ಬೀಟೆ ಮರದ ನಾಟಾ ಸಾಗಿಸುತ್ತಿದ್ದ ಇಬ್ಬರ ಬಂಧನ

ಕುಶಾಲನಗರ: ಬೀಟೆ ಮರದ ನಾಟಾಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆ ಅಧಿಕಾರಿಗಳು ಮಾಲು ಸಹಿತ ಎರಡು ವಾಹನಗಳನ್ನು ವಶಕ್ಕೆ ಪಡೆದು, ಇಬ್ಬರನ್ನು ಬಂಧಿಸಿದ್ದಾರೆ.

ವಾಲ್ನೂರು ತ್ಯಾಗತ್ತೂರು ಗ್ರಾಮದ ಅಬ್ದುಲ್ ನಸೀರ್ (37), ಅಬ್ದುಲ್ ಮನಾಫ್ (30) ಬಂಧಿತರು.
ಕುಶಾಲನಗರ-ಸಿದ್ದಾಪುರ ಮುಖ್ಯರಸ್ತೆಯ ಬಾಳೆಗುಂಡಿ ಬಳಿ ಕಾರಿನಲ್ಲಿ ಬೀಟೆ ಮರದ 6 ನಾಟಾಗಳನ್ನು ಅಬ್ದುಲ್ ನಾಸಿರ್ ಮತ್ತು ಅಬ್ದುಲ್ ಮನಾಫ್ ಸಾಗಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ 5 ಲಕ್ಷ ರೂ. ಮೌಲ್ಯದ ವಾಹನ ಮತ್ತು ಮಾಲನ್ನು ವಶಪಡಿಸಿಕೊಂಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಅರಣ್ಯ ತನಿಖಾ ಠಾಣೆ ಸಮೀಪ ಮಾರುತಿ ಓಮ್ನಿ ವ್ಯಾನೊಂದನ್ನು ತಡೆದು ತಪಾಸಣೆ ಮಾಡಿದ ವೇಳೆ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ವ್ಯಾನನ್ನು ಪರಿಶೀಲಿಸಿದಾಗ ಅದರೊಳಗೆ ಬೀಟೆ ಮರದ 8 ನಾಟಾಗಳು ಪತ್ತೆಯಾಗಿವೆ. ವಶಪಡಿಸಿಕೊಂಡ ಮಾಲು ಮತ್ತು ವಾಹನದ ಮೌಲ್ಯ 2 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ವಲಯ ಅರಣ್ಯಾಧಿಕಾರಿ ಸಿ.ಆರ್.ಅರುಣ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಕೆ.ಐ.ವಿಲಾಸ್, ಎನ್.ಎಲ್.ಚೇತನ್, ಅರಣ್ಯ ರಕ್ಷಕರಾದ ಚರಣ್‌ಕುಮಾರ್, ಅರಣ್ಯ ವೀಕ್ಷಕರಾದ ಸಂತೋಷ್ ಹಾವನೂರು, ಬಿ.ಎಚ್.ಧರ್ಮಪಾಲ, ಟಿ.ಕೆ.ದಿನೇಶ್, ಮಂಜುನಾಥ್, ಮೇದಪ್ಪ, ವಾಹನ ಚಾಲಕರಾದ ಬಿ.ಆರ್.ಸತೀಶ್, ವಾಸು ಹಾಗೂ ನಾರಾಯಣ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *