ವಿಜಯವಾಣಿ ವರದಿ ಪರಿಣಾಮ: ಆರೋಗ್ಯ ಕರ್ನಾಟಕ ಯೋಜನೆ ರದ್ದಾಗಲ್ಲ

ಬೆಂಗಳೂರು: ಬಡವರಿಗೆ ಉಚಿತ ಆರೋಗ್ಯ ಸೇವೆ ಒದಗಿಸುತ್ತಿರುವ ಆರೋಗ್ಯ ಕರ್ನಾಟಕ ಯೋಜನೆ ರದ್ದಾಗುವ ಕುರಿತು ವಿಜಯವಾಣಿ ಪ್ರಕಟಿಸಿದ ವಿಶೇಷ ವರದಿಯಿಂದ ಎಚ್ಚೆತ್ತಿರುವ ರಾಜ್ಯ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.

ಆಯುಷ್ಮಾನ್ ಭಾರತದ ಜತೆಯಲ್ಲೇ ಆರೋಗ್ಯ ಕರ್ನಾಟಕ ಯೋಜನೆ ಮುಂದುವರಿಯುವ ಭರವಸೆ ಸಿಕ್ಕಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಆರೋಗ್ಯ ಕರ್ನಾಟಕ ಯೋಜನೆ ರದ್ದುಪಡಿಸಿದಲ್ಲಿ 53 ಲಕ್ಷ ಬಿಪಿಎಲ್ ಹಾಗೂ 19 ಲಕ್ಷ ಎಪಿಎಲ್ ಕುಟುಂಬಗಳು ಈವರೆಗೆ ಸಿಗುತ್ತಿದ್ದ ಆರೋಗ್ಯ ಸೇವೆಯಿಂದ ವಂಚಿತವಾಗಲಿವೆ ಎಂದು 53 ಲಕ್ಷ ಕುಟುಂಬಕ್ಕಿಲ್ಲ ಆರೋಗ್ಯ ಕರ್ನಾಟಕ ಶೀರ್ಷಿಕೆಯಡಿ ಸೋಮವಾರ ವಿಜಯವಾಣಿ ವಿಶೇಷ ವರದಿ ಪ್ರಕಟಿಸಿತ್ತು.

ಆರೋಗ್ಯ ಸಚಿವ ಶ್ರೀರಾಮುಲು ಈ ವಿಚಾರವಾಗಿ ಮಾಧ್ಯಮಗಳ ಜತೆ ಮಾಹಿತಿ ಹಂಚಿಕೊಂಡರು. ಆರೋಗ್ಯ ಕರ್ನಾಟಕ ಯೋಜನೆ ರದ್ದುಪಡಿಸಿ ಕೇವಲ ಆಯುಷ್ಮಾನ್ ಭಾರತ ಯೋಜನೆಯನ್ನಷ್ಟೇ ಉಳಿಸಿಕೊಳ್ಳುವುದರಿಂದ ಆಗುವ ಸಾಧಕ-ಬಾಧಕಗಳ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ರ್ಚಚಿಸಲಾಯಿತು. ಆರೋಗ್ಯ ಕರ್ನಾಟಕ ಯೋಜನೆ ಬಿಪಿಎಲ್ ಮತ್ತು ಎಪಿಎಲ್ ಕುಟುಂಬಗಳಿಗೆ ಪ್ರಯೋಜನಕಾರಿ ಎಂದು ತಿಳಿಯಿತು. ಹೀಗಾಗಿ ಯೋಜನೆಯಲ್ಲಿ ಯಾವುದೇ ಬದಲಾವಣೆ ತರುವುದಿಲ್ಲ ಎಂದರು.

ಈಗಿರುವ ಆಯುಷ್ಮಾನ್ ಭಾರತ ಹಾಗೂ ಆರೋಗ್ಯ ಕರ್ನಾಟಕ ಯೋಜನೆ ರೂಪದಲ್ಲೇ ಮುಂದುವರಿಯಲಿದೆ ಎಂದು ರಾಮುಲು ಹೇಳಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಜಾರಿಗೆ ತಂದಿದ್ದ ಆರೋಗ್ಯ ಕರ್ನಾಟಕ ಯೋಜನೆಯನ್ನು ರದ್ದುಪಡಿಸಿ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ ಯೋಜನೆಯನ್ನು ಮಾತ್ರ ಅನುಷ್ಠಾನಗೊಳಿಸುವುದಾಗಿ ಆರೋಗ್ಯ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದರು.

ಎರಡೂ ವಿಲೀನ: ಕಳೆದ ವರ್ಷ ಮಾರ್ಚ್​ನಲ್ಲಿ ರಾಜ್ಯ ಸರ್ಕಾರ ‘ಅರೋಗ್ಯ ಕರ್ನಾಟಕ’ ಯೋಜನೆಯನ್ನು ಜಾರಿಗೊಳಿಸಿತ್ತು. ನಂತರ ಕೇಂದ್ರ ಸರ್ಕಾರ ‘ಅಯುಷ್ಮಾನ್ ಭಾರತ’ ಯೋಜನೆಗೆ ಚಾಲನೆ ನೀಡಿದ್ದು, ಅಕ್ಟೋಬರ್​ನಲ್ಲಿ ಎರಡೂ ಯೋಜನೆಗಳು ವಿಲೀನಗೊಂಡು ‘ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ’ ಎಂದಾಯಿತು. ಇದರಿಂದ ಯೋಜನೆಯಡಿ 53 ಲಕ್ಷ ಬಿಪಿಎಲ್ ಹಾಗೂ 19 ಎಪಿಎಲ್ ಕುಟುಂಬಗಳು ಸೌಲಭ್ಯ ಪಡೆಯುವಂತಾಯಿತು.

ಯೋಜನೆಯಲ್ಲಿ ಪ್ರತಿ ಕುಟುಂಬಕ್ಕೆ 5 ಲಕ್ಷ: ‘ಆಯುಷ್ಮಾನ್ ಭಾರತ’ ಯೋಜನೆಯಿಂದ ಕೇವಲ 62.09 ಕೋಟಿ ಕುಟುಂಬಗಳಿಗೆ ಮಾತ್ರ ಅರೋಗ್ಯ ಸೇವೆ ದೊರೆಯುತ್ತಿತ್ತು. ಅದರೆ ‘ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ’ ವಿಲೀನದಿಂದಾಗಿ 1.15 ಕೋಟಿ ಬಿಪಿಎಲ್ ಕುಟುಂಬಗಳಿಗೆ ಸಂಪೂರ್ಣ ಉಚಿತ ಹಾಗೂ 19 ಕೋಟಿ ಎಪಿಎಲ್ ಕುಟುಂಬಗಳಿಗೆ ಶೇ. 30 ರಿಯಾಯಿತಿ ದರದಲ್ಲಿ ಸೇವೆ ದೊರೆಯಲಿದೆ. 5 ಮಂದಿ ಇರುವ ಬಿಪಿಎಲ್ ಕುಟುಂಬಕ್ಕೆ 5 ಲಕ್ಷ ರೂ. ವರೆಗೆ ಅರೋಗ್ಯ ಸೇವೆ ದೊರೆಯಲಿದೆ. 1600ಕ್ಕೂ ಹೆಚ್ಚು ಬಗೆಯ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ದೊರೆಯಲಿದೆ.

Leave a Reply

Your email address will not be published. Required fields are marked *