ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರದಲ್ಲಿ ಕಾಶ್ಮೀರ ಕಣಿವೆಯಲ್ಲಿ ಭಾರತೀಯ ಸೇನಾಪಡೆಯ ದೌರ್ಜನ್ಯ ಮಿತಿಮೀರಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರ ಅಧಿಕಾರವನ್ನು ಸಂಪೂರ್ಣವಾಗಿ ಕಸಿದುಕೊಳ್ಳಲಾಗಿದೆ ಎಂಬ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಅವೆಲ್ಲವೂ ಆಧಾರರಹಿತ ಆರೋಪಗಳು ಎಂದು ಭಾರತೀಯ ಸೇನಾಪಡೆ ಮೂಲಗಳು ಸ್ಪಷ್ಟಪಡಿಸಿದೆ.
ಭಾನುವಾರ ಸರಣಿ ಟ್ವೀಟ್ ಮಾಡಿದ್ದ ಕಾಶ್ಮೀರ ಪೀಪಲ್ಸ್ ಮೂವ್ಮೆಂಟ್ ನಾಯಕಿ ಶೆಹ್ಲಾ ರಶೀದ್, ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸರು ಅಧಿಕಾರ ಕಳೆದುಕೊಂಡಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ. ಈಗ ಅರೆಮಿಲಟರಿ ಪಡೆ ಸಂಪೂರ್ಣವಾಗಿ ಪ್ರಾಬಲ್ಯ ಸ್ಥಾಪಿಸಿದೆ. ಸಿಆರ್ಪಿಎಫ್ ಯೋಧರೊಬ್ಬರು ದೂರು ನೀಡಿದ್ದಕ್ಕಾಗಿ ಒಬ್ಬ ಠಾಣಾಧಿಕಾರಿಯನ್ನು ದಿಢೀರನೆ ವರ್ಗಾವಣೆ ಮಾಡಲಾಗಿದೆ. ಠಾಣಾಧಿಕಾರಿಗಳ ಕೈಯಲ್ಲಿ ಇರಬೇಕಿದ್ದ ಪೊಲೀಸ್ ದಂಡ ಹಾಗೂ ಸೊಂಟದಲ್ಲಿ ಇರಬೇಕಿದ್ದ ಪಿಸ್ತೂಲ್ಗಳು ಕಾಣಿಸುತ್ತಿಲ್ಲ ಎಂದು ಆರೋಪಿಸಿದ್ದರು.
ಭದ್ರತಾ ಪಡೆ ಸಿಬ್ಬಂದಿ ರಾತ್ರಿ ವೇಳೆ ಹಠಾತ್ತನೆ ಮನೆಗಳೊಳಗೆ ನುಗ್ಗುತ್ತಿದ್ದಾರೆ. ಮನೆಯಲ್ಲಿರುವ ಹುಡುಗರನ್ನು ಬಲವಂತವಾಗಿ ಹೊರಗೆಳೆದುಕೊಂಡು ಹೋಗುತ್ತಿದ್ದಾರೆ. ಮನೆಯಲ್ಲಿರುವ ದವಸಧಾನ್ಯಗಳನ್ನು ಬೇಕೆಂದೇ ಚೆಲ್ಲಾಡುತ್ತಿದ್ದಾರೆ. ಅಕ್ಕಿಗೆ ಎಣ್ಣೆ ಬೆರೆಸಲಾಗುತ್ತಿದೆ. ಹಾಗೆ ಎಳೆದುಕೊಂಡ ಹೋದ ಹುಡುಗರನ್ನು ಹಿಂಸಿಸಲಾಗುತ್ತಿದೆ. ಹಿಂಸೆಯಿಂದ ನಲುಗಿ ಅವರು ಕಿರುಚುವ ಅವರ ಧ್ವನಿ ಊರಿಗೆ ಊರೇ ಕೇಳಿಸಿಕೊಳ್ಳಲಿ ಎಂಬ ಕಾರಣಕ್ಕೆ ಮೈಕ್ಗಳನ್ನು ಬಳಸಲಾಗುತ್ತಿದೆ ಎಂದು ಇನ್ನೊಂದು ಟ್ವೀಟ್ನಲ್ಲಿ ದೂರಿದ್ದರು.
ಆದರೆ ಈ ಎಲ್ಲ ಆರೋಪಗಳನ್ನು ಅಲ್ಲಗಳೆದಿರುವ ಸೇನಾಪಡೆ, ಈ ಭಾಗದಲ್ಲಿ ಹಿಂಸಾತ್ಮಕ ಪ್ರತಿಭಟನೆಯನ್ನು ಪ್ರಚೋದಿಸುವ ಸಲುವಾಗಿ ಇಂಥ ಸುಳ್ಳುಗಳನ್ನು ಹಬ್ಬಿಸಲಾಗುತ್ತಿದೆ. ಈ ಆರೋಪಗಳು ನಿರಾಧಾರವಾದದ್ದು ಎಂದು ಸ್ಪಷ್ಟಪಡಿಸಿದೆ. (ಏಜೆನ್ಸೀಸ್)