ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಪ್ರತಿಭಟನೆ

ಹಾವೇರಿ: ಸಾರ್ವಜನಿಕ ಆರೋಗ್ಯ ಇಲಾಖೆ ಬಲಗೊಳ್ಳಬೇಕು. ಇದಕ್ಕಾಗಿ ಆರೋಗ್ಯ ಇಲಾಖೆಯಲ್ಲಿನ ಗುತ್ತಿಗೆ ನೌಕರರಿಗೆ ಸಮಾನ ವೇತನ ಹಾಗೂ ಸೇವಾ ಭದ್ರತೆ ಸಿಗಬೇಕು ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ನೌಕರರು ಗುರುವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ಎಸ್.ಎನ್. ಮಲ್ಲಿಕಾರ್ಜುನ ಮಾತನಾಡಿ, ಇಂದು ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರ ಸಂಖ್ಯೆ, ಖಾಯಂ ನೌಕರರಿಗಿಂತ ಹೆಚ್ಚಿದೆ. ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುತ್ತಿಲ್ಲ. ಕೆಲಸದ ಜಾಗದಲ್ಲಿ ತಾರತಮ್ಯ, ಸಂಬಳದ ಅನಿಶ್ಚಿತತೆ, 3 ತಿಂಗಳ ಬಾಂಡ್, ವರ್ಷಕ್ಕೊಂದು ದಿನ ಬ್ರೇಕ್ ಇನ್ ಸರ್ವೀಸ್ ತರದ ವಿವಿಧ ರೀತಿಯ ಅತಂತ್ರತೆಯ ಜೊತೆಗೆ ಸದಾಕಾಲ ಹತ್ತು ಹಲವು ರೀತಿಯ ಸಮಸ್ಯೆಗಳನ್ನು ಗುತ್ತಿಗೆ ನೌಕರರು ಎದುರಿಸುತ್ತಿದ್ದೇವೆ. ಒಳಗುತ್ತಿಗೆಯಲ್ಲಿರುವವರು ಇದ್ದಕ್ಕಿದ್ದಂತೆ ಹೊರಗುತ್ತಿಗೆ ಆಗಬೇಕಾಗುತ್ತದೆ. ಗುತ್ತಿಗೆದಾರರ ಇಷ್ಟಾನಿಷ್ಟಗಳಿಗೆ ತಕ್ಕಂತೆ ಉದ್ಯೋಗ ಇರುತ್ತದೆ. ಇಲ್ಲವೇ ಹೋಗುತ್ತದೆ. ನೇರ ನೇಮಕಾತಿ ಆದರೆ ಕೆಲಸ ಕಳೆದುಕೊಳ್ಳುವ ತೂಗುಗತ್ತಿಯೂ ಸದಾ ತೂಗುತ್ತಿರುತ್ತದೆ. ಇದನ್ನೆಲ್ಲ ಕೂಡಲೇ ಸರ್ಕಾರ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿ.ಪಂ. ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ಹಾಗೂ ಡಿಎಚ್​ಒ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ ಮನವಿ ಸ್ವೀಕರಿಸಿ ತಮ್ಮ ಬೇಡಿಕೆಗಳು ಸಮರ್ಪಕವಾಗಿದ್ದು, ಈ ಕುರಿತು ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಸಂಘಟನೆ ಮುಖಂಡರಾದ ರೋಶನ್ ದೊಡ್ಡಮನಿ, ಡಾ. ವಿಜಯಕುಮಾರ ಬಣಕಾರ, ಡಾ. ಪಾಯಪ್ಪಗೌಡ್ರ, ಡಾ. ರೇಣುಕಾ, ಅಕ್ಷತಾ, ಸುಧಾಕರ ದೈವಜ್ಞ, ಸತೀಶ ದೊಡ್ಡಮನಿ, ಮಾರುತಿ ಭಜಂತ್ರಿ, ನಾಗರಾಜ ಈಳಗೇರ, ನೂರಾರು ಗುತ್ತಿಗೆ ನೌಕರರು ಪಾಲ್ಗೊಂಡಿದ್ದರು.