ದುಬೈ: ಭಾರತದ ಎಡಗೈ ವೇಗಿ ಅರ್ಷದೀಪ್ ಸಿಂಗ್ 2024ರ ಸಾಲಿನ ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭಾರತದ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ 25 ವರ್ಷದ ಅರ್ಷದೀಪ್ಗೆ ಐಸಿಸಿ ಶನಿವಾರ ಈ ಪ್ರಶಸ್ತಿಯನ್ನು ಪ್ರಕಟಿಸಿದೆ.
ಕಳೆದ ವರ್ಷ 18 ಟಿ20 ಪಂದ್ಯಗಳನ್ನು ಆಡಿದ್ದ ಅರ್ಷದೀಪ್ 36 ವಿಕೆಟ್ ಕಬಳಿಸಿದ್ದರು. ಅಮೆರಿಕ-ವೆಸ್ಟ್ ಇಂಡೀಸ್ನಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಅರ್ಷದೀಪ್ 8 ಪಂದ್ಯಗಳಲ್ಲಿ 12.64ರ ಸರಾಸರಿಯಲ್ಲಿ 17 ವಿಕೆಟ್ ಕಬಳಿಸಿದ್ದರು. ಈ ಮೂಲಕ ಅಫ್ಘಾನಿಸ್ತಾನದ ಜಲ್ಲಾಕ್ ಫಾರೂಖಿ ಜತೆಗೆ ಟೂರ್ನಿಯ ಗರಿಷ್ಠ ವಿಕೆಟ್ ಸಾಧಕರೆಂಬ ಗೌರವ ಹಂಚಿಕೊಂಡಿದ್ದರು. ಫೈನಲ್ನಲ್ಲಿ ದ. ಆಫ್ರಿಕಾ ವಿರುದ್ಧದ 20 ರನ್ಗಳಿಗೆ 2 ವಿಕೆಟ್ ಕಬಳಿಸಿದ್ದರು. ಆಫ್ರಿಕಾ ಇನಿಂಗ್ಸ್ನ 19ನೇ ಓವರ್ನಲ್ಲಿ ಕೇವಲ 4 ರನ್ ಬಿಟ್ಟುಕೊಟ್ಟು ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.
ನ್ಯೂಜಿಲೆಂಡ್ ಮಹಿಳಾ ತಂಡದ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಆಲ್ರೌಂಡರ್ ಮೆಲಿ ಕೆರ್ ಐಸಿಸಿ ವರ್ಷದ ಮಹಿಳಾ ಟಿ20 ಕ್ರಿಕೆಟರ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ವರ್ಷದ ಟಿ20 ತಂಡಕ್ಕೆ ರೋಹಿತ್ ಶರ್ಮ ಸಾರಥ್ಯ
ಐಸಿಸಿ ವರ್ಷದ ಟಿ20 ತಂಡಕ್ಕೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಸಾರಥಿಯಾಗಿ ಆಯ್ಕೆಯಾಗಿದ್ದಾರೆ. ಈ ತಂಡದಲ್ಲಿ ಒಟ್ಟು ನಾಲ್ವರು ಭಾರತೀಯರು ಸ್ಥಾನ ಪಡೆದಿದ್ದಾರೆ. ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಈ ತಂಡದಲ್ಲಿರುವ ಇತರ ಮೂವರು ಭಾರತೀಯರಾಗಿದ್ದಾರೆ.
ಐಸಿಸಿ ವರ್ಷದ ಟಿ20 ತಂಡ: ರೋಹಿತ್ ಶರ್ಮ (ನಾಯಕ), ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್ (ಎಲ್ಲರೂ ಭಾರತ), ಟ್ರಾವಿಸ್ ಹೆಡ್ (ಆಸ್ಟ್ರೆಲಿಯಾ), ಫಿಲ್ ಸಾಲ್ಟ್ (ಇಂಗ್ಲೆಂಡ್), ಬಾಬರ್ ಅಜಮ್ (ಪಾಕಿಸ್ತಾನ), ನಿಕೋಲಸ್ ಪೂರನ್ (ವಿ.ಕೀ, ವೆಸ್ಟ್ ಇಂಡೀಸ್), ಸಿಕಂದರ್ ರಾಜಾ (ಜಿಂಬಾಬ್ವೆ), ರಶೀದ್ ಖಾನ್ (ಅಫ್ಘಾನಿಸ್ತಾನ), ವಾನಿಂದು ಹಸರಂಗ (ಶ್ರೀಲಂಕಾ).
ಮಹಿಳಾ ತಂಡದಲ್ಲಿ ಸ್ಮೃತಿ, ದೀಪ್ತಿ, ರಿಚಾ
ಎಡಗೈ ಆರಂಭಿಕ ಬ್ಯಾಟುಗಾರ್ತಿ ಸ್ಮೃತಿ ಮಂದನಾ, ವಿಕೆಟ್ ಕೀಪರ್-ಬ್ಯಾಟರ್ ರಿಚಾ ಘೋಷ್, ಆಲ್ರೌಂಡರ್ ದೀಪ್ತಿ ಶರ್ಮ ಐಸಿಸಿಯ 2024ರ ಸಾಲಿನ ವರ್ಷದ ಮಹಿಳಾ ಟಿ20 ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ. ಉಳಿದಂತೆ ದ. ಆಫ್ರಿಕಾದ ಇಬ್ಬರು, ಶ್ರೀಲಂಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಆಸ್ಟ್ರೆಲಿಯಾ, ಐರ್ಲೆಂಡ್, ಪಾಕಿಸ್ತಾನದ ತಲಾ ಒಬ್ಬರು ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ.
ಐಸಿಸಿ ವರ್ಷದ ಮಹಿಳಾ ಟಿ20 ತಂಡ: ಲೌರಾ ವೊಲ್ವಾರ್ಡ್ (ನಾಯಕಿ), ಮರಿಜಾನ್ ಕಾಪ್, ಸ್ಮೃತಿ ಮಂದನಾ, ರಿಚಾ ಘೋಷ್ (ವಿ.ಕೀ), ದೀಪ್ತಿ ಶರ್ಮ, ಚಾಮರಿ ಅಟಪಟ್ಟು, ಹ್ಯಾರಿ ಮ್ಯಾಥ್ಯೂಸ್, ನಾಟ್ ಸ್ಕೀವರ್-ಬ್ರಂಟ್, ಮೆಲೀ ಕೆರ್, ಒರ್ಲಾ ಪ್ರೆಂಡೆರ್ಗಸ್ಟ್, ಸಾದಿಯಾ ಇಕ್ಬಾಲ್.
ಶ್ರೀಲಂಕಾ ಮಾಜಿ ಕ್ರಿಕೆಟಿಗ ತಿಲಕರತ್ನೆ ದಿಲ್ಶಾನ್ ಪುತ್ರಿ ಕಿರಿಯರ ವಿಶ್ವಕಪ್ನಲ್ಲಿ ಶೈನಿಂಗ್!