ಸಿದ್ದಾಪುರ: ತಾಲೂಕಿನ ಕಾಳೇನಳ್ಳಿ ಸಮೀಪ ಸೊರಬ ತಾಲೂಕಿನ ಚಿಕ್ಕ ತೌಡತ್ತಿಯ ಸಂತೋಷ ಗಣಪತಿ ನಾಯ್ಕನ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಾಲೂಕಿನ ಚನ್ನಮಾವಿನ ವಾಹನ ಚಾಲಕ ಹೇಮಂತ ಗಣಪತಿ ನಾಯ್ಕ ಹಾಗೂ ಅದೇ ಊರಿನ ಶಾಮಿಯಾನ ಕೆಲಸಮಾಡುವ ಶಿವಕುಮಾರ್ ನಾರಾಯಣ ನಾಯ್ಕ ಬಂಧಿತ ಆರೋಪಿಗಳು. ಇವರನ್ನು ತಾಳಗುಪ್ಪದಿಂದ ರೈಲಿನ ಮೂಲಕ ಬೆಂಗಳೂರಿಗೆ ತೆರಳುವ ಮಾರ್ಗದ ಕವಂಚೂರು ಸಮೀಪ ಬಂಧಿಸಲಾಗಿದೆ.
ಜಿಲ್ಲೆಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದ್ದು ಸಂತೋಷ ನಾಯ್ಕ ಆತ್ಮಹತ್ಯೆಗೂ ಮೊದಲು ಆಡಿಯೋ ಒಂದನ್ನು ಮಾಡಿ ಬಿಟ್ಟು ಕೆಲವು ಯುವಕರ ಹೆಸರನ್ನು ಹೇಳಿದ್ದರು. ಅಲ್ಲದೇ ತಾಲೂಕಿನ ಕೆಲ ಯುವಕರು ಹೈಸ್ಕೂಲು ಹೆಣ್ಣುಮಕ್ಕಳನ್ನು ನಂಬಿಸಿ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದ. ಇದೇ ವಿಚಾರ ರಾಜಕೀಯ ಆರೋಪ ಪ್ರತ್ಯಾರೋಪಗಳಿಗೂ ಕಾರಣವಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಹಿಡಿಯಲು ವಿಶೇಷ ತಂಡ ರಚಿಸಿ ಶೋಧ ಕಾರ್ಯ ನಡೆಸಿದ್ದು ಪ್ರಮುಖ ಆರೋಪಿಗಳು ತಲೆ ಮರೆಸಿಕೊಂಡಿರುವುದರಿಂದ ಅವರನ್ನು ಬಂಧಿಸಿ ಪ್ರಕರಣವನ್ನು ಸಂಪೂರ್ಣವಾಗಿ ಬೇಧಿಸಿದರೆ ಘಟನೆಯ ಸತ್ಯಾಸತ್ಯತೆ ತಿಳಿದುಬರಲಿದೆ.
ಅಮಾನತು
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಅಡಿಯಲ್ಲಿ ಎಸ್ಪಿ ಎಂ.ನಾರಾಯಣ ಅವರು ಸಿದ್ದಾಪುರ ಠಾಣೆಯ ಕಾನ್ಸ್ಟೇಬಲ್ಗಳಾದ ಪ್ರಶಾಂತಕುಮಾರ ಬಿ. ಹಾಗೂ ಮೋಹನ ಗಾವಡಿ ಎನ್ನುವವರನ್ನು ಅಮಾನತು ಮಾಡಿದ್ದಾರೆ.