ತುರ್ತು ಚಿಕಿತ್ಸೆಗೆ ಕಾಯ್ದೆ ತಿದ್ದುಪಡಿ ತರಲು ಚಿಂತನೆ: ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಜಾರಿ ಎಡರು-ತೊಡರು

| ವಿಲಾಸ ಮೇಲಗಿರಿ,

ಬೆಂಗಳೂರು: ಬಡವರಿಗೆ 5 ಲಕ್ಷ ರೂ.ವರೆಗಿನ ನಗದು ರಹಿತ ಚಿಕಿತ್ಸೆ ನೀಡುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷಿ ಯೋಜನೆ ‘ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ’ ಜಾರಿ ಹಲವು ಎಡರು ತೊಡರು ಎದುರಿಸುತ್ತಿದೆ. ಗಂಭೀರ ಅಪಘಾತ, ತುರ್ತು ಚಿಕಿತ್ಸೆ ಹಾಗೂ ಪ್ರವಾಹದಂತಹ ಸಂದರ್ಭಗಳಲ್ಲಿ ನಿರ್ದಿಷ್ಟ ದಾಖಲೆಗಳನ್ನು ಒದಗಿಸಲು ಸಾಧ್ಯವಾಗದ ರೋಗಿಗಳಿಗೆ ಈ ಯೋಜನೆಯ ಪ್ರಯೋಜನ ಪಡೆಯುವುದೇ ಪ್ರಯಾಸವಾಗಿದೆ. ಇದನ್ನರಿತ ಆರೋಗ್ಯ ಇಲಾಖೆ, ಕಾಯ್ದೆಗೆ ತಿದ್ದುಪಡಿ ತರಲು ಚಿಂತಿಸಿದೆ.

ಸಾಮಾನ್ಯ ಜನರು ಗಂಭೀರ ಕಾಯಿಲೆಗಳು ಕಾಣಿಸಿಕೊಂಡಾಗ ಪಡುವ ಪಾಡು ಅಷ್ಟಿಷ್ಟಲ್ಲ. ಜೀವಮಾನವಿಡೀ ದುಡಿದ ಹಣವನ್ನೆಲ್ಲ ಚಿಕಿತ್ಸೆಗೆ ಭರಿಸುತ್ತಾರೆ. ಇನ್ನೂ ಲಕ್ಷಾಂತರ ಜನರು ಸಾಲ, ಆಸ್ತಿ ಮಾರಾಟ ಮಾಡುತ್ತಾರೆ. ಇದನ್ನು ಮನಗಂಡ ಕೇಂದ್ರ ಸರ್ಕಾರ ‘ಆಯುಷ್ಮಾನ್ ಭಾರತ’, ರಾಜ್ಯ ಸರ್ಕಾರ ‘ಆರೋಗ್ಯ ಕರ್ನಾಟಕ’ ಯೋಜನೆ ತಂದವು. ಅವೆರಡನ್ನೂ ವಿಲೀನಗೊಳಿಸಿ 2018ರ ಅಕ್ಟೋಬರ್ 30ರಂದು ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಹೆಸರಿನಲ್ಲಿ ಜಾರಿಗೊಳಿಸಲಾಗಿದೆ. ರಾಜ್ಯದ 1.15 ಲಕ್ಷ ಕುಟುಂಬಗಳ ಸುಮಾರು 4 ಕೋಟಿ ಜನರು ಈ ಯೋಜನೆ ವ್ಯಾಪ್ತಿಗೆ ಒಳಪಡುತ್ತಿದ್ದಾರೆ.

ಖಾಸಗಿ ಸೇರಿ 2,732 ಆಸ್ಪತ್ರೆಗಳಲ್ಲಿ ಈ ಯೋಜನೆಯಡಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದುವರೆಗೂ 2.50 ಲಕ್ಷ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. ಬಿಪಿಎಲ್ ಕುಟುಂಬಗಳ 5 ಲಕ್ಷ ರೂ.ವರೆಗಿನ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಎಪಿಎಲ್ ಕಾರ್ಡದಾರರಿಗೆ ಶೇ.30 ರಿಯಾಯಿತಿ ಇದೆ. ಆದರೆ, ರೋಗಿ ಆಸ್ಪತ್ರೆಗೆ ದಾಖಲಾಗಿ 24 ಗಂಟೆಯೊಳಗಾಗಿ ನಿಗದಿತ ದಾಖಲೆ ಸಲ್ಲಿಸುವುದು ಕಡ್ಡಾಯ.

ಪ್ರವಾಹ ಪೀಡಿತರಿಗೆ ಫಜೀತಿ: ರಾಜ್ಯದ 17 ಜಿಲ್ಲೆಗಳ 80 ತಾಲೂಕುಗಳಲ್ಲಿ ಮಳೆ, ಪ್ರವಾಹ ಪರಿಸ್ಥಿತಿ ತಲೆದೋರಿ ಜನ ತತ್ತರಿಸಿದ್ದಾರೆ. ಮನೆ-ಮಠ ಕಳೆದುಕೊಂಡು ಕೈಯಲ್ಲಿ ಬಿಡಿಗಾಸೂ ಇಲ್ಲದೆ ಬೀದಿಗೆ ಬಿದ್ದಿದ್ದಾರೆ. ಹವಾಮಾನ ವೈಪರೀತ್ಯದಿಂದ ನಾನಾ ರೋಗ-ರುಜಿನಗಳಿಂದ ನರಳುತ್ತಿದ್ದಾರೆ. ಈ ಯೋಜನೆಯಡಿ ಚಿಕಿತ್ಸೆ ಪಡೆಯಲು ಕಾಯ್ದೆ ಅಡ್ಡಿಯಾಗುತ್ತಿದೆ. ನಿರಾಶ್ರಿತರ ಕೇಂದ್ರಗಳಲ್ಲಿ ಬದುಕು ದೂಡುತ್ತಿರುವಾಗ ಅವರು ದಾಖಲೆ ಕೊಟ್ಟು ಚಿಕಿತ್ಸೆ ಪಡೆಯುವುದಾದರೂ ಹೇಗೆ?

ಇನ್ನೊಂದು ಜ್ವಲಂತ ಉದಾಹರಣೆ ಎಂದರೆ, ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕು ಜಯಪುರದ ವಿಘ್ನೇಶ್ ಕುಟುಂಬ ಕಾರಿನಲ್ಲಿ ಶೃಂಗೇರಿಗೆ ಹೋಗುವಾಗ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡಿತ್ತು. ವಿಘ್ನೇಶ್ ಮತ್ತು ಅವರ ಸಹೋದರತ್ತೆ ವಸಂತಿ ಪ್ರಜ್ಞಾಹೀನರಾಗಿದ್ದರು. ಬಿಪಿಎಲ್ ಕಾರ್ಡ್ ಹೊಂದಿರುವ ಈ ಕುಟುಂಬಕ್ಕೆ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕದ ಸೌಲಭ್ಯ ಪಡೆಯಲು ಸಾಧ್ಯವಾಗಲಿಲ್ಲ!

ಇಡೀ ಕುಟುಂಬ ಸಾವು ಬದುಕಿನ ಹೋರಾಟ ಪರಿಸ್ಥಿತಿಯಲ್ಲಿ ಇದ್ದುದರಿಂದ ಆಸ್ಪತ್ರೆಗೆ ದಾಖಲಾದ 24 ಗಂಟೆಯೊಳಗೆ ಬಿಪಿಎಲ್ ಕಾರ್ಡ್, ಆಧಾರ್ ಮತ್ತಿತರ ಪೂರಕ ದಾಖಲೆ ಸಲ್ಲಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಯೋಜನೆ ಪ್ರಯೋಜನ ಸಿಗದೆ ಕಂಗಾಲಾಗಿ, ಪರಿಹಾರ ಕೋರಿ ಸರ್ಕಾರದ ಮೊರೆ ಹೋಗಿದೆ.

ಸಾಮಾಜಿಕ ಕಾರ್ಯಕರ್ತ ಎಂ.ಯೂಸೂಫ್ ಪಟೇಲ್ ಈ ಪ್ರಕರಣವನ್ನು ಮುಖ್ಯಮಂತ್ರಿ ಹಾಗೂ ಆರೋಗ್ಯ ಇಲಾಖೆ ಉನ್ನತಾಧಿಕಾರಿಗಳ ಗಮನಕ್ಕೆ ತಂದಿದ್ದು, ಕಾಯ್ದೆಗೆ ತಿದ್ದುಪಡಿ ತರಲು ಆರೋಗ್ಯ ಇಲಾಖೆ ಮುಂದಾಗಿದೆ.

ದಾಖಲೆ ಸಲ್ಲಿಕೆ ನಿಯಮ ಸಡಿಲ

ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ರೋಗಿ ಆಸ್ಪತ್ರೆಗೆ ದಾಖಲಾಗಿ 24 ಗಂಟೆ ಒಳಗಾಗಿ ನಿರ್ದಿಷ್ಟ ದಾಖಲೆ ಸಲ್ಲಿಸಬೇಕೆಂಬ ನಿಯಮ ಸಡಿಲಿಸಿ, ಚಿಕಿತ್ಸೆ ಪಡೆದು ಹೊರ ಹೋಗುವ ವೇಳೆಗೆ ದಾಖಲೆ ಸಲ್ಲಿಸಲು ಅವಕಾಶ ಮಾಡಿಕೊಡುವ ಸಂಬಂಧ ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ. ಇದರಿಂದ ಅಪಘಾತ, ಆಕಸ್ಮಿಕವಾಗಿ ದಾಖಲೆ ಕಳೆದುಕೊಂಡವರು, ಪ್ರಕೃತಿ ವಿಕೋಪದಿಂದ ದಾಖಲೆ ಕಳೆದುಕೊಂಡವರು ಈ ಯೋಜನೆಯ ಪ್ರಯೋಜನ ಪಡೆಯಬಹುದು.

Leave a Reply

Your email address will not be published. Required fields are marked *