ನೀರಿಲ್ಲದೆ ಒಣಗಿದೆ ಅಡಕೆ ತೋಟ

ರತ್ನಾಕರ ಸುಬ್ರಹ್ಮಣ್ಯ

ಒಂದು ತಿಂಗಳಿನಿಂದ ಬಿಸಿಲಿನ ತಾಪಕ್ಕೆ ಜೀವ ಜಲ ಮೂಲ ಬತ್ತಿ ಹೋಗಿದ್ದು, ಪರಿಣಾಮ ಅಡಕೆ ತೋಟಗಳು ಒಣಗಿವೆ. ಇದ್ದ ಅಲ್ಪ ಸ್ವಲ್ಪ ಫಸಲು ಬಿಸಿಲಿನ ಝಳಕ್ಕೆ ಸಿಲುಕಿ ನೆಲಕ್ಕುದುರುತ್ತಿವೆ. ಕುಡಿಯುವ ನೀರಿನ ಸಮಸ್ಯೆಯೊಂದಿಗೆ ಈಗ ಕೃಷಿ ತೋಟ ನಾಶವಾಗುತ್ತಿರುವುದು ಗ್ರಾಮೀಣ ರೈತರನ್ನು ಕಂಗೆಡಿಸಿದೆ.

ಇದು ಜಿಲ್ಲೆಯ ಅಡಕೆ ಬೆಳೆಗಾರರ ಇಂದಿನ ಸಂಕಷ್ಟ. ಎಲ್ಲೆಡೆ ನೀರಿಲ್ಲ. ಹೊಳೆ, ನದಿಗಳೆಲ್ಲ ಬತ್ತಿ ಕೆರೆ, ಕೊಳವೆಬಾವಿಗಳಲ್ಲೂ ನೀರಿಲ್ಲದೆ ಕೆಲವು ಕಡೆ ತಿಂಗಳುಗಳೇ ಕಳೆದಿವೆ. ಒಂದೆರಡು ಗಂಟೆ ಕೃಷಿಗೆ ನೀರುಣಿಸಲು ಮಾತ್ರ ಸಾಧ್ಯವಾಗುತ್ತಿದೆ. ಆದರೆ ಈಗ ಬಿಸಿಲಿನ ಶಾಖಕ್ಕೆ ಇದ್ಯಾವುದೂ ಸಾಕಾಗುತ್ತಿಲ್ಲ. ಪರಿಣಾಮ ಅಡಕೆ ಮರಗಳು ಒಣಗಿವೆ. ಸುಳ್ಯ ತಾಲೂಕಿನ ಹಲವೆಡೆ ತೋಟಗಳಿಗೆ ಇದೆ ಸ್ಥಿತಿ ಮುಂದುವರಿದಿದೆ.

ಒಂದು ತಿಂಗಳಿನಿಂದ ತೋಟಕ್ಕೆ ಸರಿಯಾಗಿ ನೀರು ಹಾಯಿಸಲು ಕಷ್ಟವಾಗುತ್ತಿದೆ. ಕೊಳವೆಬಾವಿ ಇದ್ದರೂ ವಿದ್ಯುತ್ ಕೈಕೊಡುತ್ತಿದೆ. ಮತ್ತೊಂದೆಡೆ ವಿದ್ಯುತ್ ಬಂದರೂ ಕೊಳವೆಬಾವಿಯಲ್ಲಿ ನೀರು ಆಳಕ್ಕೆ ಹೋಗಿದ್ದು, ಇರುವ ನೀರು ಕೆರೆಗೆ ಹಾಯಿಸಿ ಅಲ್ಲಿಂದ ತೋಟಕ್ಕೆ ಡ್ರಿಪ್ ಮೂಲಕ ಹಾಕಲಾಗುತ್ತಿದೆ. ಇದು ಸಾಕಾಗದೆ ತೋಟ ಒಣಗಿದೆ ಎಂದು ರೈತರು ನುಡಿಯುತ್ತಾರೆ. ಮುಂದೆ ಮಳೆ ಬಂದಾಗ ಇದರೊಂದಿಗೆ ಗಾಳಿ ಬಂದರೆ ಫಲಭರಿತ ಅಡಕೆ ಮರಗಳು ಮುರಿಯುವ ಸಾಧ್ಯತೆಯಿದೆ. ಈ ಸ್ಥಿತಿಯಲ್ಲಿ ಮುಂದೆ ಕೃಷಿ ಮಾಡುವುದು ಹೇಗೆ ಎಂಬ ಚಿಂತೆ ಕೃಷಿಕರಲ್ಲಿ ಮನೆ ಮಾಡಿದೆ.

ಪರಿಹಾರಕ್ಕೆ ರೈತರ ಆಗ್ರಹ: ಬೇಸಿಗೆ ಸಂದರ್ಭ ಕುಡಿಯುವ ನೀರಿಗೆ ಸಾಕಷ್ಟು ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಕೃಷಿ ನಷ್ಟಕ್ಕೆ ಪರಿಹಾರ ಯೋಜನೆ ಮಾಡಲಾಗುತ್ತಿಲ್ಲ. ಈ ಸಂದರ್ಭ ಕೃಷಿ ಬೆಳೆ ಉಳಿಸಿಕೊಳ್ಳಲು ಬೇಕಾದ ವ್ಯವಸ್ಥೆ ಮಾಡಬೇಕು. ಅಲ್ಲದೆ ಬಿಸಿಲಿಗೆ ನಷ್ಟವಾದ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕು. ಕೃಷಿಗೆ ಆದ ನಷ್ಟವನ್ನು ಕೃಷಿ ಇಲಾಖೆ ಸಮಗ್ರ ಅಧ್ಯಯನ ಮಾಡಿ ಅದಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ವಿದ್ಯುತ್ ಸಮಸ್ಯೆಯಿಂದ ನೀರಿಲ್ಲ: ವಿದ್ಯುತ್ ವ್ಯತ್ಯಯವಾದರೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಿ ಸಮಸ್ಯೆ ಎದುರಾಗುತ್ತದೆ. ನೀರಿನ ಆಸರೆಯಿದ್ದರೂ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆಯಿಂದ ಅದನ್ನು ಸಮರ್ಪಕವಾಗಿ ಬಳಸುವಲ್ಲಿ ಸಮಸ್ಯೆಯಾಗುತ್ತಿದೆ. ಬಳ್ಪ, ಯೇನೆಕಲ್, ಹರಿಹರ, ಎಡಮಂಗಲ, ಗುತ್ತಿಗಾರು, ಕಮಿಲ, ಕೇನ್ಯ, ಕಲ್ಮಕಾರು, ಕೊಲ್ಲಮೊಗ್ರು ಮೊದಲಾದ ಕಡೆ ನಿತ್ಯ ವಿದ್ಯುತ್ ಕಣ್ಣುಮುಚ್ಚಾಲೆಯಿಂದಾಗಿ ನೀರಿನ ಸಮಸ್ಯೆ ಉಂಟಾಗುತ್ತಿದೆ. ಸಮರ್ಪಕ ವಿದ್ಯುತ್ ವ್ಯವಸ್ಥೆ ಇದ್ದರೆ ನೀರಿನ ಪೂರೈಕೆ ಯಾವುದೇ ಸಮಸ್ಯೆ ಎದುರಾಗದು ಎನ್ನುತ್ತಾರೆ ಸ್ಥಳೀಯರು.

ಜೀವಜಲಕ್ಕಾಗಿ ಬವಣೆ: ಏನೆಕಲ್, ಹರಿಹರ ಪಲ್ಲತ್ತಡ್ಕ, ಕೊತ್ನಡ್ಕ, ಕಲ್ಮಕಾರು, ಬಾಳುಗೋಡು ಮೊದಲಾದ ಪ್ರದೇಶಗಳಲ್ಲೂ ನೀರಿಗಾಗಿ ಪರದಾಟ ತಪ್ಪಿಲ್ಲ. ಕೃಷಿಕರೇ ತುಂಬಿರುವ ಈ ಪ್ರದೇಶದಲ್ಲಿ ವ್ಯವಸಾಯಕ್ಕೆ ಬಿಡಿ, ಕುಡಿಯುವ ನೀರಿಗೂ ಬವಣೆ ಪಡಬೇಕಾಗಿದೆ. ಎಲ್ಲೆಲ್ಲೂ ಬಿಸಿಲಿನ ಧಗೆಗೆ ಜನರು ಪರಿತಾಪ ಪಡುವಂತಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಸಮರೋಪಾದಿ ಕಾರ್ಯೋನ್ಮುಖರಾಗದ ಹಿನ್ನೆಲೆಯಲ್ಲಿ ಹರಿಹರ ಮತ್ತು ಕೊಲ್ಲಮೊಗ್ರ, ಕಲ್ಮಕಾರು, ಏನೆಕಲ್ ಪ್ರದೇಶದ ಜನತೆ ಜೀವಜಲಕ್ಕಾಗಿ ತೊಂದರೆಪಡಬೇಕಾಗಿದೆ.

Leave a Reply

Your email address will not be published. Required fields are marked *