#Me Too: ಅರ್ಜುನ್‌ ಸರ್ಜಾ, ಶ್ರುತಿ ಹರಿಹರನ್‌ ಅವರೇ ಅಂತಿಮ ತೀರ್ಮಾನ ಮಾಡಲಿ ಎಂದ ಅಂಬಿ

ಬೆಂಗಳೂರು: ನಟಿ ಶ್ರುತಿ ಹರಿಹರನ್‌ ಅವರು ಅರ್ಜುನ್‌ ಸರ್ಜಾ ಅವರ ವಿರುದ್ಧ ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಪಟ್ಟಂತೆ, ಎಲ್ಲ ಹಿರಿಯರು ಅವರ ಅಭಿಪ್ರಾಯವನ್ನು ಕೇಳಿದ್ದೇವೆ. ಅಂತಿಮ ನಿರ್ಧಾರವನ್ನು ಅವರಿಗೆ ಬಿಟ್ಟಿದ್ದು, ಕಾಲಾವಕಾಶ ನೀಡಲಾಗಿದೆ ಎಂದು ನಟ ಅಂಬರೀಶ್‌ ತಿಳಿಸಿದರು.

ಫಿಲ್ಮ್‌ ಛೇಂಬರ್‌ನಲ್ಲಿ ನಡೆದ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾರದ್ದು ತಪ್ಪು, ಯಾರದ್ದು ಸರಿ ಎಂದು ಹೇಳಲಾಗುವುದಿಲ್ಲ. ಯಾಕೆಂದರೆ ನಾನು ಘಟನೆಯನ್ನು ನೋಡಿಲ್ಲ. ಅವರವರ ಭಾವಕ್ಕೆ ಅವರವರು ಸರಿ ಎಂದು ಮಾತನಾಡುತ್ತಾರೆ. ನಾನು ಯಾರ ಪರವೂ ಇಲ್ಲ, ವಿರೋಧವು ಇಲ್ಲ ಎಂದು ಹೇಳಿದರು.

ಅಮಿತಾಬ್‌ ಬಚ್ಚನ್‌ಗೂ ಮೀ ಟೂ ಬಿಸಿ ತಟ್ಟಿದೆ. ಮೊದಲೆಲ್ಲ ನಮ್ಮ ಸಮಸ್ಯೆಗಳನ್ನು ಇಲ್ಲಿಯೇ ಬಗೆಹರಿಸಿಕೊಳ್ಳುತ್ತಿದ್ದೆವು. ಇದೇ ಮೊದಲ ಬಾರಿಗೆ ಕೋರ್ಟ್‌ ಮೆಟ್ಟಿಲೇರಿದ ಪ್ರಕರಣವಾಗಿದೆ. ಸಿನಿಮಾದವರಿಗೆ ಜಾತಿಯೇ ಇಲ್ಲ. ಎಲ್ಲರ ಋಣವು ಸಿನಿಮಾದವರ ಮೇಲಿದೆ. ಪ್ರಕರಣದಲ್ಲಿ ಜಾತಿ, ಧರ್ಮದ ಬಣ್ಣ ಬಳಿಯುವವರು ಮೂರ್ಖರು ಎಂದು ತಿಳಿಸಿದರು.

ತಕ್ಷಣವೇ ಬಗೆಹರಿಸುವಂತ ವಿಷಯ ಅಲ್ಲ. ಹಾಗಾಗಿ ಇಬ್ಬರಿಗೂ ಸಮಯ ನೀಡಲಾಗಿದ್ದು, ಅವರ ಕುಟುಂಬಗಳ ಜತೆ ಚರ್ಚಿಸಿ ನಿರ್ಧರಿಸುತ್ತಾರೆ. ನೋವು ಪಟ್ಟಿರುವವರು ಅವರು ಹಾಗಾಗಿ ನಾವು ದಬ್ಬಾಳಿಕೆ ಮಾಡಲಾಗುವುದಿಲ್ಲ. ಸರ್ಜಾ ಕೂಡ ನಿರ್ದೇಶಕರಾಗಿ ಮಗಳನ್ನೇ ಹಾಕಿಕೊಂಡು ಸಿನಿಮಾ ಮಾಡಿದ್ದಾರೆ. ಇಬ್ಬರು ಕೂಡ ಅವರವರದ್ದನ್ನೇ ಹೇಳುತ್ತಾರೆ. ಕಾದು ನೋಡೋಣ ಎಂದು ಹೇಳಿದರು.

ಮೀ ಟೂ ನಲ್ಲಿ ಸಾಕಷ್ಟು ಕ್ಲಾಸ್‌ಗಳಿವೆ ಎಂದು ಕೇಳಿದ್ದೇನೆ. ಹಾಗಾಗಿ ಚಿತ್ರರಂಗಕ್ಕೆ ಯಾವುದೇ ಕಪ್ಪುಚುಕ್ಕೆ ಉಂಟಾಗುವುದಿಲ್ಲ. ಚಿತ್ರರಂಗದ ಸಮಸ್ಯೆಗಳಲ್ಲಿ ಹೊರಗಿನವರ ಪ್ರವೇಶವಾಗಬಾರದು. (ದಿಗ್ವಿಜಯ ನ್ಯೂಸ್)