ಶುಚಿತ್ವಕ್ಕೆ ಕೈಜೋಡಿಸಿದ ನಗರಸಭೆ ಪೌರಾಯುಕ್ತ

ಅರಸೀಕೆರೆ: ಇಲ್ಲಿನ ನಗರಸಭೆಗೆ ವರ್ಗಾವಣೆಯಾಗಿ ಬಂದಿರುವ ಪೌರಾಯುಕ್ತ ಚಲಪತಿ ಪೌರ ಕಾರ್ಮಿಕರೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳುವ ಮೂಲಕ ನಗರದ ಶುಚಿತ್ವ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯ ವಿಭಜಕಗಳ ಇಕ್ಕೆಲಗಳಲ್ಲಿ ಸಂಗ್ರಹವಾಗಿದ್ದ ಧೂಳನ್ನು ತಾವೇ ಗುದ್ದಲಿ ಬಳಸಿ ತೆರವುಗೊಳಿಸಿದರು. ಅಲ್ಲದೇ ರಸ್ತೆ ವಿಭಜಕದ ನಡುವೆ ಮುರಿದು ಬಿದ್ದಿದ್ದ ವಿದ್ಯುತ್ ಕಂಬವನ್ನು ಸರಿಪಡಿಸಿದರು. ನಂತರ ವಿವಿಧ ಬಡಾವಣೆಗಳಿಗೆ ತೆರಳಿ ನಾಗರಿಕರ ಅಹವಾಲು ಆಲಿಸಿ, ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.

ಸುಭಾಷ್ ನಗರ, ಶಿವಾನಂದ ಕಾಲನಿ, ಕೃಷ್ಣಪ್ಪ ನಗರ ಬಡಾವಣೆ ಸೇರಿ ಇತರೆ ಬಡವಾಣೆಗಳಲ್ಲಿ ಸಂಚರಿಸಿ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ನೀರನ್ನು ಕಂಡು ಸಿಡಿಮಿಡಿಗೊಂಡರಲ್ಲದೆ ತಕ್ಷಣವೇ ನೀರು ಸ್ಥಗಿತಗೊಳಿಸುವಂತೆ ನೀರುಗಂಟಿಗೆ ತಾಕೀತು ಮಾಡಿದರು. ಬಳಿಕ ಕಚೇರಿಗೆ ತೆರಳಿ ಸಿಬ್ಬಂದಿಯೊಂದಿಗೆ ಉಪಾಹಾರ ಸೇವಿಸಿ ಆಹಾರ ಪೂರೈಕೆಯ ಗುಣಮಟ್ಟ ಪರೀಕ್ಷಿಸಿದರು.

ಸಿಬ್ಬಂದಿಯ ಸಮಯ ಪಾಲನೆ, ಮೊಬೈಲ್ ಬಳಕೆ , ವಾರ್ಡ್‌ಗಳಿಗೆ ಕಾಟಾಚಾರದ ಭೇಟಿ ಕುರಿತಂತೆ ಅಗತ್ಯ ಮಾಹಿತಿ ಪಡೆದರು. ಪೌರಾಯುಕ್ತರ ಈ ಕ್ರಮದಿಂದ ಹಲವು ವರ್ಷಗಳಿಂದ ನಗರಸಭೆಯಲ್ಲಿ ಬೀಡುಬಿಟ್ಟಿರುವ ಕೆಲವು ನೌಕರರಿಗೆ ನಡುಕ ಹುಟ್ಟಿಸಿದೆ. ಪೌರಾಯುಕ್ತರ ವಿನೂತನ ಕ್ರಮ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.