ಸವಾಲು ಸ್ವೀಕರಿಸುತ್ತಿದ್ದ ಅರ್ಜುನ ನಿವೃತ್ತಿ

ಅವಿನ್ ಶೆಟ್ಟಿ ಉಡುಪಿ

ಪೊಲೀಸರಿಗೆ ಸವಾಲಾಗಿದ್ದ 2015ರಲ್ಲಿ ನಡೆದಿದ್ದ ಬೈಂದೂರಿನ ವಿದ್ಯಾರ್ಥಿನಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಸುಳಿವು ನೀಡಿದ್ದ, 15ಕ್ಕೂ ಹೆಚ್ಚು ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಪತ್ತೆದಾರಿಯಾಗಿ ಹೆಸರು ಮಾಡಿದ್ದ ಜಿಲ್ಲಾ ಪೊಲೀಸ್ ಶ್ವಾನ ಅರ್ಜುನ ಪೊಲೀಸ್ ಸೇವೆಯಿಂದ ನಿವೃತ್ತಿಯಾಗಿದ್ದಾನೆ.

ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಶ್ವಾನಗಳು ಮಹತ್ವದ ಪಾತ್ರ ನಿರ್ವಹಿಸುತ್ತವೆ. ಜಿಲ್ಲಾ ಪೊಲೀಸ್ ಇಲಾಖೆ ಅಪರಾಧ ವಿಭಾಗದಲ್ಲಿ 9 ವರ್ಷ ಉತ್ತಮ ಸೇವೆ ಸಲ್ಲಿಸಿದ್ದ ಡಾಬರ್‌ಮನ್ ತಳಿಯ ಅರ್ಜುನ ಪಾಲನೆ ಮಾಡುವವರಿಗೆ, ಪೊಲೀಸ್ ಅಧಿಕಾರಿಗಳಿಗೆ ಅಚ್ಚುಮೆಚ್ಚಾಗಿದ್ದು, ಅತ್ಯಂತ ಬುದ್ಧಿವಂತ, ಕುಶಾಗ್ರಮತಿ ಶ್ವಾನ ಎಂದೇ ಖ್ಯಾತಿ ಪಡೆದಿತ್ತು.

ಇತ್ತೀಚೆಗೆ ಆತನಿಗೆ ಅನಾರೋಗ್ಯ ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ನಿವೃತ್ತಿ ಮಾಡಲಾಗಿದೆ ಎಂದು ಎಎಸ್‌ಪಿ ಕುಮಾರಚಂದ್ರ ತಿಳಿಸಿದ್ದಾರೆ. ವಯಸ್ಸು ಹೆಚ್ಚಾಗಿ ಸುಸ್ತಾಗುವ ಶ್ವಾನಗಳನ್ನು ನಿವೃತ್ತಿ ಎಂದು ಪರಿಗಣಿಸಲಾಗುತ್ತದೆ. ಹೀಗೆ ಸೇವೆಯಿಂದ ವಿಮುಖವಾಗುವ ಶ್ವಾನಗಳನ್ನು ಸರ್ಕಾರದ ನಿಯಮದಂತೆ ಷರತ್ತುಬದ್ಧವಾಗಿ ಸಶಸ್ತ್ರ ಮೀಸಲು ಪಡೆಯ ಡಾಗ್ ಹ್ಯಾಂಡ್ಲರ್ ತಮ್ಮ ಬಳಿ ಇಟ್ಟುಕೊಳ್ಳಬಹುದು ಅಥವಾ ಪ್ರಾಣಿ ದಯಾ ಸಂಘಕ್ಕೆ ಇಲಾಖೆ ನಿಯಮಗಳನ್ನು ಅನುಸರಿಸಿ ಕೊಡಲಾಗುತ್ತದೆ ಎಂದು ಪೊಲೀಸ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅಣ್ಣಾಮಲೈ ಬಹುಮಾನ: 2015 ಜೂನ್ ತಿಂಗಳಲ್ಲಿ ನಡೆದಿದ್ದ ಬೈಂದೂರಿನ ವಿದ್ಯಾರ್ಥಿನಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಮಹತ್ವದ ಸುಳಿವು ನೀಡಿ ಆರೋಪಿಗಳನ್ನು ಬಂಧಿಸುವಲ್ಲಿ ನೆರವಾಗಿದ್ದ ಅರ್ಜುನನಿಗೆ ಅಂದಿನ ಎಸ್‌ಪಿ ಅಣ್ಣಾಮಲೈ 6 ಸಾವಿರ ರೂ. ನಗದು ಬಹುಮಾನ ನೀಡಿ ಪ್ರಶಂಸಿಸಿದ್ದರು. ವರಾಹ ದೇವಸ್ಥಾನದ ಕಳ್ಳತನ ಪ್ರಕರಣ ಸೇರಿದಂತೆ ಇದುವರೆಗೂ ಸುಮಾರು 20 ಮಹತ್ವದ ಅಪರಾಧ ಪ್ರಕರಣ ಭೇದಿಸುವಲ್ಲಿ ಅರ್ಜುನ ಪ್ರಮುಖ ಪಾತ್ರ ವಹಿಸಿದ್ದ ಎಂದು ಅಧಿಕಾರಿಗಳು ನೆನಪಿಸಿಕೊಳ್ಳುತ್ತಾರೆ.
ಅಪರಾಧ ವಿಭಾಗವಲ್ಲದೆ ಬಾಂಬ್ ಪತ್ತೆ ವಿಭಾಗದಲ್ಲಿ ಕ್ಯಾಪ್ಟನ್, ಹೈಕಾನ್ ಎಂಬ ಶ್ವಾನಗಳು ಕಾರ್ಯನಿರ್ವಹಿಸುತ್ತಿವೆ.

ಬ್ರೌನಿ ಡ್ಯೂಟಿಗೆ ಜಾಯಿನ್: ಜಿಲ್ಲಾ ಪೊಲೀಸ್ ಶ್ವಾನ ದಳಕ್ಕೆ ಡಾಬರ್‌ಮನ್ ತಳಿಯ ಬ್ರೌನಿ ಎಂಬ ಶ್ವಾನ ಫೆಬ್ರವರಿಯಲ್ಲಿ ಸೇರ್ಪಡೆಗೊಂಡಿದ್ದು, ಅರ್ಜುನನ ಜಾಗವನ್ನು ತುಂಬಿದೆ. ಬೆಂಗಳೂರಿನ ಆಡುಗೋಡಿಯಲ್ಲಿರುವ ಪೊಲೀಸ್ ಶ್ವಾನ ತರಬೇತಿ ಕೇಂದ್ರದಲ್ಲಿ 6 ತಿಂಗಳು ವಿಶೇಷ ತರಬೇತಿ ಪಡೆದ ಬ್ರೌನಿ ತೇರ್ಗಡೆ ಪರೀಕ್ಷೆಯಲ್ಲಿ ‘ಬಿ’ ರ‌್ಯಾಂಕ್ ಪಡೆದಿದೆ. ಶ್ವಾನ ಆಯ್ಕೆ ವಿಷಯದಲ್ಲಿ ಇಲಾಖೆ ಹೆಚ್ಚಿನ ಕಾಳಜಿ ವಹಿಸುತ್ತದೆ. ತಳಿ, ಚುರುಕುತನ, ಗ್ರಹಿಕೆ ಮೊದಲಾದ ವಿಷಯಗಳನ್ನು ಪರಾಮರ್ಶಿಸುತ್ತದೆ. ಬ್ರೌನಿ 3 ತಿಂಗಳ ಮರಿ ಇದ್ದಾಗ ಅಂದಿನ ಎಸ್‌ಪಿ ಲಕ್ಷ್ಮಣ ನಿಂಬರಗಿ ಆಯ್ಕೆ ಮಾಡಿದ್ದರು. ತರಬೇತಿ ಅವಧಿಯಲ್ಲಿ ಶಿಸ್ತು ಮತ್ತು ವಿಧೇಯತೆ, ಇಲಾಖೆಗೆ ಬೇಕಾದ ಪೂರಕ ಟ್ರೈನಿಂಗ್ ನೀಡುತ್ತಾರೆ. ಅಪರಾಧ ಸೇರಿದಂತೆ ವಿವಿಧ ವಿಭಾಗದ ನುರಿತ ತಜ್ಞರಿಂದ ತರಬೇತಿ ಪಡೆದಿರುವ ಬ್ರೌನಿ ಉತ್ತಮ ಜಾಣ್ಮೆ ತೋರಿ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ತರಬೇತಿ ಅವಧಿಯಲ್ಲೇ ಬೆಂಗಳೂರಿನಲ್ಲಿ ನಡೆದ ರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ ಕೀರ್ತಿ ಬ್ರೌನಿಗೆ ಸಲ್ಲುತ್ತದೆ.

ಅನಾರೋಗ್ಯ ಹಿನ್ನೆಲೆಯಲ್ಲಿ ಜಿಲ್ಲಾ ಶ್ವಾನದಳದ ಅಪರಾಧ ಪತ್ತೆಯ ಅರ್ಜುನ ಶ್ವಾನವನ್ನು ನಿವೃತ್ತಿಗೊಳಿಸಲಾಗಿದೆ. ಅರ್ಜುನನ 9 ವರ್ಷದ ಸೇವೆ ಉತ್ತಮವಾಗಿತ್ತು. ಅಪರಾಧ ಪತ್ತೆ ತರಬೇತಿ ಪೂರೈಸಿದ ಡಾಬರ್‌ಮೆನ್ ತಳಿಯ ಬ್ರೌನಿ ಶ್ವಾನದಳಕ್ಕೆ ಸೇರ್ಪಡೆಯಾಗಿದೆ.
| ನಿಶಾ ಜೇಮ್ಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಉಡುಪಿ