ಮುಸುಕಿನ ಗುದ್ದಾಟ ಬಯಲು

ಹಾವೇರಿ: ಜಿಲ್ಲೆಯ ಹಾನಗಲ್ಲ ತಾಲೂಕು ಯುವ ಕಾಂಗ್ರೆಸ್​ನಲ್ಲಿನ ಮುಸುಕಿನ ಗುದ್ದಾಟ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿಯೇ ಬಯಲಿಗೆ ಬಂದ ಘಟನೆ ಸೋಮವಾರ ಜರುಗಿತು.

ನಗರದಲ್ಲಿ ಸೋಮವಾರ ಜಿಲ್ಲಾ ಯುವ ಕಾಂಗ್ರೆಸ್​ನಿಂದ ಆಯೋಜಿಸಿದ್ದ ವಿಭಿನ್ನ ವಿಚಾರಗಳ ಮುಖಾಮುಖಿ ಕಾರ್ಯಕ್ರಮದಲ್ಲಿ ಹಾನಗಲ್ಲನ ಯುವ ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು ಅಧ್ಯಕ್ಷ ಹುದ್ದೆ ವಿಚಾರವಾಗಿ ಪರಸ್ಪರ ವಾಗ್ವಾದ ನಡೆಸಿದರು.

ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂದು ಕೆಲವರು ಆರೋಪಿಸಿ ರಾಜ್ಯಾಧ್ಯಕ್ಷರಿಗೆ ಮನವಿ ಸಲ್ಲಿಸಿದ್ದರು. ಅದರ ಕುರಿತು ತಾಲೂಕಿನ ಪದಾಧಿಕಾರಿಗಳು ಕಾರ್ಯಕರ್ತರೊಂದಿಗೆ ರಾಜ್ಯ ಘಟಕದವರು ಯಾವುದೇ ಸಭೆ, ಚರ್ಚೆ ಮಾಡದೆ ಯುವ ಘಟಕದ ಅಧ್ಯಕ್ಷ ಸ್ಥಾನದಿಂದ ತೆಗೆದಿದ್ದಾರೆ ಎಂದು ಕೆಲವರು ಆರೋಪಿಸಿದರು. ಇದಕ್ಕೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ ರಾಘವೇಂದ್ರ ಪರ ಕಾರ್ಯಕರ್ತರು ರಾಜ್ಯಾಧ್ಯಕ್ಷರ ವಿರುದ್ಧ ವಾಗ್ವಾದ ನಡೆಸಿ ಸಭೆಯಿಂದಲೇ ಹೊರನಡೆದರು.

ರಾಘವೇಂದ್ರ ತಹಶೀಲ್ದಾರ್ ಅವರನ್ನು ಹೇಳದೇ ಕೇಳದೇ ಅಧ್ಯಕ್ಷ ಸ್ಥಾನದಿಂದ ತೆಗೆದಿರುವುದಕ್ಕೆ ನಮ್ಮ ಆಕ್ಷೇಪವಿದೆ. ರಾಜ್ಯಾಧ್ಯಕ್ಷರ ಗಮನಕ್ಕೆ ಬಾರದೆ ರಾಜ್ಯ ಉಸ್ತುವಾರಿಗಳು ಹಾನಗಲ್ಲಗೆ ಬಂದಾಗ ರಾಘವೇಂದ್ರ ತಹಶೀಲ್ದಾರ್ ಅವರನ್ನು ಕರೆದುಕೊಂಡು ಕೆಲಸ ಮಾಡಿದ್ದಾರೆ. ಇದೆಲ್ಲಾ ಪಕ್ಷದ ವರ್ಚಸ್ಸಿಗೆ ತೊಂದರೆಯಾಗಲಿದೆ ಎಂದು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ನಿಂಬಣ್ಣನವರ ಆಕ್ರೋಶ ವ್ಯಕ್ತಪಡಿಸಿದರು. ಗಲಾಟೆ ನಿಯಂತ್ರಿಸುವಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿಯವರು ಸಫಲರಾದರು.

ಇದರಿಂದ ಮಾಜಿ ಸಚಿವ ಮನೋಹರ ತಹಶೀಲ್ದಾರ್​ರ ಒಂದು ಗುಂಪು, ವಿಪ ಸದಸ್ಯ ಶ್ರೀನಿವಾಸ ಮಾನೆ ಬೆಂಬಲಿಗರ ಒಂದು ಗುಂಪಾಗಿ ಹೋಳಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಹೊಸ ಅಧ್ಯಕ್ಷರ ನೇಮಕವಾಗಿಲ್ಲ…: ಈ ಕುರಿತು ಕಾರ್ಯಕರ್ತರಿಗೆ ಸ್ಪಷ್ಟನೆ ನೀಡಿದ ರಾಜ್ಯಾಧ್ಯಕ್ಷ ಬಸನಗೌಡ ಬಾರ್ದಲಿ, ಹಾನಗಲ್ಲಗೆ ಹೊಸ ಅಧ್ಯಕ್ಷರ ನೇಮಕವಾಗಿಲ್ಲ. ಕಾರ್ಯಕರ್ತರು ಈ ರೀತಿ ಗಲಾಟೆ ಸರಿಯಲ್ಲ. ಏನೇ ಸಮಸ್ಯೆ ಇದ್ದರೂ ಪ್ರವಾಸಿಮಂದಿರಕ್ಕೆ ಬನ್ನಿ ಅಲ್ಲಿ ರ್ಚಚಿಸೋಣ ಎಂದರು.

ನಗೆ ಒಂದು ಮಾತೂ ಹೇಳದೆ 13ನೇ ತಾರೀಕು ನಮೂದಿಸಿ ನನ್ನನ್ನು ಯುವ ಘಟಕದಿಂದ ತೆಗೆದು ಹಾಕಿರುವ ಆದೇಶದ ಪ್ರತಿಯನ್ನು ನನಗೂ ನೀಡದೆ ವಾಟ್ಸ್​ಪಗಳಲ್ಲಿ ತೋರಿಸುತ್ತಿದ್ದಾರೆ. ನನಗೆ ಮೊದಲೇ ಹೇಳಿದ್ದರೆ ನಾನು ಇಂದಿನ ಕಾರ್ಯಕ್ರಮಕ್ಕೆ ಕಾರ್ಯಕರ್ತರನ್ನು ಕರೆದುಕೊಂಡು ಬರುತ್ತಿರಲಿಲ್ಲ. ಇಲ್ಲಿಗೆ ಕರೆಯಿಸಿ ಈ ರೀತಿ ಮಾಡಿದ್ದು ಅವಮಾನವಲ್ಲವೇ? ಕೇಳಿದ್ದರೆ ನಾನೇ ರಾಜೀನಾಮೆ ಕೊಡುತ್ತಿದ್ದೆ.

| ರಾಘವೇಂದ್ರ ತಹಶೀಲ್ದಾರ್, ಯುವ ಕಾಂಗ್ರೆಸ್ ಅಧ್ಯಕ್ಷರು ಹಾನಗಲ್ಲ