ರೈತರನ್ನು ಮಳೆರಾಯನೇ ಕಾಪಾಡಬೇಕು

ಮಾದರಹಳ್ಳಿ ರಾಜು ಮಂಡ್ಯ
ಬೇಸಿಗೆ ಭತ್ತ ಹೇಗೋ ಕೈ ಸೇರುತ್ತಿದೆ. ಆದರೆ, ಕಷ್ಟಪಟ್ಟು ಬೆಳೆದು ನಿಂತಿರುವ ಕಬ್ಬಿಗೆ ನೀರು ಸಿಗದೆ ಬಾಡಲಾರಂಭಿಸಿದೆ. ಹಲವೆಡೆ ಆರ್ಭಟಿಸುತ್ತಿರುವ ವರುಣ ಜಿಲ್ಲೆಯತ್ತ ಮುಖ ಮಾಡಲು ಮೀನಮೇಷ ಎಣಿಸುತ್ತಿರುವುದರಿಂದ ಅನ್ನದಾತರ ಎದೆಬಡಿತ ಹೆಚ್ಚಾಗುತ್ತಿದೆ.

ಹೌದು, ಕಬ್ಬು ಹಾಕಬೇಡಿ. ಕೂಳೆ ಕಬ್ಬಿಗೆ ಮಾತ್ರ ನೀರು ನೀಡುತ್ತೇವೆ ಎಂದು ಜಿಲ್ಲಾಡಳಿತ, ಕಾವೇರಿ ನೀರಾವರಿ ನಿಗಮ ಹೇಳಿತ್ತು. ಆದರೆ, ಅಧಿಕಾರಿಗಳ ಮಾತಿಗೆ ಕಿವಿಗೊಡದ ರೈತರು ತಮ್ಮ ಬದುಕಿಗೆ ಬೇಸಾಯವೇ ಗತಿ ಎಂದು ಮಳೆರಾಯನನ್ನು ನಂಬಿ ಭತ್ತ, ಕಬ್ಬು ನಾಟಿ ಮಾಡಿದರು.
ನಾಲೆಗಳಿಗೆ ಮೂರು ಕಟ್ಟು ನೀರು ಕೊಟ್ಟಿದ್ದರಿಂದ ಭತ್ತದ ಬೆಳೆ ಹೇಗೋ ರೈತರ ಕೈಸೇರಿತು. (ಆದರೆ, ಲಾಭ ದಲ್ಲಾಳಿಗಳ ಪಾಲಾಗುತ್ತಿದೆ). ಆದರೆ, ಕೂಳೆ ಕಬ್ಬು ಹಾಗೂ ಹೊಸದಾಗಿ ನಾಟಿ ಮಾಡಿದ್ದ ಕಬ್ಬಿಗೆ ಈಗ ನೀರಿನ ಅನಿವಾರ್ಯ ಎದುರಾಗಿದೆ.

ಜಿಲ್ಲೆಯಲ್ಲಿ 20 ದಿನಗಳಿಂದಲೂ ಮೋಡ ಕವಿದ ವಾತಾವರಣವಿದ್ದು, ಕೆಲವೊಮ್ಮೆ ಸಾಧಾರಣ ಮಳೆಯಾಗಿದ್ದರೆ ಉಳಿದಂತೆ ತುಂತುರು ಹನಿಗಳಷ್ಟೇ ಬಿದ್ದಿವೆ. ವಾರದಿಂದ ಈಚೆಗೆ ಸುಡುಬಿಸಿಲಿನ ತಾಪ ಹೆಚ್ಚಾಗಿದ್ದರೆ, ಮಂಗಳವಾರ ಬೆಳಗ್ಗೆ ನೆತ್ತಿ ಸುಡುತ್ತಿದ್ದ ಬಿಸಿಲನ್ನು ಮಧ್ಯಾಹ್ನದ ನಂತರ ಮೋಡಗಳು ತಣ್ಣಗೆ ಮಾಡಿದವು. ಆದರೆ, ಸೆಕೆ ಮಾತ್ರ ಕಡಿಮೆಯಾಗಲಿಲ್ಲ. ಸಂಜೆ ಮಳೆಯಾಗುವ ಲಕ್ಷಣಗಳು ಗೋಚರಿಸಿದ್ದು, ಮಳೆ ಆದಲ್ಲಿ ರೈತ ನಿಟ್ಟುಸಿರು ಬಿಡಲಿದ್ದಾನೆ. ಕೈ ಕೊಟ್ಟರೆ ದೇವರೆ ಗತಿ.
ಜಿಲ್ಲೆಯಲ್ಲಿ 13320 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆದು ಕೆಲವೆಡೆ ಕಟಾವಿನ ಹಂತಕ್ಕೆ ಬಂದಿದ್ದರೆ, ತನಿ ಕಬ್ಬು 10 ಸಾವಿರ ಹೆಕ್ಟೇರ್‌ನಲ್ಲಿ ನಾಟಿಯಾಗಿದೆ. ಬೋರ್‌ವೆಲ್ ಇರುವವರು ಕರೆಂಟ್ ಕಣ್ಣಾಮುಚ್ಚಾಲೆ ಆಟದಲ್ಲಿ ಕಬ್ಬಿನ ಗದ್ದೆಗಳನ್ನು ತೇವ ಮಾಡುತ್ತಿದ್ದಾರೆ. ನಾಲೆಗಳ ನೀರನ್ನೇ ನಂಬಿರುವವರು ಮಳೆರಾಯನಿಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ.

ಮತ್ತೊಂದೆಡೆ ಕನ್ನಂಬಾಡಿ ಕಟ್ಟೆಯಿಂದ ನಾಲೆಗಳಿಗೆ ನೀರು ಬಿಡುವಂತೆ ರೈತಸಂಘಟನೆಗಳು ಹೋರಾಟ ಆರಂಭಿಸಿದ್ದರೆ, ಜೆಡಿಎಸ್ ಕಾರ್ಯಕರ್ತರು ನಿಖಿಲ್ ಸೋಲಿಗೆ ಸೇಡು ತೀರಿಸಿಕೊಳ್ಳಲು ಕಾದಿರುವಂತಿದೆ. ಕಾಂಗ್ರೆಸ್, ಬಿಜೆಪಿ ನಾಯಕರು ಇದು ತಮಗೆ ಸಂಬಂಧಪಟ್ಟ ವಿಷಯವಲ್ಲ ಎಂಬ ಹಿಂದಿನ ಮಾದರಿಯಲ್ಲೇ ಕಾಲ ನೂಕುತ್ತಿದ್ದಾರೆ.

ಕಟ್ಟೆಯಿಂದ ನೀರು ಸಿಗಲ್ಲ: ಕಾವೇರಿ ನೀರು ನಿರ್ವಹಣಾ ಮಂಡಳಿ ಪ್ರಕಾರ ನಾಲೆಗಳಿಗೆ ಈಗ ನೀರು ಬಿಡುವ ಸಾಧ್ಯತೆಗಳು ಸಂಪೂರ್ಣ ಕ್ಷೀಣಿಸಿವೆ.
ಕರ್ನಾಟಕದ ಪಾಲಿನ ನೀರನ್ನು ನಿಗದಿಗಿಂತ ಹೆಚ್ಚಾಗಿ ಬಳಕೆ ಮಾಡಿಕೊಂಡಿರುವುದರಿಂದ ಬೆಳೆಗಳಿಗೆ ನೀರು ಸಿಗುವುದು ನೂರಕ್ಕೆ ನೂರರಷ್ಟು ಕಷ್ಟ. ಸದ್ಯ ಕಟ್ಟೆಯ ನೀರಿನ ಮಟ್ಟ 80 ಅಡಿಗಿಳಿದಿದ್ದು, ಇರುವ ನೀರನ್ನು ಕುಡಿಯುವ ನೀರಿಗಾಗಿ ಕಾಯ್ದಿಟ್ಟುಕೊಳ್ಳಲೇಬೇಕು.

ಜತೆಗೆ ತಮಿಳುನಾಡಿನಲ್ಲಿ ಭೀಕರ ಪರಿಸ್ಥಿತಿ ನಿರ್ಮಾಣವಾಗಿದ್ದು, ಅವರು ನೀರಿಗಾಗಿ ಬೇಡಿಕೆ ಇಟ್ಟಿರುವುದರಿಂದ ನದಿಗೆ ನೀರು ಬಿಡಬಹುದೇ ವಿನಹ ನಾಲೆಗಳಿಗೆ ನೀರು ಬಿಡುವುದು ಅಸಾಧ್ಯದ ಮಾತು.

ಇದೀಗ ರೈತರ ಪಾಲಿಗೆ ಇರುವ ದಾರಿಯೆಂದರೇ ಮಳೆರಾಯನನ್ನು ಪ್ರಾರ್ಥನೆ ಮಾಡುವುದಷ್ಟೇ. ರೈತರ ಉಳಿವು ಈಗ ಮಳೆರಾಯನ ಮೇಲೆ ಅವಲಂಬಿಸಿದೆ.

ಮಳೆಯಾಗುವ ಸಾಧ್ಯತೆ: ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಪ್ರಕಾರ ಇನ್ನೆರಡು ದಿನಗಳಲ್ಲಿ ಜಿಲ್ಲೆಯಲ್ಲಿ ಮಳೆಯಾಗುವ ಮುನ್ಸೂಚನೆಗಳಿವೆ. ಮಡಿಕೇರಿಯಲ್ಲಿ ಕೆಲವೆಡೆ ಮಳೆ ಆಗುತ್ತಿದ್ದು, ಈ ಬಾರಿ ಕನ್ನಂಬಾಡಿ ಕಟ್ಟೆ ಭರ್ತಿಯಾಗುವ ವಿಶ್ವಾಸವಿದೆ ಎನ್ನಲಾಗುತ್ತಿದೆ.

ಜಿಲ್ಲೆಯಲ್ಲೂ ಉತ್ತಮ ಮಳೆಯಾಗಲಿದೆ. ಆದ್ದರಿಂದ ಈ ವರ್ಷ ಸಂಕಷ್ಟ ಎದುರಾಗದು. ಜತೆಗೆ ಸದ್ಯದ ಪರಿಸ್ಥಿತಿಯಲ್ಲಿ ನಾಲೆಗಳಿಗೆ ನೀರು ಬಿಡುವ ಮಾತೇ ಇಲ್ಲ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು.

ಬೆಳೆ ಹಾಕಬೇಡಿ ಎಂದರೆ ನಾವೇನು ಮಾಡಬೇಕು. ಬೆಳೆ ಹಾಕಬೇಡಿ ಎನ್ನುವ ವರ್ಷ ರೈತರ ಬದುಕಿಗೆ ಪರ‌್ಯಾಯ ವ್ಯವಸ್ಥೆ ಅಥವಾ ಎಕರೆಗೆ ಕನಿಷ್ಠ 10 ಸಾವಿರ ರೂ. ನೆರವು ನೀಡುವುದಾದರೆ ಬೆಳೆ ಹಾಕದಿರಬಹುದು. ಸುಮ್ಮನೆ ಬೆಳೆ ಹಾಕಬೇಡಿ ಅಂದರೆ, ನಮ್ಮ ಹೊಟ್ಟೆ, ಬಟ್ಟೆಗೆ ಏನು ಮಾಡಬೇಕೆಂದು ಆಳುವವರು, ಅಧಿಕಾರಿಗಳು ತಿಳಿಸಲಿ. ಇಲ್ಲದಿದ್ದರೆ ಬೆಳೆಗಳಿಗೆ ನೀರು ಕೊಡಲಿ.
ಹೆಮ್ಮಿಗೆ ಕೃಷ್ಣ ರೈತಸಂಘದ ಮುಖಂಡ

Leave a Reply

Your email address will not be published. Required fields are marked *