ದುರಂತೊ ಎಕ್ಸ್​ಪ್ರೆಸ್​ ದರೋಡೆ: ಪ್ರಯಾಣಿಕರ ದುಬಾರಿ ವಸ್ತು ದೋಚಿ ಪರಾರಿ

ನವದೆಹಲಿ: ಜಮ್ಮು-ದೆಹಲಿ ನಡುವೆ ಸಂಚರಿಸುವ ದುರಂತೊ ಎಕ್ಸ್​ಪ್ರೆಸ್​ನ ಎರಡು ಎಸಿ ಕೋಚ್​ಗಳಿಗೆ ನುಗ್ಗಿದ ದರೋಡೆಕೋರರು ಪ್ರಯಾಣಿಕರ ನಗದು, ಬ್ಯಾಗ್​, ಮೊಬೈಲ್​ ಫೋನ್​, ಚಿನ್ನದ ಸರವನ್ನು ದೋಚಿದ್ದಾರೆ.

ದೆಹಲಿಯ ಹೊರವಲಯದ ಬದ್ಲಿಯಲ್ಲಿ ಗುರುವಾರ ಮುಂಜಾನೆ 3.30ರ ಸುಮಾರಿಗೆ ಈ ಘಟನೆ ನಡೆದಿದೆ.

ರೈಲಿನ ಬಿ7 ಮತ್ತು ಬಿ3 ಬೋಗಿಗಳಿಗೆ ನುಗ್ಗಿದ 7ರಿಂದ 10ರ ದರೋಡೆಕೋರರು ಹರಿತವಾದ ಚಾಕುಗಳನ್ನು ಹಿಡಿದು ಪ್ರಯಾಣಿಕರನ್ನು ಬೆದರಿಸಿದ್ದಾರೆ. ಪ್ರಯಾಣಿಕರ ಕುತ್ತಿಗೆಗೆ ಚಾಕುವನ್ನು ಹಿಡಿದು ತಮ್ಮ ಬಳಿ ಇದ್ದ ದುಬಾರಿ ವಸ್ತುಗಳನ್ನು ನೀಡುವಂತೆ ಸೂಚಿಸಿದ್ದಾರೆ. 10-15ನಿಮಿಷದೊಳಗೆ ಎಲ್ಲವನ್ನೂ ದೋಚಿಕೊಂಡು ರೈಲಿನಿಂದ ಇಳಿದು ಪರಾರಿಯಾದರು ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.

ಘಟನೆ ನಡೆದಾಗ ರೈಲಿನಲ್ಲಿ ಯಾವುದೇ ಸಿಬ್ಬಂದಿ ಅಥವಾ ಭದ್ರತಾ ಸಿಬ್ಬಂದಿ ಇರಲಿಲ್ಲ. ಘಟನೆ ನಡೆದ 20 ನಿಮಿಷಗಳ ನಂತರ ಟಿಟಿ ನಮ್ಮ ಬೋಗಿಗೆ ಬಂದರು. ಆದರೆ ಅಷ್ಟರಲ್ಲಿ ದರೋಡೆಕೋರರು ಸ್ಥಳದಿಂದ ಕಾಲ್ಕಿತ್ತಿದ್ದರು ಎಂಬುದನ್ನು ಪ್ರಯಾಣಿಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸದ್ಯ ರೈಲ್ವೆ ರಕ್ಷಣಾ ಪಡೆ ಈ ಕುರಿತು ತನಿಖೆ ಆರಂಭಿಸಿದ್ದು, ದರೋಡೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉತ್ತರ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್)