ದೇವದುರ್ಗ: ತಾಲೂಕಿನ ಜಾಲಹಳ್ಳಿಯಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿರುವ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ಜಾಲಹಳ್ಳಿ ನಾಡ ಕಚೇರಿ ಮುಂದೆ ಸಮಾನ ಮನಸ್ಕರ ವೇದಿಕೆ ಮುಖಂಡರು ಬುಧವಾರ ಪ್ರತಿಭಟನೆ ನಡೆಸಿದರು.
ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಕೆರಿಲಿಂಗಪ್ಪ ನಾಡಗೌಡ ಮಾತನಾಡಿ, ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಹೊಡೆದ ಘಟನೆ ಈಡಿ ನಾಗರಿಕ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ. ಎಲ್ಲೋ ದೂರದ ರಾಜ್ಯಗಳಲ್ಲಿ ನಡೆಯುತ್ತಿದ್ದ ಇಂಥ ಘಟನೆಗಳು ನಮ್ಮಲ್ಲಿಗೆ ಕಾಲಿಟ್ಟಿದ್ದು ದುರಂತವೇ ಸರಿ. ಮರಕ್ಕೆ ಕಟ್ಟಿಹಾಕುವ ಸಂದರ್ಭದಲ್ಲಿ ಪೊಲೀಸರು ಸ್ಥಳದಲ್ಲಿ ಇದ್ದರೂ ಅಸಹಾಯಕರಾಗಿ ನಿಂತಿದ್ದು ನೋಡಿದರೆ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಇದೆಯೋ ಸತ್ತಿದಿಯೋ ಎನ್ನುವ ಅನುಮಾನ ಮೂಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೇ ತಪ್ಪು ಮಾಡಿದರೆ ಶಿಕ್ಷೆ ನೀಡಲು ಕಾನೂನು ವ್ಯವಸ್ಥೆ ಇದೆ. ಹಿಂದಿನ ಕಾಲದ ಪಾಳೆಗಾರರಂತೆ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ಮಾಡುವುದು ನೋಡಿಕೊಂಡು ಸುಮ್ಮನೆ ಇರುವುದು ನಾಗರಿಕ ಸಮಾಜಕ್ಕೆ ಒಳೆಯದಲ್ಲ. ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಬಸವರಾಜ ನಾಯಕ ಸೇರಿ ಹಲ್ಲೆ ಮಾಡಿದವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಸಂತ್ರಸ್ಥ ಮಹಿಳೆಗೆ ಸೂಕ್ತ ಪರಿಹಾರ ಹಾಗೂ ಕುಟುಂಬಕ್ಕೆ ಭದ್ರತೆ ಒಗಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಅಮರೇಶ ನಾಯಕ, ಲಿಂಗಣ್ಣ ನಾಯಕ, ಶರಣಬಸವ ನಾಯಕ, ರಮೇಶ ಬಾವಿಮನಿ, ಯಲ್ಲಪ್ಪ ಗಚ್ಚಿನಮನಿ, ನಾಗರಾಜ ಮ್ಯಾಕಲದೊಡ್ಡಿ, ಮುದ್ದಪ್ಪ ಬಂಡಿ, ರಂಗನಾಥ ಬೊಮ್ಮನಹಳ್ಳಿ, ವೆಂಕಟೇಶ ಮುಟ್ಟಹಳ್ಳಿ ಇತರರಿದ್ದರು.