ಮದ್ದೂರು: ಕ್ರೀಡೆ, ಸಂಸ್ಕೃತಿ ಉಳಿಸುವ ಜತೆಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ನ.9 ರಂದು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಅರ್ಜುನಪುರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘವನ್ನು ಉದ್ಘಾಟಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಎನ್.ಆರ್.ಪ್ರಸನ್ನ ತಿಳಿಸಿದರು.
ಶಿಕ್ಷಣದ ಜತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ವಿಚಾರಗಳು ಎಲ್ಲರಿಗೂ ಮುಖ್ಯವಾಗಿರುವುದರಿಂದ ಕ್ರೀಡಾಪಟುಗಳಿಗೆ ಹಾಗೂ ವಿದ್ಯಾರ್ಥಿಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಂಘವನ್ನು ಉದ್ಘಾಟನೆ ಮಾಡಲಾಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಘದ ವತಿಯಿಂದ ತಾಲೂಕಿನ ಎಲ್ಲ ಕ್ರೀಡಾಪಟುಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಲು ಚಿಂತನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ನೀಟ್, ಕೆಎಎಸ್, ಐಪಿಎಸ್ ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಉಚಿತವಾಗಿ ತರಬೇತಿ ಕೊಡಿಸುವುದು ಸಂಘದ ಮುಖ್ಯ ಉದ್ದೇಶವಾಗಿದೆ ಎಂದರು.
ತಾಲೂಕಿನ ಆಯ್ಕೆಯಾದ ಜಿಲ್ಲಾ, ರಾಜ್ಯ ಮಟ್ಟದ ಕ್ರೀಡಾಪಟುಗಳಿಗೆ ಯಾವುದೇ ಕ್ರೀಡೆ ಆದರೂ ಅವರಿಗೆ ಸಂಘದ ವತಿಯಿಂದ ತರಬೇತಿ ನೀಡಿ ಅವರ ಮುಂದಿನ ಹಂತಕ್ಕೆ ಹೋಗಲು ಅನುಕೂಲ ಕಲ್ಪಿಸಲಾಗುವುದು ಎಂದರು.
ಸಂಘವನ್ನು ರಾಷ್ಟ್ರೀಯ ಕಬಡ್ಡಿ ಆಟಗಾರ ಹಾಗೂ ಮೈಸೂರು ವಿಶ್ವವಿದ್ಯಾಲಯದ ಕಬಡ್ಡಿ ನಾಯಕ ವಿ.ಕೆ.ಹರೀಶ್ ಉದ್ಘಾಟಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಶೈಕ್ಷಣಿಕ, ಆರೋಗ್ಯ, ಕ್ರೀಡೆ ಸೇರಿದಂತೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಂಘ ಬದ್ಧವಾಗಿದೆ ಎಂದರು.
ಸಂಘದ ಉಪಾಧ್ಯಕ್ಷ ಆರ್.ವಿ.ಅವಿನಂದನ್, ಕಾರ್ಯದರ್ಶಿ ವಿ.ಎನ್.ಶಿವಶಂಕರ್, ಕ್ರೀಡಾ ಕಾರ್ಯದರ್ಶಿ ಎಂ.ಎನ್.ದೀಪಕ್, ನಿರ್ದೇಶಕ ಎಂ.ವಿಶ್ವನಾಥ್ ಇದ್ದರು.