ಅರ್ಜುನ್‌ ಸರ್ಜಾ ವಿರುದ್ಧದ ಆರೋಪದ ಹಿಂದೆ ಹಿರಿಯ ನಟರ ಕೈವಾಡ: ಪ್ರಶಾಂತ್‌ ಸಂಬರಗಿ

ಬೆಂಗಳೂರು: ಸ್ಯಾಂಡಲ್‌ವುಡ್‌ನಾದ್ಯಂತ ಬೆಂಕಿ ಬಿರುಗಾಳಿಯನ್ನೇ ಎಬ್ಬಿಸಿರುವ ಮೀ ಟೂ ಅಭಿಯಾನದ ಅಡಿ ನಟಿ ಶ್ರುತಿ ಹರಿಹರನ್‌ ಅವರು ಅರ್ಜುನ್‌ ಸರ್ಜಾ ಅವರ ವಿರುದ್ಧ ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪದ ಹಿಂದೆ ಸ್ಯಾಂಡಲ್​ವುಡ್​ನ ಇಬ್ಬರು ಹಿರಿಯ ನಟರು ಭಾಗಿಯಾಗಿದ್ದಾರೆ ಎಂದು ಅರ್ಜುನ್‌ ಸರ್ಜಾ ಆಪ್ತರಾದ ಪ್ರಶಾಂತ್‌ ಸಂಬರಗಿ ಆರೋಪಿಸಿದ್ದಾರೆ.

ವಿವಾದ ಕುರಿತು ಫಿಲಂಛೇಂಬರ್​ನಲ್ಲಿ ಇಂದು ಸಭೆ ಆರಂಭವಾದ ಸಮಯದಲ್ಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಟೂ ಎನ್ನುವುದು ಪೇಯ್ಡ್​​ ಕ್ಯಾಂಪೇನ್​​. ಕರ್ನಾಟಕದ ಇಬ್ಬರು ಹಿರಿಯ ನಟರು ಇದರಲ್ಲಿ ಭಾಗಿಯಾಗಿದ್ದಾರೆ. ಇದರಲ್ಲಿ ಕ್ರಿಶ್ಚಿಯನ್ ಮಿಷನರಿಗಳ ಕೈವಾಡವಿದೆ. ಶ್ರುತಿ ವಿರುದ್ಧ ಈಗಾಗಲೇ 5 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದ್ದು, ಮತ್ತೆರಡು ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಹೇಳಿದರು.

ಹೇಳಿ ಕೇಳಿ ಅರ್ಜುನ್‌ ಸರ್ಜಾ ಅವರು ಆಂಜನೇಯನ ಭಕ್ತರು. ಹೀಗಾಗಿ ತಮಿಳುನಾಡಿನಲ್ಲಿ ಹನುಮ ಮಂದಿರವನ್ನು ಕಟ್ಟಿಸುತ್ತಿದ್ದಾರೆ. ಆರೋಪಗಳ ಮೂಲಕ 25 ಕೋಟಿ ರೂ. ವೆಚ್ಚದ ಹನುಮಾನ್​ ಮಂದಿರಕ್ಕೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ಡಿಜಿಟಲ್​​​​ ಕ್ಯಾಂಪೇನ್ ಇದು. ಹಿರಿಯ ಕಲಾವಿದರ ಹೆಸರು ಪೊಲೀಸ್ ತನಿಖೆಯಿಂದ ಬಯಲಾಗಬೇಕು ಎಂದು ತಿಳಿಸಿದರು.

ಮೀಟೂ ಕ್ಯಾಂಪೇನ್​​​​​​ನನ್ನು ಮಿಸ್​​ ಯೂಸ್​ ಮಾಡಿದ್ದಾರೆ. ಶ್ರುತಿ ಹರಿಹರನ್ ವಿರುದ್ಧ ಕ್ರಿಮಿನಲ್​ ಕೇಸ್ ದಾಖಲಿಸಿದ್ದೇವೆ. ಅರ್ಜುನ್ ಸರ್ಜಾರ ತೇಜೋವಧೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಫಂಡ್​​ ಬಳಸಿ ಶ್ರುತಿ ಈ ರೀತಿ ಆರೋಪ ಮಾಡಿದ್ದಾರೆ. 400 ಪುಟಗಳ ಮಾಹಿತಿಯುಳ್ಳ ದೂರು ದಾಖಲಿಸಲಾಗಿದೆ ಎಂದರು. (ದಿಗ್ವಿಜಯ ನ್ಯೂಸ್)