ಪ್ರಚಾರದ ಹುಚ್ಚಿಗೆ ತನ್ನನ್ನೇ ಬಂಧಿಸಿಕೊಂಡಿದ್ದ!

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಬೈಂದೂರು ತಾಲೂಕು ಅರೆಹೊಳೆ ಕ್ರಾಸ್ ಕಿರಿಮಂಜೇಶ್ವರ ರಾಷ್ಟ್ರೀಯ ಹೆದ್ದಾರಿ-66 ಬಳಿ ಶನಿವಾರ ಕಾಲಿಗೆ ಸರಪಳಿ ಬಿಗಿದು ಗಿಡಕ್ಕೆ ಸುತ್ತಿ ಬೀಗ ಹಾಕಿದ ಅಮಾನವೀಯ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿ ಪ್ರಕರಣಕ್ಕೆ ವಿಚಿತ್ರ ತಿರುವು ಸಿಕ್ಕಿದೆ.

ವ್ಯಕ್ತಿಯನ್ನು ಬೈಂದೂರು ಠಾಣಾಧಿಕಾರಿ ತಿಮ್ಮೇಶ್ ವಿಚಾರಣೆ ನಡೆಸಿದಾಗ, ತಾನು ಕೇರಳ ಕೊಯಿಕ್ಕೋಡ್ ಜಿಲ್ಲೆ ಕಲ್ಲಾಚಿ ನಿವಾಸಿ ಸಯ್ಯದ್ ಕೊಯ ಎಂದು ಮಲಯಾಳದಲ್ಲಿ ತಿಳಿಸಿದ್ದನು. ಕೂಡಲೇ ಆತನನ್ನು ಮನೆಗೆ ಕಳುಹಿಸಲು ಬೈಂದೂರು ಪೊಲೀಸರು ಕೇರಳ ಪೊಲೀಸರ ನೆರವು ಕೋರಿದ್ದರು. ಮೇಲ್ನೋಟಕ್ಕೆ ಸಯ್ಯದ್ ಸ್ಥಳೀಯರಿಗೆ ತೊಂದರೆ ಕೊಟ್ಟಿದ್ದರಿಂದ ಯಾರೋ ಕಟ್ಟಿ ಹಾಕಿದ್ದಾರೆ ಎಂಬ ಅನುಮಾನ ಸೃಷ್ಟಿಯಾಗಿತ್ತು.
ಸಯ್ಯದ್ ಬೈಂದೂರು ಪೊಲೀಸ್ ಠಾಣೆಯಲ್ಲೇ ಒಂದು ದಿನ ಕಳೆದಿದ್ದು, ರಾತ್ರಿ ಹಾಗೂ ಬೆಳಗ್ಗೆ ಊಟೋಪಚಾರ ವ್ಯವಸ್ಥೆಯನ್ನೂ ಪೊಲೀಸರೇ ಮಾಡಿದ್ದರು. ಭಾನುವಾರ ಸಾಯಂಕಾಲ ಸಯ್ಯದ್ ಕುಟುಂಬಿಕರು ಬೈಂದೂರು ಠಾಣೆಗೆ ಆಗಮಿಸಿದ್ದು ಸಯ್ಯದ್‌ನನ್ನು ಕುಟುಂಬಿಕರಿಗೆ ಒಪ್ಪಿಸುವ ಸಂದರ್ಭ ಅಘಾತಕಾರಿ ಸುದ್ದಿ ಬಹಿರಂಗವಾಗಿದೆ.

ತನ್ನನ್ನು ತಾನೇ ಬಂಧಿಸಿಕೊಂಡಿದ್ದ!: ಪೊಲೀಸರ ವಿಚಾರಣೆ ವೇಳೆ ಸಯ್ಯದ್ ಹೇಳಿದ್ದು ಕೇಳಿ ಪೊಲೀಸರೇ ದಂಗಾಗಿ ಹೋಗಿದ್ದಾರೆ. ಕಾಲಿಗೆ ಸರಪಳಿ ಸುತ್ತಿ ಮರಕ್ಕೆ ಬೀಗ ಹಾಕಿಕೊಂಡಿದ್ದು ನಾನೇ. ಬೀಗ ಹಾಕಿದ ಬಳಿಕ ಬೀಗದ ಕೀ ಬಿಸಾಡಿದ್ದೇನೆ. ಹೀಗೆ ಮಾಡುವುದರಿಂದ ನನ್ನ ಫೋಟೋ ಮತ್ತು ಹೆಸರು ಪೇಪರ್, ಟಿವಿಗಳಲ್ಲಿ ಬರುತ್ತೆ. ಪೊಲೀಸರು ಬಂದು ನನ್ನನ್ನು ಕರೆದುಕೊಂಡು ಹೋಗುತ್ತಾರೆ. ಈ ಹಿಂದೆಯೂ ಮೂರು ಬಾರಿ ಹೀಗೆ ಮಾಡಿಕೊಂಡಿದ್ದೇನೆ. ಕಣ್ಣೂರಿನಲ್ಲಿಯೂ ಒಮ್ಮೆ ಹೀಗೆ ಮಾಡಿಕೊಂಡಿದ್ದೇನೆ ಎಂದು ಸಯ್ಯದ್ ಠಾಣಾಧಿಕಾರಿ ಮುಂದೆ ಹೇಳಿಕೊಂಡಿದ್ದಾನೆ.

ಸಯ್ಯದ್ ಎರಡು ಮೂರು ಬಾರಿ ಹೀಗೆಯೇ ಮಾಡಿಕೊಂಡಿದ್ದಾನೆ. ಪೊಲೀಸರು ಫೋನ್ ಮಾಡಿ ತಿಳಿಸಿದ ಬಳಿಕ ಠಾಣೆಗೆ ಹೋಗಿ ಕರೆದುಕೊಂಡು ಬಂದಿದ್ದೇವೆ. ಇದೀಗ ಇಲ್ಲಿಯೂ ಹೀಗೆ ಮಾಡಿಕೊಂಡಿದ್ದಾನೆ. ಈಗಲೂ ಕರೆದುಕೊಂಡು ಮನೆಯಲ್ಲಿ ಬಿಟ್ಟರೆ ಮತ್ತೆ ಬೇರೆಲ್ಲಾದರೂ ಹೋಗುತ್ತಾನೆ.
| ಸಯ್ಯದ್ ಮನೆಯವರು