More

  ಕೊಲೆಗೆ ಯತ್ನಿಸಿದ ಇಬ್ಬರ ಬಂಧನ

  ಹಾಸನ: ಆಸ್ತಿಗಾಗಿ ತಾಯಿ ಹಾಗೂ ಸಹೋದರಿಯರ ಕೊಲೆಗೆ ಯತ್ನಿಸಿದ್ದ ಪುತ್ರ ಹಾಗೂ ಆತನ ಸ್ನೇಹಿತನನ್ನು ಶಾಂತಿಗ್ರಾಮ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  ತಾಲೂಕಿನ ಸಾತೇನಹಳ್ಳಿ ಗ್ರಾಮದ ಗಂಗಾಧರ್(25) ಹಾಗೂ ಸ್ನೇಹಿತ ಕಿರಣ್(26) ಬಂಧಿತರು. ಜಮೀನಿನಲ್ಲಿ ಪಾಲು ಕೇಳುತ್ತಿದ್ದಾರೆಂಬ ಹಿನ್ನೆಲೆಯಲ್ಲಿ ಗಂಗಾಧರ್ ತನ್ನ ತಾಯಿ, ಇಬ್ಬರು ಸಹೋದರಿಯರನ್ನು ಭಾನುವಾರ ರಾತ್ರಿ ಕೆರೆಗೆ ತಳ್ಳಿದ್ದ. ಈ ವೇಳೆ ಸುಧಾ (28) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.

  ಘಟನೆ ಹಿನ್ನೆಲೆ: ಸಾತೇನಹಳ್ಳಿ ಗ್ರಾಮದ ಮೊಗಣ್ಣಮ್ಮ ಅವರಿಗೆ ಪುತ್ರಿಯರಾದ ಸುಧಾ, ಪವಿತ್ರಾ ಹಾಗೂ ಪುತ್ರ ಗಂಗಾಧರ್ ಇದ್ದರು. ಮೊಗಣ್ಣಮ್ಮ ಕೌಶಿಕ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿದ್ದು, ಗಂಗಾಧರ್ ಆಟೋ ಓಡಿಸಿಕೊಂಡಿದ್ದ. ಹಾಸನದ ಕೈಗಾರಿಕಾ ಪ್ರದೇಶದಲ್ಲಿ 22 ಗುಂಟೆ ಜಮೀನಿದ್ದು, ಅದನ್ನು ಮೊಗಣ್ಣಮ್ಮ ಎಲ್ಲ ಮಕ್ಕಳಿಗೂ ಸಮಾನವಾಗಿ ಹಂಚುವುದಾಗಿ ಹೇಳಿದ್ದರು. ಇದರಿಂದ ಆಕ್ರೋಶಗೊಂಡ ಗಂಗಾಧರ್ ಎಲ್ಲರನ್ನೂ ಕೊಲ್ಲಲು ನಿರ್ಧರಿಸಿದ್ದ.

  ಡಿ.28ರ ರಾತ್ರಿ 12.30ರ ಸಮಯದಲ್ಲಿ ಕಂಪನಕಟ್ಟೆ ಕೆರೆ ಏರಿ ಮೇಲೆ ಆಟೋ ಅಪಘಾತಕ್ಕೀಡಾಗಿದ್ದು, ಗಂಗಾಧರ್‌ಗೆ ತೀವ್ರ ಗಾಯವಾಗಿದೆ ಎಂದು ಸ್ನೇಹಿತ ಕಿರಣ್ ಮೂಲಕ ಫೋನ್ ಮಾಡಿ ಸುಳ್ಳು ಹೇಳಿಸಿದ್ದ. ಮಧ್ಯರಾತ್ರಿ ಗಾಬರಿಯಲ್ಲಿ ಮೊಗಣ್ಣಮ್ಮ, ಸುಧಾ ಹಾಗೂ ಪವಿತ್ರಾ ಸ್ಥಳಕ್ಕೆ ಬಂದು ನೋಡಿದಾಗ ಯಾವುದೇ ಅಪಘಾತ ಆಗದಿರುವ ವಿಷಯ ತಿಳಿಯಿತು. ಕುಟುಂಬ ಸದಸ್ಯರೆಲ್ಲರೂ ಸ್ಥಳಕ್ಕೆ ಬರುತ್ತಿದ್ದಂತೆ ಜಗಳ ಆರಂಭಿಸಿದ ಗಂಗಾಧರ್ ಮೂವರನ್ನು ಕೆರೆಗೆ ತಳ್ಳಿ ಮುಳುಗಿಸಿ ಕೊಲ್ಲಲು ಯತ್ನಿಸಿದ್ದ. ಆಳವಾದ ನೀರಿನಲ್ಲಿ ಮುಳುಗಿದ್ದ ಸುಧಾ ಮೃತಪಟ್ಟು, ಪವಿತ್ರಾ ಹಾಗೂ ಮೊಗಣ್ಣಮ್ಮ ಬದುಕಿದರು.

  ಸ್ನೇಹಿತ ಕಿರಣ್‌ನ ನೆರವಿನಿಂದ ತಾಯಿ ಹಾಗೂ ಅಕ್ಕಂದಿರನ್ನು ಕೆರೆಯಲ್ಲಿ ಮುಳುಗಿಸಿದ್ದ ಗಂಗಾಧರ್ ತನ್ನ ಕಾರ್ಯ ಸಫಲವಾಯಿತೆಂದು ಅಲ್ಲಿಂದ ಪರಾರಿಯಾಗಿದ್ದ. ಆದರೆ ಕೆರೆ ಏರಿ ಮೇಲಿನ ಚೀರಾಟ ಕೇಳಿ ಸ್ಥಳೀಯರು ಬಂದು ಇಬ್ಬರನ್ನೂ ರಕ್ಷಿಸಿದರು.

  ಪ್ರಕರಣ ದಾಖಲಿಸಿಕೊಂಡಿದ್ದ ಶಾಂತಿಗ್ರಾಮ ಠಾಣೆ ಪೊಲೀಸರು ಹಾಸನದ ಶ್ರೀರಾಮನಗರದಲ್ಲಿ ಗಂಗಾಧರ್ ಹಾಗೂ ಕಿರಣ್‌ನನ್ನು ಬಂಧಿಸಿದ್ದಾರೆ. ಸಿಪಿಐ ಸತ್ಯನಾರಾಯಣ, ಗ್ರಾಮಾಂತರ ಠಾಣೆ ಎಸ್‌ಐ ಎಸ್.ಕೆ. ಕೃಷ್ಣ, ಮುಖ್ಯ ಪೇದೆ ಸುಬ್ರಹ್ಮಣ್ಯ, ನಿಶಾಂತ್, ಜುಲ್ಪೀಕರ್ ಬೇಗ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts