
ಗಂಗಾವತಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ವ್ಯಾಪ್ತಿಯಲ್ಲಿ ಬೆಳೆದ ಭತ್ತಕ್ಕೆ ಬೇಡಿಕೆ ಹೆಚ್ಚಿದ್ದು, ಈ ಭಾಗದ ಅಕ್ಕಿ ಮೇಘಾಲಯ ಸೇರಿ ಅನ್ಯರಾಜ್ಯಕ್ಕೆ ರಫ್ತಾಗುತ್ತಿದೆ.
ತುಂಗಭದ್ರಾ ಜಲಾಶಯ ವ್ಯಾಪ್ತಿಯ ಗಂಗಾವತಿ, ಸಿಂಧನೂರು, ಕಾರಟಗಿ, ಸಿರುಗುಪ್ಪ, ಮಾನ್ವಿ ಭಾಗದಲ್ಲಿ ಅತಿ ಹೆಚ್ಚು ಭತ್ತ ಬೆಳೆಯಲಾಗುತ್ತಿದ್ದು, ಎಡ ಮತ್ತು ಬಲದಂಡೆ ವ್ಯಾಪ್ತಿ 3ಲಕ್ಷ ಎಕರೆ ಪ್ರದೇಶದಲ್ಲಿ ಸೋನಾ ಭತ್ತ ಬೆಳೆಯಲಾಗಿದೆ. 1020, ಕಾವೇರಿ ಸೋನಾ, ಗಂಗಾ ಕಾವೇರಿ, 15048 ಆರ್‌ಎನ್‌ಆರ್ ತಳಿಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ನೀಡುವ ತಳಿಗಳಿಗೆ ಆದ್ಯತೆ ನೀಡಲಾಗುತ್ತಿದೆ.
ಹೆಚ್ಚಿನ ಪೌಷ್ಟಿಕಾಂಶ ಮತ್ತು ನಿರೀಕ್ಷಿತ ಇಳುವರಿ ನೀಡುವ ಗಂಗಾ ಕಾವೇರಿ ಮತ್ತು ಆರೆನ್ನಾರ್ 15048 ತಳಿಗಳನ್ನು ರೈತರು ಆಯ್ಕೆ ಮಾಡಿಕೊಂಡಿದ್ದು, ಉದ್ದೇಶಿತ ತಳಿಯ ಅಕ್ಕಿಗೆ ಮೇಘಾಲಯ, ತಮಿಳುನಾಡು, ತೆಲಂಗಾಣದಲ್ಲಿ ಬೇಡಿಕೆ ಹೆಚ್ಚಾಗಿದೆ. ಮೊದಲ ಬಾರಿಗೆ ಅಕ್ಕಿಯನ್ನು ಮೇಘಾಲಯಕ್ಕೆ ರವಾನಿಸಲಾಗುತ್ತಿದ್ದು, ರೈತರು ಮತ್ತು ರೈಸ್ ಮಿಲ್ ಮಾಲೀಕರಿಗಿಂತ ದಲ್ಲಾಳಿಗಳೇ ಹೆಚ್ಚು ಖುಷ್ ಮೂಡಲಿದ್ದಾರೆ.
ಸಾಗಣೆ ಹೊಸದಲ್ಲ: ಸೋನಾ ಮಸೂರಿ ಅಕ್ಕಿಗೆ ಅಂತಾರಾಜ್ಯ ಮತ್ತು ವಿದೇಶಗಳಲ್ಲೂ ಬೇಡಿಕೆ ಹೆಚ್ಚಿದ್ದು, ಆಂಧ್ರ, ತೆಲಂಗಾಣ ಮತ್ತು ತಮಿಳುನಾಡಿಗೆ ಮಾತ್ರ ರಫ್ತು ಮೀಸಲಾಗಿತ್ತು. ಕಳೆದ ಎರಡ್ಮೂರು ವರ್ಷಗಳಿಂದ ಉತ್ತರ ಭಾರತಕ್ಕೂ ರಫ್ತು ವಿಸ್ತರಿಸಿದ್ದು, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಸೇರಿ ಬಾಂಗ್ಲ ದೇಶಕ್ಕೂ ರವಾನಿಸಲಾಗಿತ್ತು. ತುಮಕೂರು ಮತ್ತು ಬೆಂಗಳೂರು ಭಾಗಕ್ಕೆ ಸೀಮಿತವಾಗಿದ್ದ ಅಕ್ಕಿ ರಫ್ತು ಹೊರ ರಾಜ್ಯ ಮತ್ತು ದೇಶಗಳಿಗೆ ವಿಸ್ತರಿಸಿದ ಪರಿಣಾಮ ಅಕ್ಕಿ ದರವೂ ಏರಿಕೆಯಾಗಿದೆ. ಭೂ ಮತ್ತು ರೈಲ್ವೆ ಮಾರ್ಗದ ಜಾಲ ವಿಸ್ತರಿಸಿದಂತೆ ರಫ್ತು ಪ್ರಮಾಣ ಹೆಚ್ಚಾಗಿದ್ದು, ಕಳೆದ ವರ್ಷ ಶೇ.60 ಭತ್ತ ರವಾನೆಯಾಗಿದೆ. ಮುಂಗಾರು ಕೃಷಿ ಚಟುವಟಿಕೆ ಶುರುವಾಗುವ ಮುನ್ನವೇ ದಲ್ಲಾಳಿಗಳು ಸಂಗ್ರಹಿಸಿದ 3ಸಾವಿರ ಟನ್ ಭತ್ತ ಮತ್ತು ಅಕ್ಕಿಯನ್ನು ರೈಲ್ವೆ ಮೂಲಕ ರಫ್ತು ಮಾಡಲಾಗಿದೆ.
ವರದಾನವಾದ ರೈಲು ಸೇವೆ: ಭತ್ತ ಬೆಳೆಯುವವರ ಪ್ರಮಾಣ ಹೆಚ್ಚಾಗಿದ್ದರೂ ರೈಸ್‌ಮಿಲ್‌ಗಳು ಸಂಕಷ್ಟದಲ್ಲಿದ್ದರಿಂದ ಅಕ್ಕಿ ನುರಿಯುವುದು ಕಡಿಮೆಯಾಗಿತ್ತು. ಕಾರಣ ರವಾನೆ ಮಾರ್ಗದ ಸಮಸ್ಯೆ. ಗಿಣಿಗೇರಾ-ಗದ್ವಾಲ್ ರೈಲು ಮಾರ್ಗ ಗಂಗಾವತಿಗೆ ಕಾಲಿಡುತ್ತಿದ್ದಂತೆ ರಫ್ತು ಪ್ರಮಾಣ ಹೆಚ್ಚಾಗಿದ್ದು, ರೈಸ್‌ಮಿಲ್‌ಗಳು ಚೇತರಿಸಿಕೊಂಡಿವೆ. ಭೂಮಾರ್ಗಕ್ಕಿಂತ ರೈಲು ಮಾರ್ಗದ ರವಾನೆ ರೈಸ್‌ಮಿಲ್ ಮಾಲೀಕರಿಗೆ ವರವಾಗಿದ್ದು, ಸ್ಥಳೀಯ ಜಿಲ್ಲೆಗಳಗಿಂತ ಹೊರರಾಜ್ಯ ಮತ್ತು ವಿದೇಶಗಳಿಗೆ ರವಾನಿಸಲು ನೆಟ್‌ವರ್ಕ್ ಸೃಷ್ಟಿಸಿಕೊಂಡಿದ್ದಾರೆ. ಕಾರವಾರ ಮತ್ತು ವಿಶಾಖಪಟ್ಟಣ ಮೂಲಕ ಹೊರ ದೇಶಗಳಿಗೆ ರಫ್ತಾಗುತ್ತಿವೆ.
ಸ್ಥಳೀಯ ರೈಲು ಮಾರ್ಗ ಪ್ರಯಾಣಿಕರಗಿಂತ ಭತ್ತ ಮತ್ತ ಅಕ್ಕಿ ರಫ್ತು ಪ್ರಮಾಣದಿಂದಲೇ ಹೆಚ್ಚು ಆದಾಯ ನಿರೀಕ್ಷಿಸಿದೆ.
120 ದಿನಗಳಲ್ಲಿ ಇಳುವರಿ ನೀಡುವ ಆರೆನ್ನಾರ್ 15048 ತಳಿಯ ಅಕ್ಕಿಗೆ ಬೇಡಿಕೆ ಹಚ್ಚಿದ್ದು, ಗಂಗಾ ಕಾವೇರಿಗೂ ಡಿಮಾಂಡ್ ಬಂದಿದೆ. ಸಿರುಗುಪ್ಪಾದ ರೈಸ್ ಮಾಲೀಕರೊಬ್ಬರು ವಿವಿಧ ರೈಸ್ ಮಿಲ್‌ಗಳಿಂದ ಸಂಗ್ರಹಿಸಿದ 2600 ಟನ್ ಅಕ್ಕಿಯನ್ನು ಗಂಗಾವತಿ ರೈಲ್ವೆ ವ್ಯಾಗನ್‌ಗಳ ಮೂಲಕ ಮೇಘಾಲಯಕ್ಕೆ ರವಾನಿಸಿದ್ದು, ಮುಂಗಡ ಹಣ ನೀಡಿ ಅಕ್ಕಿ ಆಮದು ಮಾಡಿಕೊಳ್ಳುವ ಅಲ್ಲಿನ ಮಾರಾಟಗಾರರು ಉತ್ಸುಕರಾಗಿದ್ದಾರೆ. ಇದೇ ಕಾರಣಕ್ಕೆ ಈ ಭಾಗದ ರೈತರು ಮತ್ತು ರೈಸ್‌ಮಿಲ್ ಮಾಲೀಕರು ಹೊರ ರಾಜ್ಯ ಮತ್ತು ವಿದೇಶಗಳನ್ನು ಮೆಚ್ಚಿಕೊಂಡಿದ್ದಾರೆ.
ಬೆಲೆಯಲ್ಲಿ ಸ್ಥಿರತೆ: ಭತ್ತದ ಬೆಲೆಯಲ್ಲಿ ಸ್ಥಿರತೆಯಿದ್ದು, ಕಳೆದ ತಿಂಗಳಿಂದ ಒಂದೇ ದರ ಫಿಕ್ಸ್ ಆಗಿದೆ. ಸೋನಾಕ್ಕೆ 1540ರೂ.ನಿಂದ 1600ರೂ.ವರೆಗೆ ನಿಗದಿಯಾಗಿದೆ. ಆದರೆ ಅಕ್ಕಿಗೆ ಉತ್ತಮ ಬೆಲೆಯಿದ್ದು, 25 ಕೆಜಿ ಪ್ಯಾಕೆಟ್‌ನಲ್ಲಿ ರವಾನಿಸಲಾಗುತ್ತಿದೆ. ರಫ್ತು ನೀತಿಯಿಂದ ಅಕ್ಕಿಗೆ ಉತ್ತಮ ದರ ದೊರೆಯುತ್ತಿದ್ದು, ಸಂಗ್ರಹಿಸುವ ದಲ್ಲಾಳಿಗಳು ಹೆಚ್ಚಾಗಿದ್ದಾರೆ. ಮಾರುಕಟ್ಟೆ ವಿಸ್ತಾರದಿಂದ ರೈಸ್‌ಮಿಲ್ ಮಾಲೀಕರಿಗೆ ಅನುಕೂಲವಾಗಿದೆ.ಆರೆನ್ನಾರ್ 15048 ತಳಿಗಳ ಅಕ್ಕಿ ಉತ್ತಮ ಪೌಷ್ಟಿಕಾಂಶ ಹೊಂದಿದ್ದು, ಅಕ್ಕಿ ಗಾತ್ರ ಸಣ್ಣದಿದೆ. ಇದೇ ಕಾರಣಕ್ಕೆ ಹೊರರಾಜ್ಯಗಳಿಗೆ ರವಾನೆಯಾಗುತ್ತಿದೆ. ತೆಲಂಗಾಣದಲ್ಲಿ ಆವಿಷ್ಕರಿಸಿದ ಉದ್ದೇಶಿತ ತಳಿಯನ್ನು ರಾಯಚೂರಿನಲ್ಲಿ ಬಿಡುಗಡೆಗೊಳಿಸುವ ಮೂಲಕ ರಾಜ್ಯದಲ್ಲಿ ವಿಸ್ತರಿಸಲಾಗಿತ್ತು.
ಮಹಾಂತಶಿವಯೋಗಿ, ತಳಿ ತಜ್ಞ ಕೆವಿಕೆ ಗಂಗಾವತಿ