ಸಮಾಜಘಾತುಕರ ಬಂಧನಕ್ಕೆ ಮನವಿ

ವಿಜಯವಾಣಿ ಸುದ್ದಿಜಾಲ ಹಾವೇರಿ

ಕೊಪ್ಪಳ ಜಿಲ್ಲೆಯ ಆನೆಗುಂದಿಯಲ್ಲಿನ ಯತಿವರ್ಯ ವ್ಯಾಸರಾಯರ ವೃಂದಾವನವನ್ನು ಧ್ವಂಸ ಮಾಡಿರುವ ಸಮಾಜಘಾತುಕರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಬ್ರಾಹ್ಮಣ ಪರಿಷತ್​ನಿಂದ ಶುಕ್ರವಾರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಮನವಿ ಸಲ್ಲಿಕೆಗೂ ಮುನ್ನ ಸ್ಥಳೀಯ ರಾಜೇಂದ್ರನಗರದಲ್ಲಿರುವ ದತ್ತ ಮಂದಿರದ ಆವರಣದಲ್ಲಿ ಸಭೆ ನಡೆಸಿದ ಬ್ರಾಹ್ಮಣ ಪರಿಷತ್ ಪದಾಧಿಕಾರಿಗಳು, ಆನೆಗುಂದಿ ಬಳಿ 9 ಯತಿಗಳ ವೃಂದಾವನಗಳಿವೆ. ಅದರಲ್ಲಿ ವ್ಯಾಸರಾಯರ ವೃಂದಾವನಕ್ಕೆ ವಿಶೇಷ ಮಹತ್ವವಿದೆ. ಇಂತಹ ಪವಿತ್ರ ಸ್ಥಳವನ್ನು ಕೆಲ ಕಿಡಿಗೇಡಿಗಳು ಉದ್ದೇಶ ಪೂರ್ವಕವಾಗಿ ಧ್ವಂಸಗೊಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದು ಕೇವಲ ಒಬ್ಬ ವ್ಯಕ್ತಿಯ ಕೃತ್ಯವಾಗಿಲ್ಲ. ಒಂದು ಗುಂಪಿನಿಂದ ನಡೆದ ಕೃತ್ಯವಾಗಿದೆ. ನಮ್ಮ ಸಂಸ್ಕೃತಿಗೆ ಮಾಡಿರುವ ಅಪಮಾನವಾಗಿದೆ. ಕನಕದಾಸರು ಹಾಗೂ ಪುರಂದರದಾಸರಿಗೆ ಗುರು ಎನಿಸಿಕೊಂಡಿದ್ದ ವ್ಯಾಸರಾಯರ ಸಮಾಧಿ ಸ್ಥಳದ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಸರ್ಕಾರದ ವೆಚ್ಚದಲ್ಲಿಯೇ ವೃಂದಾವನವನ್ನು ನಿರ್ವಿುಸಿ ಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ತಾಲೂಕು ಬ್ರಾಹ್ಮಣ ಪರಿಷತ್​ನ ಪದಾಧಿಕಾರಿಗಳಾದ ಪ್ರಕಾಶ ಜೋಶಿ, ವಾಸಣ್ಣ ಹತ್ತಿಮತ್ತೂರ, ನಾಗರಾಜ ಗಡಗಿ, ಸುರೇಶ ಕಡಕೊಳ, ರಮೇಶ ಪಾಟೀಲ, ಆರ್.ಎಂ. ಕುಲಕರ್ಣಿ, ಮಾಲತೇಶ ಕರ್ಪರ, ಮಾಲತೇಶ ಕುರ್ತಕೋಟಿ, ರಮೇಶ ಕುಲಕರ್ಣಿ, ಶಶಿಧರ ಲಕ್ಷೆ್ಮೕಶ್ವರ, ರವಿ ಕುಲಕರ್ಣಿ, ಶ್ರೀನಿವಾಸ ಪ್ರಯಾಗ, ಗೋವಿಂದ ಕುಲಕರ್ಣಿ, ಗಿರೀಶ ರಾಜಪುರೋಹಿತ, ರಾಘವೇಂದ್ರ ಕುಲಕರ್ಣಿ, ಪ್ರಲ್ಹಾದ್ ಅಳಂದಿಕರ, ಹನುಮಂತನಾಯ್ಕ ಬದಾಮಿ ಇತರರಿದ್ದರು.

Leave a Reply

Your email address will not be published. Required fields are marked *