ಕೋರ್ಟ್​ನಲ್ಲೇ ಮೀಟೂ ಫೈಟ್

ಬೆಂಗಳೂರು: ‘ವಿಸ್ಮಯ’ ಚಿತ್ರದ ಚಿತ್ರೀಕರಣ ವೇಳೆ ನಟ ಅರ್ಜುನ್ ಸರ್ಜಾ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮೀಟೂ ಅಭಿಯಾನದಲ್ಲಿ ನಟಿ ಶ್ರುತಿ ಹರಿಹರನ್ ಮಾಡಿರುವ ಆರೋಪಕ್ಕೆ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹಿರಿಯ ನಟ ಅಂಬರೀಷ್ ನೇತೃತ್ವದಲ್ಲಿ ಗುರುವಾರ ನಡೆದ ಸಂಧಾನ ಸಭೆಯಲ್ಲಿ ಅರ್ಜುನ್ ಮತ್ತು ಶ್ರುತಿ ಸಂಧಾನದಿಂದ ಹಿಂದೆ ಸರಿದು ಕಾನೂನಾತ್ಮಕವಾಗಿ ಹೋರಾಟಕ್ಕೆ ಮುಂದಾಗಿದ್ದಾರೆ.

ಇಬ್ಬರೂ ತಾವೇ ಸರಿ ಎನ್ನುತ್ತಿದ್ದಾರೆ. ತಿಂಗಳ ಸಮಯ ನೀಡಿದ್ದೇವೆ. ಸಂಧಾನಕ್ಕೆ ಒಪ್ಪಿದರೆ ಒಳ್ಳೆಯದು, ಇಲ್ಲದಿದ್ದರೆ ಅವರಿಗೆ ಬಿಟ್ಟಿದ್ದು. ಇಲ್ಲಿ ನಾವು ಯಾರ ಪರ-ವಿರೋಧ ಇಲ್ಲ ಎಂದು ಅಂಬರೀಷ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಧ್ಯಾಹ್ನದಿಂದಲೇ ಅರ್ಜುನ್-ಶ್ರುತಿ ಜತೆ ನಾನು, ನಿರ್ವಪಕರಾದ ಮುನಿರತ್ನ, ರಾಕ್​ಲೈನ್ ವೆಂಕಟೇಶ್, ಮಂಡಳಿ ಅಧ್ಯಕ್ಷ ಎಸ್.ಎ. ಚಿನ್ನೇಗೌಡ, ಸಾ.ರಾ. ಗೋವಿಂದು ಸುದೀರ್ಘ ಚರ್ಚೆ ನಡೆಸಿದರೂ, ಒಮ್ಮತಕ್ಕೆ ಬರಲಿಲ್ಲವೆಂದರು.

ಉದ್ದೇಶಪೂರ್ವಕ ತೇಜೋವಧೆ: ಉದ್ದೇಶಪೂರ್ವಕವಾಗಿ ನನ್ನ ತೇಜೋವಧೆ ಮಾಡಿದ್ದಾರೆ. ತಪ್ಪಿಲ್ಲದಿದ್ದರೂ ತಪ್ಪಿತಸ್ಥನಾಗಿ ಕಾಣಿಸುತ್ತಿದ್ದೇನೆ. ಸಂಧಾನ ಮಾಡಿಕೊಂಡರೆ ನನ್ನದೇ ತಪ್ಪೆಂದುಕೊಳ್ಳುತ್ತಾರೆ. ಹೀಗಾಗಿ ರಾಜಿ ಪ್ರಶ್ನೆಯೇ ಇಲ್ಲ ಎಂದು ಸರ್ಜಾ ಸ್ಪಷ್ಟಪಡಿಸಿದರು.

1.5 ಕೋಟಿ ರೂ. ಆಫರ್!: 1.5 ಕೋಟಿ ರೂ. ನೀಡಿದರೆ ಸಂಧಾನಕ್ಕೆ ಸಿದ್ಧರಿರುವುದಾಗಿ ರಾಮ್ ಎಂಬುವರು ಕರೆ ಮಾಡಿದ್ದರು ಎಂದು ಸರ್ಜಾ ಅವರ ಮ್ಯಾನೇಜರ್ ಶಿವು ಆರೋಪಿಸಿದ್ದಾರೆ. ಈ ಆರೋಪವನ್ನು ಶ್ರುತಿ ಅಲ್ಲಗಳೆದಿದ್ದಾರೆ.

ಕಾನೂನು ಮೊರೆ: ಅರ್ಜುನ್-ಶ್ರುತಿ ಪ್ರಕರಣ ಈಗ ಪೊಲೀಸ್ ಠಾಣೆ, ಕೋರ್ಟ್ ಮೆಟ್ಟಿಲೇರಿದೆ. ಶ್ರುತಿ ವಿರುದ್ಧ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್​ಗೆ ಸರ್ಜಾ ಅವರ ವ್ಯವಸ್ಥಾಪಕ ಶಿವಾರ್ಜುನ್ ದೂರು ನೀಡಿದ್ದಾರೆ. ಕಮಿಷನರ್ ಸೂಚನೆ ಮೇರೆಗೆ ಸೈಬರ್ ಕ್ರೖೆಂ ಠಾಣೆ ಪೊಲೀಸರು ಗುರುವಾರ ಶ್ರುತಿ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ. ಮತ್ತೊಂದೆಡೆ ಮೇಯೊಹಾಲ್ ಕೋರ್ಟ್ ನಲ್ಲಿ ಶ್ರುತಿ ವಿರುದ್ಧ ಅರ್ಜುನ್ -ಠಿ;5 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಶ್ರುತಿ ಪೋಸ್ಟ್ ಮಾಡಿದ್ದು, ಕಕ್ಷಿದಾರರ ತೇಜೋವಧೆ ಆಗುತ್ತಿದೆ. ಇದಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡುವಂತೆ ಸರ್ಜಾ ಪರ ವಕೀಲ ಶ್ಯಾಮಸುಂದರ್ ಮನವಿ ಮಾಡಿದರು. ನ್ಯಾಯಾಲಯ ತಾತ್ಕಾಲಿಕ ತಡೆ ನೀಡುವ ಸಂಬಂಧ ತೀರ್ಪನ್ನು ಶುಕ್ರವಾರಕ್ಕೆ ಕಾಯ್ದಿರಿಸಿತು.

ತಪ್ಪು ಮಾಡಿಲ್ಲ, ಕ್ಷಮೆ ಕೇಳುವುದಿಲ್ಲ

ವಾಣಿಜ್ಯ ಮಂಡಳಿ ಸೂಚನೆ ಮೇರೆಗೆ ನಾನು ಕೋರ್ಟ್ ಮೆಟ್ಟಿಲೇರಿಲ್ಲ. ಸರ್ಜಾ ಅವರನ್ನು ಕರೆಸಿ ಸಭೆ ಮಾಡುತ್ತೇವೆ. ಬಳಿಕ ನೀವೇನಾದರೂ ಮಾಡಿಕೊಳ್ಳಿ ಎಂದಿದ್ದರು. ಸಭೆಯಲ್ಲಿ ಶುಕ್ರವಾರ ಬೆಳಗ್ಗೆವರೆಗೆ ಕಾಯುವಂತೆ ಸೂಚಿಸಿದ್ದಾರೆ. ಹೀಗಿರುವಾಗಲೇ ನನ್ನ ಮೇಲೆ 2 ಕೇಸ್ ದಾಖಲಿಸಿದ್ದಾರೆ. ಹಾಗಾಗಿ ನಾನೂ ಕಾನೂನು ರೀತಿ ಮುಂದುವರಿಯುತ್ತೇನೆ ಎಂದ ಶ್ರುತಿ ಸುದ್ದಿಗೋಷ್ಠಿಯಿಂದ ಹೊರನಡೆದರು.

ಕ್ರೖೆಸ್ತ ಮಿಷನರಿಗಳ ಕೈವಾಡ

ಶ್ರುತಿ ಆರೋಪದ ಹಿಂದೆ ಇಬ್ಬರು ಹಿರಿಯ ನಟರು ಇದ್ದಾರೆ. ಮೀಟೂ ಪೇಯ್್ಡ ಅಭಿಯಾನ. ಇದರ ಹಿಂದೆ ಕ್ರೖೆಸ್ತ ಮಿಷನರಿಗಳ ಕೈವಾಡವಿದೆ ಎಂದು ಅರ್ಜುನ್ ಆಪ್ತ ಪ್ರಶಾಂತ್ ಸಂಬರಗಿ ಹೇಳಿದ್ದಾರೆ. ಸರ್ಜಾ 25 ಕೋಟಿ ರೂ. ವೆಚ್ಚದಲ್ಲಿ ಆಂಜನೇಯ ದೇವಸ್ಥಾನ ಕಟ್ಟಿಸುತ್ತಿದ್ದಾರೆ. ಅದಕ್ಕೆ ವಿರೋಧ ವ್ಯಕ್ತಪಡಿಸಲು ಅಂತಾರಾಷ್ಟ್ರೀಯ ಫಂಡ್ ಬಳಸಿ ಶ್ರುತಿ ಆರೋಪಿಸುತ್ತಿದ್ದಾರೆ. ಈ ಸಂಬಂಧ ಕ್ರಿಮಿನಲ್ ದೂರು ದಾಖಲಿಸಲಾಗಿದೆ ಎಂದರು.

ನಮ್ಮದು ಸುವರ್ಣಯುಗ, ರಾಜಕುಮಾರ್ ಅವರಿದ್ದಂಥ ಕಾಲ. ನಾನು 75 ಚಿತ್ರಗಳಲ್ಲಿ ನಟಿಸಿದ್ದೇನೆ, ಅಂಥ ಯಾವ ಅನುಭವವೂ ಆಗಿಲ್ಲ. ಅರ್ಜುನ್ ಸರ್ಜಾ ಒಬ್ಬ ಸಜ್ಜನ ನಟ. ಹಾಗೇ ಮೀಟೂ ಅಭಿಯಾನದಿಂದ ಮಹಿಳೆಯರಿಗೆ ಬಲ ಬಂದಿದೆ.

| ಜಯಮಾಲಾ ನಟಿ-ಸಚಿವೆ