮಾಲೀಕರಾದ ಮಂಜುನಾಥ್, ರಾಘವೇಂದ್ರ ಮತ್ತಿತರರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು. ಸ್ವಚ್ಛತೆ ಗುತ್ತಿಗೆದಾರರು ಹಾಗೂ ಎ.ಪಿ.ಎಂ.ಸಿ. ಆಡಳಿತ ವರ್ಗದ ನಿರ್ಲಕ್ಷ್ಯದ ವಿರುದ್ಧ ಘೋಷಣೆ ಕೂಗಿದರು.


ಪ್ರಾಂಗಣದ ಸ್ವಚ್ಛತೆಯ ಗುತ್ತಿಗೆ ಪಡೆದಿರುವ ವ್ಯಕ್ತಿ ಪ್ರಭಾವಿ ರಾಜಕೀಯ ಮುಖಂಡರ ಬೆಂಬಲಿಗರಾಗಿದ್ದು, ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇಲ್ಲಿನ ಆಡಳಿತ ಮಂಡಳಿ ನಿದ್ರೆಗೆ ಜಾರಿರುವ ಪರಿಣಾಮ, ಲಕ್ಷಾಂತರ ರೂ. ಬೆಲೆ ಬಾಳುವ ಜಾನುವಾರು ಮೃತಪಟ್ಟಿವೆ. ಆದ್ದರಿಂದ ಸಂಬಂಧಿಸಿದ ಗುತ್ತಿಗೆದಾರನ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.


ಸ್ವಚ್ಛತೆ ಗುತ್ತಿಗೆದಾರನ ವಿರುದ್ಧ ಕ್ರಮ ಜರುಗಿಸುವುದಾಗಿ ಎ.ಪಿ.ಎಂ.ಸಿ. ಕಾರ್ಯದರ್ಶಿ ಸಿದ್ದರಾಜು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಲಾಯಿತು. ಪಶು ವೈದ್ಯಾಧಿಕಾರಿ ಡಾ.ಮಂಜುನಾಥ್ ಮೃತ ಜಾನುವಾರುಗಳ ಮರಣೋತ್ತರ ಪರೀಕ್ಷೆ ನಡೆಸಿದರು.

Leave a Reply

Your email address will not be published. Required fields are marked *