ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್​ ನೀಡಿರುವ ದೂರಿನ ಸುರಿಮಳೆ ಏನು?

ಬೆಂಗಳೂರು: ಬಹುಭಾಷಾ ನಟ ಅರ್ಜುನ್​ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್​ ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನ ಪ್ರತಿಯಲ್ಲಿ ಅರ್ಜುನ್​ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದಾರೆ.

ಅರ್ಜುನ್ ಸರ್ಜಾ ವಿರುದ್ಧ ಐಪಿಸಿ ಸೆಕ್ಷನ್ 354, 354 ಎ, 509ರ ಅಡಿ ಎಫ್​​ಐಆರ್ ದಾಖಲಾಗಿದ್ದು, ದೂರಿನಲ್ಲಿ ಶ್ರುತಿ ತನ್ನ ಹೆಸರಿನ ಮುಂದೆ ವೈಫ್​ ಆಫ್​ ರಾಮ್​ ಕುಮಾರ್​ ಎಂದು ನಮೂದಿಸಿದ್ದಾರೆ.

ಹಾಗಾದರೆ ದೂರಿನ ಪ್ರತಿಯಲ್ಲಿರುವುದಾದರೂ ಏನು?

  1. 2015 ನವೆಂಬರ್​​ನಲ್ಲಿ ಹೆಬ್ಬಾಳದ ಪ್ರೆಸಿಡೆನ್ಸಿ ಕಾಲೇಜು ಬಳಿಯ ಬಂಗಲೆಯಲ್ಲಿ ವಿಸ್ಮಯ ಚಿತ್ರದ ಚಿತ್ರೀಕರಣ ನಡೆದಿತ್ತು. ಅಂದು ಬೆಳಗ್ಗೆ 7.30ರಿಂದ ಸಂಜೆ 6.30ರ ವರೆಗೆ ಚಿತ್ರೀಕರದ ಶೆಡ್ಯೂಲ್​ ಇದ್ದು, ಅದು ರೊಮ್ಯಾಂಟಿಕ್ ಸೀನ್ ಶೂಟಿಂಗ್ ಆಗಿತ್ತು. ಆ ದೃಶ್ಯದಲ್ಲಿ ನಾನು -ಸರ್ಜಾ ತಬ್ಬಿಕೊಳ್ಳುವ ಸೀನ್ ಇತ್ತು. ನಿರ್ದೇಶಕರ ಸೂಚನೆ ಮೇರೆಗೆ ನಾವು ರಿಹರ್ಸಲ್ ನಡೆಸುತ್ತಿದ್ದೆವು. ಆದರೆ ಈ ಸಮಯದಲ್ಲಿ ಅರ್ಜುನ್ ಸರ್ಜಾ ನನ್ನ ಒಳ ಉಡುಪು ಮುಟ್ಟಿ ಬಿಗಿಯಾಗಿ ಅಪ್ಪಿಕೊಳ್ಳೋಕೆ ಮುಂದಾದ್ರು. ಆಗ ನಿರ್ದೇಶಕರು ಈ ಸೀನ್​​ ಅನ್ನು ಇನ್ನೂ ಇಂಪ್ರೂವೈಸ್ ಮಾಡೋಣ ಅಂದ್ರು. ನಾನು ನಿರ್ದೇಶಕರ ಬಳಿ ರೀತಿ ನಟಿಸೋಕೆ ಸಾಧ್ಯವಿಲ್ಲ ಎಂದು ಹೇಳಿದ್ದೆ. ಆದರೂ, ಇದೇ ರೀತಿ ನಟಿಸುವಂತೆ ನನ್ನ ಮೇಲೆ ಒತ್ತಡ ಹೇರಿದರು. ಈ ವೇಳೆ ನಾನು ಸೀದಾ ಕ್ಯಾರವಾನ್​ಗೆ ಹೋಗಿ ಅಳುತ್ತಾ ಕುಳಿತುಬಿಟ್ಟೆ. ನನ್ನನ್ನು ಸಿಬ್ಬಂದಿ ಬೋರೆಗೌಡ & ಕಿರಣ್ ಸಮಾಧಾನ ಪಡಿಸಿದರು.
  2. ವಿಸ್ಮಯ ಸಿನಿಮಾದಲ್ಲಿ ಇನ್ನೊಂದು ಅದೇ ಬೆಡ್​ ಸೀನ್ ಇತ್ತು. ಈ ಸೀನ್​​​ ಮೂಲಕ ಸರ್ಜಾ ಅವರು ದುರುಪಯೋಗ ಪಡಿಸಿಕೊಳ್ಳಲು ಯತ್ನಿಸಿದರು. ಇಷ್ಟೆಲ್ಲಾ ರಾದ್ಧಾಂತ ಆದಾಗ ನಾನು ಸಹ ನಿರ್ದೇಶಕರ ಬಳಿ ಹೇಳಿಕೊಂಡಿದ್ದೆ. ಆಗ, ಅವರು ಇನ್ನು ಮುಂದೆ ರಿಹರ್ಸಲ್ ಇರುವುದಿಲ್ಲ, ಏನಿದ್ರೂ ಟೇಕ್ ಇರುತ್ತೆ ಎಂದಿದ್ದರು.
  3. ಒಂದು ದಿನ ನಾನು ನನ್ನ ತಂಡ ಕಾರಿನಲ್ಲಿ ಹೋಗುತ್ತಿದ್ದೆವು. ಬೋರೇಗೌಡ, ಕಿರಣ್​​ ಅವ್ರೊಂದಿಗೆ ನಾನು ಕಾರಲ್ಲಿ ಇದ್ದೆ. ದೇವನಹಳ್ಳಿ ಸಿಗ್ನಲ್ ಬಳಿ ನಮ್ಮ ಕಾರು ನಿಂತಿತ್ತು. ಪಕ್ಕದಲ್ಲೇ ಬಂದು ನಿಂತ ಅರ್ಜುನ್ ಸರ್ಜಾ ಕಾರಿನ ಗ್ಲಾಸ್ ಇಳಿಸಿ, ‘‘COME KNOW, TO RESORT’’ ಅಂತಾ ನನ್ನನ್ನು ಕರೆದರು. ಇದರ ಹಿಂದಿನ ಉದ್ದೇಶ ಏನೂ ಅಂತಾ ನಾನು ಸರ್ಜಾಗೆ ಪ್ರಶ್ನಿಸಿದೆ. ಅಲ್ಲಿ ಆಹ್ಲಾದಕರವಾದ ಸಮಯವನ್ನು ಕಳೆಯೋಣ ಬಾ ಅಂದರು. ಪದೇ ಪದೆ ನಾನು ನಿನ್ನನ್ನು ಕರೀತಾ ಇದ್ದೀನಿ, ನೀನು ಬರ್ತಿಲ್ಲ. ‘‘ I HAVE FULL TIME TODAY’’ ಅಂತಾ ಸರ್ಜಾ ನನಗೆ ಹೇಳಿದ್ರು. ಇಷ್ಟೇ ಅಲ್ಲ, ‘‘ THERE IS NO ONE IN MY ROOM’’ ಅಂತಾ ಹೇಳಿದ್ದರು. ಆಗ ಅವರ ಮಾತು ಕೇಳಿದಾಗ ನನಗೆ ದುಃಖ ಉಮ್ಮಳಿಸಿ ಬಂತು. ಅಳೋದನ್ನು ನೋಡುತ್ತಿದ್ದಂತೆ ಸರ್ಜಾ ಅಲ್ಲಿಂದ ಜಾಗ ಖಾಲಿ ಮಾಡಿದ್ದರು. (ದಿಗ್ವಿಜಯ ನ್ಯೂಸ್)