ಕುಮಾರಸ್ವಾಮಿಯಿಂದ ದೇಶಭಕ್ತಿ ಕಲಿಯಬೇಕಿಲ್ಲ: ಅರವಿಂದ ಲಿಂಬಾವಳಿ

ಬಳ್ಳಾರಿ: ಜೆಡಿಎಸ್, ಕಾಂಗ್ರೆಸ್‌ನವರು ದೇಶಭಕ್ತಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ರಾಷ್ಟ್ರಭಕ್ತಿ ಬಗ್ಗೆ ಬಿಜೆಪಿಯವರಿಗೆ ಎಚ್.ಡಿ.ಕುಮಾರಸ್ವಾಮಿ ಹೇಳುವ ಅಗತ್ಯ ಇಲ್ಲ ಎಂದು ಶಾಸಕ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ನಗರದ ಬಸವ ಭವನದಲ್ಲಿ ಭಾನುವಾರ ಬಳ್ಳಾರಿ, ಕೊಪ್ಪಳ, ರಾಯಚೂರು, ಚಿತ್ರದುರ್ಗ ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರ ಸಭೆ ಉದ್ಘಾಟಿಸಿ ಮಾತನಾಡಿದರು. ಪಾಕಿಸ್ತಾನದ ವಿರುದ್ಧ ಪ್ರಧಾನಿ ಮೋದಿ ದಿಟ್ಟ ಕ್ರಮಕೈಗೊಳ್ಳುವ ಎದೆಗಾರಿಕೆ ಜತೆಗೆ ರಾಜತಾಂತ್ರಿಕ ಒತ್ತಡ ಹೇರುವ ಕೆಲಸ ಮಾಡಿದ್ದಾರೆ. ಈ ವಿಚಾರದಲ್ಲಿ ಬಿಜೆಪಿಗೆ ರಾಜಕೀಯ ಮಾಡುವ ಅಗತ್ಯವಿಲ್ಲ. ಸಂಘ ಪರಿವಾರದಿಂದ ಬಂದಿರುವ ನಮಗೆ ದೇಶಭಕ್ತಿ ರಕ್ತಗತವಾಗಿದೆ ಎಂದರು.

ಯೋಧರನ್ನು ಹುರಿದುಂಬಿಸುವ ಕೆಲಸ ಮಾಡುವ ಬಗ್ಗೆ ಜೆಡಿಎಸ್, ಕಾಂಗ್ರೆಸಿನವರನ್ನು ಯಾರೂ ತಡೆದಿಲ್ಲ. ಸಿಎಂ ಹೇಳಿಕೆ ಗಮನಿಸಿದರೆ ಅವರೇ ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿದ್ದಾರೆ ಎಂದೆನಿಸುತ್ತದೆ. ಜೆಡಿಎಸ್, ಕಾಂಗ್ರೆಸಿನವರಿಗೆ ವಿಚಾರಗಳನ್ನು ತಿರುಚುವ ಕಲೆ ಚೆನ್ನಾಗಿ ಗೊತ್ತಿದೆ. ಉಗ್ರರ ಶಿಬಿರಗಳ ಮೇಲಿನ ದಾಳಿಗೆ ಸಾಕ್ಷ್ಯ ಕೇಳುವ ಶಾಸಕ ರಾಘವೇಂದ್ರ ಹಿಟ್ನಾಳ್, ಪಾಕ್ ಆಕ್ರಮಿತ ಕಾಶ್ಮೀರದ ಬಾಲಕೋಟ್‌ಗೆ ಹೋಗುವ ಧೈರ್ಯ ತೋರಿಸಲಿ. ಕೇಂದ್ರವು ಅವರಿಗೆ ಸಾಕ್ಷ್ಯ ನೀಡುವ ಅಗತ್ಯವಿಲ್ಲ. ಮಲ್ಲಿಕಾರ್ಜುನ ಖರ್ಗೆ ಕೂಡ ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳಬೇಕು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದೇಶಭಕ್ತಿ ಪ್ರದರ್ಶಿಸಲು ಮುಂದಾಗಲಿ ಎಂದು ಶಾಸಕ ಅರವಿಂದ ಲಿಂಬಾವಳಿ ತಿಳಿಸಿದರು.

Leave a Reply

Your email address will not be published. Required fields are marked *