ಆರೋಪಕ್ಕೆ ಕಾಲವೇ ಉತ್ತರಿಸಲಿದೆ, ಸಂಧಾನದ ಮಾತೇ ಇಲ್ಲ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ: ಅರ್ಜುನ್‌ ಸರ್ಜಾ

ಬೆಂಗಳೂರು: ಆರೋಪ ಹೊತ್ತಿರುವ ವೇಳೆಯಲ್ಲಿ ನಾನು ಮಾತನಾಡುತ್ತಿರುವುದು ವಿಷಾದಕರ. ನನ್ನ ವಿರುದ್ಧದ ಆರೋಪದಿಂದ ತುಂಬಾನೆ ನೋವಾಗಿದೆ. ಅದನ್ನು ವಿವರಿಸಲು ಸಾಧ್ಯವಿಲ್ಲ ಎಂದು ನಟ ಅರ್ಜುನ್‌ ಸರ್ಜಾ ತಿಳಿಸಿದ್ದಾರೆ.

ನಟಿ ಶ್ರುತಿ ಹರಿಹರನ್‌ ಮತ್ತು ಸರ್ಜಾ ಅವರೊಂದಿಗೆ ಫಿಲ್ಮ್‌ ಛೇಂಬರ್‌ನಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ಚಿತ್ರರಂಗದಲ್ಲಿ ಪ್ರತಿ ಕಲಾವಿದರು, ನಿರ್ಮಾಪಕರಿಗೂ ವಾಣಿಜ್ಯ ಮಂಡಳಿ ತಾಯಿಯ ಹಾಗೆ. ಸಮಸ್ಯೆ ಬಗ್ಗೆ ವಿಚಾರಿಸಲು ಇಲ್ಲಿಗೆ ಕರೆದರು. ಅವರ ಬಗ್ಗೆ ನನಗೆ ನನ್ನ ತಂದೆ ಕಾಲದಿಂದಲೂ ಗೌರವ ಇದೆ ಎಂದರು.

ಚಿತ್ರರಂಗ ಸುಗಮವಾಗಿ ಚೆನ್ನಾಗಿರಬೇಕು ಎನ್ನುವುದು ಎಲ್ಲರ ಅಭಿಪ್ರಾಯ. ನನ್ನ ನೋವು ನನ್ನೊಬ್ಬನದ್ದಲ್ಲ. ನನ್ನದೇ ಆಗಿದ್ದರೆ ಇದು ನನಗೆ ಚಿಕ್ಕ ವಿಷಯ. ನಾನು ಮರೆತುಬಿಡುತ್ತಿದ್ದೆ. ಆದರೆ, ನನ್ನ ಕುಟುಂಬ, ನನ್ನ ಅಭಿಮಾನಿಗಳು ಸೇರಿ ತಮಿಳುನಾಡು, ಕೇರಳದ ಜನರಿಗೂ ನೋವಾಗಿದೆ. ಎಲ್ಲೆಡೆ ನನ್ನ ತೇಜೋವಧೆಗೆ ಕಾಣದ ಕೈಗಳಿಂದ ಪ್ರಯತ್ನಿಸಲಾಗುತ್ತಿದೆ.

ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ

ಯಾವುದೇ ಕಾರಣಕ್ಕೂ ಸಂಧಾನದ ಮಾತೇ ಇಲ್ಲ. ಅಮಾಯಕರು ಇದಕ್ಕೆ ಬಲಿಯಾಗಬಾರದು. ಹಾಗಾಗಿ ಈ ಪ್ರಕರಣ ಒಂದು ಉದಾಹರಣೆಯಾಗಬೇಕು. ಕಾಲವೇ ಉತ್ತರಿಸಲಿದೆ. ಪ್ರಕರಣ ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದ್ದು, ಅಪರಾಧಿ ಯಾರು ಎಂಬುದು ತಿಳಿಯುತ್ತದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ. ಕಾನೂನಿನ ಅಡಿಯಲ್ಲಿ ಎಲ್ಲರೂ ಒಂದೇ ಹಾಗಾಗಿ ನ್ಯಾಯಾಲಯಕ್ಕೆ ನಾನು ಹೋಗಿದ್ದೇನೆ ಎಂದು ಹೇಳಿದರು.

ಉತ್ತಮ ವೇದಿಕೆ

ಮೀ ಟೂ ಅಭಿಯಾನ ಉತ್ತಮ ವೇದಿಕೆ. ಒಂದು ಹೆಣ್ಣು ತನಗಾದ ನೋವನ್ನು ಧೈರ್ಯದಿಂದ ಬಂದು ಹೇಳಿದರೆ ತುಂಬಾ ಖುಷಿ ಪಡುತ್ತಿದ್ದೆ. ಆದರೆ, ಇದು ದುರುಪಯೋಗವಾಗುತ್ತಿದೆ. ಎಷ್ಟೋ ಜನ ಹೆಣ್ಣು ಮಕ್ಕಳು ನಿಜಕ್ಕೂ ದೌರ್ಜನ್ಯ ಅನುಭವಿಸುತ್ತಿರುವವರ ಪರ ಹೋರಾಡೋಣ. ಆದರೆ, ಕೈ ಹಿಡಿದರು. ಊಟಕ್ಕೆ ಕರೆದರೂ ಎನ್ನುವುದಕ್ಕೆ ದುರ್ಬಳಕೆಯಾಗುತ್ತಿದೆ ಎಂದರು.