ಅರ್ಜುನ್​ ಸರ್ಜಾ ಸುಸಂಸ್ಕೃತವಂತ…ಸಿಕ್ಕಿದ್ದೇ ಅವಕಾಶವೆಂದು ಮಾತನಾಡಬಾರದು: ನಟ ಜಗ್ಗೇಶ್​

ಮಂಡ್ಯ: ನಟ ಅರ್ಜುನ್​ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್​ ಮೀ ಟೂ ಆರೋಪ ಮಾಡಿದ ಬೆನ್ನಲ್ಲೇ ಪರ ವಿರೋಧ ಹೇಳಿಕೆಗಳು ಹೆಚ್ಚಾಗಿವೆ. ಈಗ ಹಿರಿಯ ನಟ ಜಗ್ಗೇಶ್​ ಅರ್ಜುನ್​ ಸರ್ಜಾ ಪರ ನಿಂತಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ಮಾತನಾಡಿ, ಅರ್ಜುನ್​ ಸರ್ಜಾ ಮಹಾನ್​ ಸಾಧು ವ್ಯಕ್ತಿ. ಸುಸಂಸ್ಕೃತ. ಯಾರನ್ನೂ ಏಕವಚನದಲ್ಲಿ ಸಹ ಮಾತನಾಡಿಸುವುದಿಲ್ಲ. ಡಾ. ರಾಜ್​, ಡಾ. ವಿಷ್ಣುವರ್ಧನ್​ ಬಿಟ್ಟರೆ ಸರಳತೆ ಮೈಗೂಡಿಸಿಕೊಂಡಿರುವ ಜಂಟಲ್​ಮ್ಯಾನ್​. ಈ ವಿಚಾರದಲ್ಲಿ ಶ್ರುತಿ ಹರಿಹರನ್​ ತಪ್ಪು ಮಾಡುತ್ತಿದ್ದಾರೆ ಎಂದೆನಿಸುತ್ತದೆ ಎಂದು ಹೇಳಿದರು.

ಶ್ರುತಿ ಹರಿಹರನ್ ತತ್​ಕ್ಷಣ ಪ್ರತಿಕ್ರಿಯೆ ಮಾಡಬೇಕಿತ್ತು. ಈ ಪ್ರಕರಣ ರಾಜಕೀಯ ತಿರುವು ಪಡೆಯುತ್ತಿದೆ. ಶ್ರುತಿಯವರು ಮಾಡಿದ ಆರೋಪ ಸರಿಯಲ್ಲ. ಅರ್ಜುನ್​ ಅವರ 35 ವರ್ಷದ ಸಿನಿಮಾ ಕೃಷಿಯನ್ನು ಶ್ರುತಿ ಒಂದೇ ದಿನಕ್ಕೆ ಹಾಳು ಮಾಡಿದ್ದಾರೆ. ಇದು ಅರ್ಜುನ್​ ಸರ್ಜಾ ಅವರನ್ನು ಕೊಲೆ ಮಾಡಿದಂತೆ ಎನಿಸುತ್ತಿದೆ ಎಂದರು.

ಪ್ರಕಾಶ್​ ರೈ ದೇವಲೋಕದಿಂದ ಬಂದವರು

ಬಹುಭಾಷಾ ನಟ ಪ್ರಕಾಶ್​ ರೈ ಒಬ್ಬ ಜಂಟಲ್​ಮ್ಯಾನ್​. ದೇಶದ ಮಹಾನ್​ ನಾಯಕ. ಜನರಿಗೆ ತೊಂದರೆ ಆದರೆ ಅವರಿಗೆ ಸ್ಪಂದಿಸಲು ಬರುತ್ತಾರೆ. ಸರ್ಜಾ ಸ್ಲಂನಿಂದ ಬಂದಿರೋರು, ಪ್ರಕಾಶ್​ ರೈ ದೇವಲೋಕದಿಂದ ಬಂದಿರುವವರು. ಪಾಪ ಯಾರಿಗೆ ಸಮಸ್ಯೆಯಾದರೂ ಅಲ್ಲಿಗೆ ಬರುತ್ತಾರೆ ಎಂದು ಪ್ರಕಾಶ್​ ರೈ ಕಾಲೆಳೆದರು. ಸಿಕ್ಕಿದ್ದೇ ಚಾನ್ಸ್​ ಅಂತ ಬಾಯಿಗೆ ಬಂದಾಂಗೆ ಮಾತನಾಡುವುದು ತಪ್ಪು. ಯಾವತ್ತೂ ಕಲಾವಿದ ಕಲಾವಿದರನ್ನು ಬಿಟ್ಟುಕೊಡಬಾರದು. ನಾವೆಲ್ಲರೂ ಒಂದೇ ಕುಟುಂಬ ಎಂದು ಹೇಳಿದರು.

ಚಿತ್ರರಂಗ ಗಂಧರ್ವ ವಿದ್ಯೆ. ಕಳ್ಳ, ವೇಶ್ಯೆ… ಹೀಗೆ ನಾನಾ ಪಾತ್ರ ಮಾಡಬೇಕು. ಪರಕಾಯ ಪ್ರವೇಶ ಮಾಡಬೇಕು. ನಾನು ಯಾವತ್ತೂ ಸ್ತ್ರೀಯರ ಪರವಾಗಿ ಇರುತ್ತೇನೆ. ನಾನು 36 ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದೇನೆ. ಆಗ ನಮ್ಮ ಕಾಲದಲ್ಲಿ ಯಾವುದೇ ಟೆಕ್ನಾಲಜಿ ಇರಲಿಲ್ಲ. ಈಗ ತುಂಬ ಮುಂದುವರಿದ ಕಾಲದಲ್ಲಿದ್ದೇವೆ. ಯಾವುದೇ ಹೆಣ್ಣುಮಗಳು ಏನಾದರೂ ಶೋಷಣೆಗೆ ಒಳಗಾದರೆ ಆ ಸ್ಥಳದಿಂದಲೇ ಆನ್​ಲೈನ್​ನಿಂದ ಪೊಲೀಸರಿಗೆ ದೂರು ನೀಡಬಹುದು. ಅಧಿಕಾರಿಗಳನ್ನು ಟ್ಯಾಗ್​ ಮಾಡಿ ವಿಷಯ ತಿಳಿಸಬಹುದು. ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ದೇಶಕರ ಸಂಘ, ಕಲಾವಿದರ ಸಂಘಕ್ಕೆ ದೂರು ಕೊಡಬಹುದು. ಅಲ್ಲಿ ಕೂಡ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದರು.