ಫೊನಿ ಚಂಡಮಾರುತದ ಪ್ರಭಾವದಿಂದ ನಲುಗಲಿವೆ ಒಡಿಶಾದ 10 ಸಾವಿರ ಗ್ರಾಮಗಳು, 52 ಪಟ್ಟಣಗಳು

ನವದೆಹಲಿ: ಫೊನಿ ಚಂಡಮಾರುತ ಭೂಮಿಗೆ ಅಪ್ಪಳಿಸುವ ಕ್ಷಣ ಹತ್ತಿರಾಗುತ್ತಿರುವಂತೆ ಅದರಿಂದ ಬಾಧಿತಗೊಳ್ಳುವ ಪ್ರದೇಶ, ವ್ಯಾಪ್ತಿಗಳ ಕುರಿತು ಚರ್ಚೆಗಳು ಆರಂಭವಾಗಿವೆ. ಪುರಿಯ ದಕ್ಷಿಣ ಭಾಗದಲ್ಲಿ ಶುಕ್ರವಾರ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ. ಇದರಿಂದಾಗಿ 10 ಸಾವಿರ ಗ್ರಾಮಗಳು ಮತ್ತು 52 ಪಟ್ಟಣಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈಗಾಗಲೆ 11.5 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳಿಸಲಾಗುತ್ತಿದೆ. ಇವರ ಪೈಕಿ 3.3 ಲಕ್ಷ ಜನರನ್ನು ಈಗಾಗಲೆ ಸ್ಥಳಾಂತರಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ಮಧ್ಯರಾತ್ರಿಯಿಂದಲೇ ಭುವನೇಶ್ವರ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಕೋಲ್ಕತ ವಿಮಾನ ನಿಲ್ದಾಣದಲ್ಲಿ ಕೂಡ ವಿಮಾನಗಳ ಸಂಚಾರ ಶುಕ್ರವಾರ ಬೆಳಗ್ಗೆಯಿಂದ ರದ್ದಗೊಳ್ಳಲಿದೆ. ಪರಿಸ್ಥಿತಿ ಸುಧಾರಣೆಯಾದಂತೆ ವಿಮಾನ ಸಂಚಾರವನ್ನು ಆರಂಭಿಸುವ ಬಗ್ಗೆ ಅಧಿಕಾರಿಗಳು ನಿರ್ಧರಿಸಲಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣೆ ಸಮಿತಿಗೆ ಮಾಹಿತಿ
ಫೊನಿ ಚಂಡಮಾರುತದಿಂದ 10 ಸಾವಿರ ಗ್ರಾಮಗಳು ಮತ್ತು 52 ಪಟ್ಟಣಗಳು ತೊಂದರೆಗೀಡಾಗುವ ಸಾಧ್ಯತೆ ಇರುವುದಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿಗೆ (ಎನ್​ಸಿಎಂಸಿ) ಮಾಹಿತಿ ನೀಡಲಾಗಿದೆ. ಈ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಎನ್​ಸಿಎಂಸಿಗೆ ಮನವಿ ಮಾಡಿಕೊಂಡಿರುವುದಾಗಿ ಒಡಿಶಾದ ಸಂಪುಟ ಕಾರ್ಯದರ್ಶಿ ಪಿ.ಕೆ. ಸಿನ್ಹಾ ತಿಳಿಸಿದ್ದಾರೆ.

ಈಗಾಗಲೆ 900 ಶಿಬಿರಗಳನ್ನು ತೆರೆಯಲಾಗಿದ್ದು, ಅಲ್ಲಿಗೆ ಜನರನ್ನು ಸ್ಥಳಾಂತರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಹಾನಿಗೊಳಗಾಗಬಹುದಾದ ಪ್ರದೇಶಗಳ ಬಗ್ಗೆ ಮಾಹಿತಿ ನೀಡಿದ ಅವರು, ಗಂಜಾಂ, ಗಜಪತಿ, ಪುರಿ, ಖುರ್ದಾ, ಜಗತ್​ಸಿಂಗ್​ಪುರ, ಕೇಂದ್ರಪಾರಾ, ಭದ್ರಕ್​, ಜಜ್ಪುರ್​ ಮತ್ತು ಬಲ್ಸೋರ್​, ಪಶ್ಚಿಮ ಬಂಗಾಳದ ಪೂರ್ವ ಮತ್ತು ಪಶ್ಚಿಮ ಮಿಡ್ನಾಪುರ, ದಕ್ಷಿಣ ಮತ್ತು ಉತ್ತರ 24 ಪರಾಗಣ, ಹೌರಾ, ಹೂಗ್ಲಿ, ಜಾರ್ಗಾಮ್​ ಅಲ್ಲದೆ ಕೋಲ್ಕತ ನಗರ ಕೂಡ ಹಾನಿಗೊಳಗಾಗಬಹುದು ಎಂದು ಹೇಳಿದ್ದಾರೆ. (ಏಜೆನ್ಸೀಸ್​)