ಅಪ್ರಾಪ್ತೆಗೆ ಕಿರುಕುಳ ನೀಡಿದ ಭಾರತೀಯ ಸೇನೆ ಸಿಬ್ಬಂದಿ ಬಂಧನ!

ಗಯಾ: ಬಿಹಾರದ ಗಯಾ ಟೌನ್‌ ಬಳಿಯ ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಭಾನುವಾರ ಮುಂಜಾನೆ 15 ವರ್ಷದ ಬಾಲಕಿಗೆ ಭಾರತೀಯ ಸೇನೆಗೆ ಸೇರಿದ ವ್ಯಕ್ತಿ ಕಿರುಕುಳ ನೀಡಿದ್ದಾನೆ.

ಈ ಸಂಬಂಧ ಉತ್ತರ ಪ್ರದೇಶದ ಮುಘಲ್‌ಸರೈನ ಪಂಡಿತ್‌ ದೀನ ದಯಾಳ್‌ ಉಪಾಧ್ಯಾಯ ಜಂಕ್ಷನ್‌ನಲ್ಲಿ ಸೇನಾ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಾಲಕಿಯು ತನ್ನ ಕುಟುಂಬ ಸದಸ್ಯರೊಂದಿಗೆ ರಾಂಚಿಯಿಂದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸೇನಾ ಸಿಬ್ಬಂದಿ ಗುರ್ಮಿತ್‌ ಸಿಂಗ್‌ ಎಂಬಾತ ಗಯಾ ನಿಲ್ದಾಣದ ಸಮೀಪ ಬಾಲಕಿಗೆ ಕಿರುಕುಳ ನೀಡಿದ್ದಾನೆ. ಕೂಡಲೇ ಆಕೆ ತನ್ನ ಸಂಬಂಧಿಗೆ ವಿಷಯ ತಿಳಿಸಿದ್ದಾಳೆ. ನಂತರ ಅವರು ಪ್ರಯಾಣ ಟಿಕೆಟ್ ಪರೀಕ್ಷಕ(TTE) ಅವರಿಗೆ ವಿಷಯ ತಿಳಿಸಿದ್ದಾರೆ ಎಂದು ರೈಲ್ವೆ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ತಕ್ಷಣ ಜಾಗೃತಗೊಂಡ ಟಿಟಿಇ ದೀನ ದಯಾಳ್‌ ಉಪಧ್ಯಾಯ ಜಂಕ್ಷನ್‌ನ ಕಂಟ್ರೋಲ್‌ ರೂಂಗೆ ಮಾಹಿತಿ ನೀಡಿದ್ದಾರೆ. ರೈಲು ದೀನ ದಯಾಳ್ ಉಪಾಧ್ಯಾಯ ಜಂಕ್ಷನ್‌ಗೆ ಬರುತ್ತಿದ್ದಂತೆ ಸಬ್‌ ಇನ್ಸ್‌ಪೆಕ್ಟರ್‌ ಜೀತೇಂದ್ರ ಕುಮಾರ್‌ ಮತ್ತು ತಂಡ ಯೋಧನನ್ನು ವಶಕ್ಕೆ ಪಡೆದಿದ್ದಾರೆ.

ಸಂತ್ರಸ್ತೆಯ ಸಂಬಂಧಿ ನೀಡಿರುವ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಸಂಬಂಧಿಸಿದ ಐಪಿಸಿ ಸೆಕ್ಷನ್‌ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ಗಯಾ ಸರ್ಕಾರಿ ಲೈಲ್ವೆ ಪೊಲೀಸರಿಗೆ ಒಪ್ಪಿಸಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಜಿಆರ್‌ಪಿ ಇನ್ಸ್‌ಪೆಕ್ಟರ್‌ ಆರ್‌ ಕೆ ಸಿಂಗ್‌ ತಿಳಿಸಿದ್ದಾರೆ. (ಏಜೆನ್ಸೀಸ್)