ಔರಂಗಜೇಬ್​ ಹತ್ಯೆ ಪ್ರಕರಣ: ಮೂವರು ಯೋಧರನ್ನು ವಶಕ್ಕೆ ಪಡೆದ ಸೇನೆ

ಶ್ರೀನಗರ: ಭಾರತೀಯ ಸೇನೆಯ ವೀರ ಯೋಧ 44 ರಾಷ್ಟ್ರೀಯ ರೈಫಲ್ಸ್​ನ ಔರಂಗಜೇಬ್​ ಹತ್ಯೆಯಲ್ಲಿ ಭಾಗಿಯಾಗಿದ್ದರು ಎಂಬ ಆರೋಪದ ಮೇಲೆ ಸೇನೆ ಮೂವರು ಯೋಧರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

ಅಬಿದ್​ ವಾನಿ, ತಜಮುಲ್​ ಅಹಮದ್​ ಮತ್ತು ಆದಿಲ್​ ವಾನಿ ಬಂಧಿತ ಯೋಧರು. ಇವರು 44 ರಾಷ್ಟ್ರೀಯ ರೈಫಲ್ಸ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಲ್ಲಿ ಇಬ್ಬರು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯವರಾಗಿದ್ದು, ಓರ್ವ ಯೋಧ ಕುಲ್ಗಾಮ್​ ಜಿಲ್ಲೆಯ ನಿವಾಸಿ. ಔರಂಗಜೇಬ್​ ಹತ್ಯೆಯ ತನಿಖೆಯ ವೇಳೆ ಈ ಮೂವರು ಯೋಧರು ಹತ್ಯೆಯಲ್ಲಿ ಭಾಗಿಯಾಗಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.

ವಶಕ್ಕೆ ಪಡೆದಿರುವ ಯೋಧರು ಔರಂಗಜೇಬ್​ ಕುರಿತು ಸಂಪೂರ್ಣ ಮಾಹಿತಿಯನ್ನು ಉಗ್ರರಿಗೆ ಒದಗಿಸಿದ್ದರು. ಈ ಮಾಹಿತಿಯನ್ನು ಆಧರಿಸಿ ಉಗ್ರರು ಈದ್​ ಆಚರಣೆಗಾಗಿ ಮನೆಗೆ ಹೊರಟಿದ್ದ ಜೌರಂಗಜೇಬ್​ರನ್ನು ಪುಲ್ವಾಮ ಜಿಲ್ಲೆಯಲ್ಲಿ ಅಪಹರಿಸಿ ಹತ್ಯೆ ಮಾಡಿದ್ದರು.

ಕಳೆದ ವರ್ಷ ಸ್ವಾತಂತ್ರ್ಯೋತ್ಸವದ ದಿನ ಔರಂಗಜೇಬ್​​ಗೆ ಮರಣೋತ್ತರವಾಗಿ ಶೌರ್ಯ ಚಕ್ರ ಪ್ರದಾನ ಮಾಡಲಾಗಿತ್ತು. ಎರಡು ದಿನಗಳ ಹಿಂದೆ ಔರಂಗಜೇಬ್​ ತಂದೆ ಬಿಜೆಪಿಗೆ ಸೇರ್ಪಡೆಯಾಗಿದ್ದರು. (ಏಜೆನ್ಸೀಸ್​)