#MeToo: ಶ್ರುತಿ ಹರಿಹರನ್‌ಗೆ ನೋಟಿಸ್‌ ನೀಡಿದ ನ್ಯಾಯಾಲಯ

ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ದಾಖಲಿಸಿದ್ದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶ್ರುತಿ ಹರಿಹರನ್ ಅವರಿಗೆ ಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.

ಅರ್ಜುನ್ ಸರ್ಜಾ ದಾಖಲಿಸಿದ್ದ ಮಾನಹಾನಿ ಪ್ರಕರಣದ ವಿಚಾರಣೆ ನಡೆಸಿದ ಮೇಯೋ ಹಾಲ್ ಬಳಿಯ 29ನೇ ಸೆಷನ್ಸ್ ಕೋರ್ಟ್, ಶ್ರುತಿ ಹರಿಹರನ್ ವಾದ ಆಲಿಸುವ ಅವಶ್ಯಕತೆ ಇದೆ. ಆದ್ದರಿಂದ ಪ್ರತಿಕ್ರಿಯೆ ಸಲ್ಲಿಸುವಂತೆ ಶ್ರುತಿಗೆ ನೋಟಿಸ್ ನೀಡಿ, ವಿಚಾರಣೆಯನ್ನು ಅಕ್ಟೋಬರ್ 29ಕ್ಕೆ ಮುಂದೂಡಿದೆ.

ತಮ್ಮ ವಾದವನ್ನು ಕೇಳಬೇಕು ಎಂದು ವಿಚಾರಣೆ ವೇಳೆ ಶ್ರುತಿ ಹರಿಹರನ್ ಪರ ವಕೀಲರು ಹೇಳಿದ್ದರು. ಹೀಗಾಗಿ ವಾದ ಆಲಿಸಬೇಕೆಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

ನಿನ್ನೆ ಶ್ರುತಿ ಹರಿಹನ್ ವಿರುದ್ಧ ಸಿವಿಲ್‌ ಕೋರ್ಟ್‌ನಲ್ಲಿ ಧ್ರುವ ಸರ್ಜಾ ಮೂಲಕ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದ ಅರ್ಜುನ್ ಸರ್ಜಾ, 5 ಕೋಟಿ ರೂ. ಪರಿಹಾರ ನೀಡಲು ಕೇಳಿದ್ದರು. ಅಲ್ಲದೆ ಪ್ರಕರಣ ಕುರಿತಂತೆ ಯಾವುದೇ ಬಹಿರಂಗ ಹೇಳಿಕೆ ನೀಡದಂತೆ ಶ್ರುತಿ ಹರಿಹರನ್‌ಗೆ ನಿರ್ಬಂಧ ಹೇರಬೇಕೆಂದು ಅರ್ಜುನ್ ಸರ್ಜಾ ಕೋರಿದ್ದರು. (ದಿಗ್ವಿಜಯ ನ್ಯೂಸ್)