ಅಡಕೆಯಿಂದ ಅರೆಕಾ ಮಿಕ್ಸ್ ಜ್ಯೂಸ್!

ಮಂಗಳೂರು: ಯುವ ಸಂಶೋಧಕ, ಮಂಗಳೂರಿನ ಇಂಜಿನಿಯರಿಂಗ್ ಕಾಲೇಜೊಂದರ ವಿದ್ಯಾರ್ಥಿ ಶಿವಮೊಗ್ಗದ ನಿಖಿಲ್ ಭಟ್ ಅಡಕೆಯಿಂದ ತಯಾರಿಸಬಹುದಾದ ವೈವಿಧ್ಯಮಯ ಉತ್ಪನ್ನದ ಬಗ್ಗೆ ಅನ್ವೇಷಣೆಯಲ್ಲಿ ತೊಡಗಿಸಿಕೊಂಡಿದ್ದು, ಅವರು ಅನ್ವೇಷಿಸಿರುವ ಅರೆಕಾ ಮಿಕ್ಸ್‌ಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.
ಅಡಕೆಯಿಂದ ಕಷಾಯದ ಪುಡಿ, ಚಾಕಲೆಟ್, ಉಪ್ಪಿನಕಾಯಿ ಮತ್ತಿತರ ಅನ್ವೇಷನೆಗಳನ್ನೂ ನಡೆಸಿರುವ ಅವರು ಸಂಶೋಧನೆಗೆಂದೇ ಮಲೆನಾಡಿನಲ್ಲಿ ಅಗ್ರಿ ರಿಸರ್ಚ್ ಆ್ಯಂಡ್ ಡೆವೆಲಪ್‌ಮೆಂಟ್ ಸಂಸ್ಥೆ ಸ್ಥಾಪಿಸಿದ್ದಾರೆ.
ಹೊಸ ಟೇಸ್ಟ್‌ನ ಅರೆಕಾ ಮಿಕ್ಸ್‌ಗೆ ಗ್ರಾಹಕರು ಮಾರುಹೋಗಿದ್ದು, ಪ್ರಮುಖವಾಗಿ ಮಂಗಳೂರು, ಬೆಂಗಳೂರು, ತಮಿಳುನಾಡಿನ ಜ್ಯೂಸ್ ಸೆಂಟರ್‌ಗಳಿಂದ ಉತ್ತಮ ಬೇಡಿಕೆ ವ್ಯಕ್ತವಾಗಿದೆ. ಪ್ರಸ್ತುತ ನಿಖಿಲ್ ತನ್ನ ವಿದ್ಯಾಭ್ಯಾಸದ ನಡುವೆಯೂ ತಿಂಗಳಿಗೆ 50 ಕೆ.ಜಿ. ಅರೆಕಾ ಮಿಕ್ಸ್‌ನ್ನು ಮಾರುಕಟ್ಟೆಗೆ ಪೂರೈಸುತ್ತಿದ್ದಾರೆ. 50 ಗ್ರಾಂನ ಅರೆಕಾ ಮಿಕ್ಸ್‌ಗೆ 32 ರೂ. ಇದೆ. ಅರೆಕಾ ಮಿಲ್ಕ್ ಶೇಕ್ ಆಗಿ, ಬಾದಾಮಿ ಹಾಲಿನಂತೆ ಇದನ್ನು ಬಳಸಬಹುದು.

ನಿಖಿಲ್ ತಂದೆ ಕೃಷಿಕರಾಗಿದ್ದು, ಅಡಕೆ ತೋಟವೂ ಇದೆ. ಇದನ್ನೇ ಮೂಲವಾಗಿಸಿಕೊಂಡು ನಿಖಿಲ್ ಸಂಶೋಧನೆ ನಡೆಸುತ್ತಿದ್ದಾರೆ. ತಾನು ಕಾಲೇಜಿನಲ್ಲಿರುವಾಗ ಸಹೋದರ, ತಂದೆ ಮತ್ತು ತಾಯಿ ಉತ್ಪನ್ನಗಳ ತಯಾರಿಗೆ ಸಹಾಯ ಮಾಡುತ್ತಾರೆ ಎಂದು ನೆನಪು ಮಾಡುತ್ತಾರೆ ಯುವ ಸಂಶೋಧಕ.

ಕಲಿಸಲು ಸಿದ್ಧ: ವಿದ್ಯಾಭ್ಯಾಸದ ಒತ್ತಡದ ನಡುವೆ ಉತ್ಪನ್ನ ಮಾರುಕಟ್ಟೆಗೆ ಪೂರೈಸುವುದು ಕಷ್ಟವಾಗಿರುವುದರಿಂದ ಅವರು ಅನ್ವೇಷಿಸಿದ ಅಡಕೆ ಉಪ್ಪಿನಕಾಯಿ ಮತ್ತು ಅಡಕೆ ಬರ್ಫಿಯನ್ನು ಆಸಕ್ತರಿಗೆ ಕಲಿಸಲು ಸಿದ್ಧವಾಗಿರುವುದಾಗಿ ನಿಖಿಲ್ ತಿಳಿಸಿದ್ದಾರೆ. ಅಡಕೆಗೆ ಈ ಮೂಲಕ ಮಾರುಕಟ್ಟೆ ಹೆಚ್ಚು ಮಾಡಬಹುದು. ಆಸಕ್ತ ಯುವಕರಿಗೆ ಉದ್ಯೋಗಕ್ಕೂ ಒಂದು ದಾರಿಯಾಗಬಹುದು ಎನ್ನುವುದು ಅವರ ಮಾತು.
ರುಚಿಯಾದ ಉಪ್ಪಿನಕಾಯಿ: ನಿಖಿಲ್ ಅನ್ವೇಷಣೆಯ ಅಡಕೆ ಉಪ್ಪಿನಕಾಯಿ ಉತ್ತಮ ಹೆಸರು ಪಡೆದಿದೆ. ಅತ್ಯಂತ ಸುಲಭವಾಗಿ ಈ ಉಪ್ಪಿನಕಾಯಿ ತಯಾರಿಸಬಹುದು. ಸುಲಿದ ಮಧ್ಯಮ ಗಾತ್ರದ ಹಸಿ ಅಡಕೆಯನ್ನು 15 ದಿನ ಉಪ್ಪುನೀರಿನಲ್ಲಿ ಹಾಕಿಡಬೇಕು. ಬಳಿಕ ಕೊತ್ತಂಬರಿ, ಜೀರಿಗೆ, ಮೆಣಸು, ಸಾಸಿವೆ ಮೊದಲಾದ ಸಾಂಬಾರ ಪದಾರ್ಥಗಳನ್ನು ಅರೆದು ಸೇರಿಸಬೇಕು. ಮಾವಿನಕಾಯಿಯ ಉಪ್ಪಿನಕಾಯಿಯಂತೆ ಅಡಕೆ ಉಪ್ಪಿನಕಾಯಿ ತಯಾರಿಸಬಹುದು.

One Reply to “ಅಡಕೆಯಿಂದ ಅರೆಕಾ ಮಿಕ್ಸ್ ಜ್ಯೂಸ್!”

Leave a Reply

Your email address will not be published. Required fields are marked *