ಅಡಕೆ ಹಿಂಗಾರಕ್ಕೆ ಹೊಸ ರೋಗ

>

-ಶ್ರವಣ್‌ಕುಮಾರ್ ನಾಳ ಪುತ್ತೂರು
80ರ ದಶಕದಲ್ಲಿ ಮಲೇಷಿಯಾ, ಸಿಂಗಾಪುರ ಪ್ರದೇಶಗಳ ಅಡಕೆ ತೋಟಗಳಿಗೆ ಬಾಧಿಸಿದ ಹೋಮಿಯೋಸ್ಟಟಿಸ್ ಎಂಬ ರೋಗ ಪ್ರಸ್ತುತ ಕರಾವಳಿಗೆ ಕಾಲಿರಿಸಿದೆ. ಬೆಳ್ತಂಗಡಿ ಹಾಗೂ ಸುಳ್ಯದ ಹಲವು ಅಡಕೆ ತೋಟಗಳಲ್ಲಿ ಈ ರೋಗ ಲಕ್ಷಣ ಕಂಡುಬಂದಿದ್ದು, ಯಾವುದೇ ಔಷಧ ಇಲ್ಲದಿರುವುದು ಬೆಳೆಗಾರರಿಗೆ ತಲೆನೋವಾಗಿ ಪರಿಣಮಿಸಿದೆ.
ಒಣಗಿದ ಸಮತಟ್ಟು ನೆಲ ಹಾಗೂ ನೀರು ರಹಿತ ಇಳಿಜಾರು ಪ್ರದೇಶದಲ್ಲಿ ಬೆಳೆದ ಅಡಕೆ ತೋಟಕ್ಕೆ ಹೋಮಿಯೋಸ್ಟಟಿಸ್ ಎಂಬ ರೋಗಬಾಧೆ ಹೆಚ್ಚಾಗಿ ಕಂಡುಬರುತ್ತಿದೆ. ವಾತಾವರಣದ ಬದಲಾವಣೆಯೇ ಈ ರೋಗ ಕಾಣಿಸಿಕೊಳ್ಳಲು ಮೂಲ ಕಾರಣ ಎಂಬುದು ಕೃಷಿ ತಜ್ಞರ ಅಭಿಪ್ರಾಯ.

ಏನಿದು ರೋಗ?: ವೈಜ್ಞಾನಿಕ ಭಾಷೆಯಲ್ಲಿ ಗಿಡವೊಂದರ ಆರೋಗ್ಯದ ಉಷ್ಣತೆಯಲ್ಲಿ ಏರುಪೇರಾಗುವುದೇ ಹೋಮಿಯೋಸ್ಟಟಿಸ್. ಗಿಡವೊಂದರ ಉಷ್ಣತೆ ಹೆಚ್ಚಾಗುವುದು ಅಥವಾ ಕಡಿಮೆಯಾಗುವ ಹಂತದಲ್ಲಿ ತನ್ನ ದೇಹದ ಸ್ವಾಭಾವಿಕ ಕ್ರಿಯೆ ತಟಸ್ಥಗೊಳ್ಳುತ್ತದೆ.
ಆರೋಗ್ಯವಂತ ಅಡಕೆ ಮರದಿಂದ ಏಪ್ರಿಲ್-ಮೇ ವೇಳೆ ಹಿಂಗಾರ ಒಡೆದು ನೈಸರ್ಗಿಕ ವಾತಾವರಣದಲ್ಲಿ ಎಳೆ ಅಡಕೆ ಬೆಳೆಯುತ್ತದೆ. ಆದರೆ ಹೋಮಿಯೋಸ್ಟಟಿಸ್ ಬಾಧಿತ ಅಡಕೆ ಮರದಲ್ಲಿ ನಿಗದಿತ ಸಮಯದ ಮುನ್ನವೇ ಹಿಂಗಾರ ಒಡೆದು ಹಾಳೆ ಸೀಳಿ ಹೊರಬರುತ್ತದೆ. ನಂತರ ಈ ಹಿಂಗಾರ ಬಿಸಿಲ ತಾಪಮಾನ ತಡೆದುಕೊಳ್ಳದೆ ಒಣಗಿ ಹೋಗುವುದು ರೋಗ ಲಕ್ಷಣ. 80ರ ದಶಕದಲ್ಲಿ ಮಲೇಷಿಯಾ, ಸಿಂಗಾಪುರಗಳಲ್ಲಿ ಈ ರೋಗ ವ್ಯಾಪಕವಾಗಿತ್ತು. ರೋಗ ನಿಯಂತ್ರಣಕ್ಕೆ ಇದುವರೆಗೆ ಯಾವುದೇ ಪರಿಹಾರ ಕಂಡುಕೊಳ್ಳಲಾಗಿಲ್ಲ.

ಬಿಸಿ ವಾತಾವರಣ ಕಾರಣ: ಕನಿಷ್ಠ 18ರಿಂದ 14 ಡಿಗ್ರಿ ಸೆಲ್ಸಿಯಸ್, ಗರಿಷ್ಠ 30ರಿಂದ 35 ಡಿಗ್ರಿ ಸೆಲ್ಸಿಯೆಸ್ ತಾಪಮಾನವನ್ನು ಸ್ವಾಭಾವಿಕವಾಗಿ ತಡೆದುಕೊಳ್ಳುವ ಸಾಮರ್ಥ್ಯವಿರುವ ಅಡಕೆ ಮರಗಳಿಗೆ ಈ ಪ್ರಮಾಣಕ್ಕಿಂತ ಹೆಚ್ಚಿನ ತಾಪಮಾನ ತಡೆದುಕೊಳ್ಳುವುದು ಸಾಧ್ಯವಿಲ್ಲ. ಈಗ ಕರಾವಳಿಯಲ್ಲಿ 30ರಿಂದ 36 ಡಿ.ಸೆ. ತಾಪಮಾನವಿದೆ. ನೀರಿನ ಪ್ರಮಾಣ ಬಹುತೇಕ ಕಡಿಮೆಯಾಗಿದ್ದರಿಂದ ಮಧ್ಯಾಹ್ನದ ಉರಿಬಿಸಿಲಿನ ವಾತಾವರಣ ಅಡಕೆ ಗಿಡಗಳ ಸ್ವಾಭಾವಿಕ ಕ್ರಿಯೆಗಳಿಗೆ ತೊಡಕಾಗಿದೆ. ನಿಗದಿತ ತಾಪಮಾನ ಮತ್ತು ನೀರಿನ ಅವಶ್ಯಕತೆ ಗಿಡಕ್ಕೆ ಲಭ್ಯವಾಗದಿದ್ದರೆ ಹೋಮಿಯೋಸ್ಟಟಿಸ್ ರೋಗ ಬಾಧೆ ತಗಲುವ ಸಾಧ್ಯತೆ ಹೆಚ್ಚು. ಇದು ಕೇವಲ ಅಡಕೆ ಗಿಡಗಳಿಗೆ ಮಾತ್ರವಲ್ಲ, ಹಸಿರೆಲೆ ಹೊಂದಿರುವ ಎಲ್ಲ ಸಸ್ಯವರ್ಗಕ್ಕೂ ಬಾಧಿಸಬಹುದು ಎಂದು ಪರಿಸರ ವಿಜ್ಞಾನ ಸಂಶೋಧಕಿ ನಿಖಿತಾ ಎನ್.ಕೆ. ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ವಾತಾವರಣ ಬಿಸಿಯೇರಿದಂತೆ ಪ್ರತಿ ಅಡಕೆ ಗಿಡಗಳ ಬುಡಗಳಿಗೆ ಕನಿಷ್ಠ 4ರಿಂದ 5 ಲೀಟರ್ ನೀರಿನ ಅಗತ್ಯ ಇದೆ. ಹೀಗೆ ಮಾಡಿದರೆ ಹೋಮಿಯೋಸ್ಟಟಿಸ್ ರೋಗ ತಡೆಗಟ್ಟಬಹುದು. ಅತಿ ಮಳೆಯಾದರೆ ಕೊಳೆರೋಗ, ಉಷ್ಣಾಂಶ ಹೆಚ್ಚಳವಾದರೆ ಹೋಮಿಯೋಸ್ಟಟಿಸ್ ರೋಗ ಅಡಕೆ ಬೆಳೆಗಾರರನ್ನು ಕಾಡುವ ಸಮಸ್ಯೆಗಳು.
– ಕುಮಾರ್ ಪೆರ್ನಾಜೆ, ಅಡಕೆ ಬೆಳೆಗಾರ ಹಾಗೂ ಕೃಷಿ ತಜ್ಞ 

ಸಾಮಾನ್ಯವಾಗಿ ಕರಾವಳಿ ಭಾಗದ ಅಡಕೆ ಗಿಡಗಳು 33 ಡಿಗ್ರಿ ಸೆಲ್ಸಿಯೆಸ್‌ಗಿಂತ ಅಧಿಕ ಪ್ರಮಾಣದ ಉಷ್ಣಾಂಶ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತವೆ. ಆದರೆ ಹೊಸ ಅಡಕೆ ತಳಿಗಳಿಗೆ ಸ್ಥಳೀಯ ಅಡಕೆ ಗಿಡಗಳಂತೆ ಉಷ್ಣಾಂಶ ತಡೆಯುವ ಸಾಮರ್ಥ್ಯ ಇರುವುದಿಲ್ಲ. ಸಸ್ಯದ ದೇಹದ ಉಷ್ಣತೆಯಲ್ಲಿ ಏರುಪೇರಾಗುವುದೇ ಹೋಮಿಯೋಸ್ಟಟಿಸ್ ರೋಗ.
– ನಿಖಿತಾ ಎನ್.ಕೆ, ಪರಿಸರ ವಿಜ್ಞಾನ ಸಂಶೋಧಕಿ

Leave a Reply

Your email address will not be published. Required fields are marked *