ಶ್ರೀಶಿವಲಿಂಗ ಸ್ವಾಮೀಜಿ ಪುಣ್ಯ ಸಂಸ್ಮರಣೆ

ಅರಸೀಕೆರೆ: ತಾಲೂಕಿನ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದಲ್ಲಿ ಲಿಂಗೈಕ್ಯ ಶ್ರೀಶಿವಲಿಂಗ ಸ್ವಾಮೀಜಿ 132ನೇ ವರ್ಷದ ಪುಣ್ಯ ಸಂಸ್ಮರಣಾ ಕಾರ್ಯಕ್ರಮ ಶೀಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಜರುಗಿತು.


ಶ್ರೀಶಿವಲಿಂಗಸ್ವಾಮಿಗಳ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ರಾಜೋಪಚಾರ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಜರುಗಿದವು.


ಭಕ್ತರು ತಂಡೋಪತಂಡವಾಗಿ ಆಗಮಿಸಿ ಹಿರಿಯ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು. ಬಳಿಕ ಜರುಗಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಮೂರು ಸಾವಿರ ಮಠದ ಮಹಾರಾಜ ನಿರಂಜನ ಜಗದ್ಗುರು ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ ಮಾತನಾಡಿ, ರಾಜಕಾರಣಿ, ಜಂಗಮ ಸೇರಿ ಸದ್ಭಕ್ತರಿಗೆ ಅರಿವಿನ ದಾರಿ ತೋರಿದ ಹೆಗ್ಗಳಿಕೆಯನ್ನು ಶ್ರೀಮಠ ಹೊಂದಿದೆ. ಇಂತಹ ಮಠ ಮಾನ್ಯಗಳ ಮಾರ್ಗದರ್ಶನ ಪಡೆಯುವ ಮೂಲಕ ಜನರು ಅಜ್ಞಾನದ ಕತ್ತಲೆಯಿಂದ ಹೊರಬರಬೇಕು ಎಂದು ಕಿವಿಮಾತು ಹೇಳಿದರು.


ಯಳನಡು ಸಂಸ್ಥಾನದ ಶ್ರೀಜ್ಞಾನಪ್ರಭು ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಬಡವ ಬಲ್ಲಿದರು ಎಂದೆನ್ನದೆ ಶ್ರೀಮಠ ಅಕ್ಷರ, ಅರಿವು, ಅನ್ನ ದಾಸೋಹದ ಮೂಲಕ ನಾಡಿನೆಲ್ಲೆಡೆ ಅಪಾರ ಭಕ್ತ ಸಮೂಹವನ್ನೇ ಹೊಂದಿದೆ. ಪಾಪ, ಪುಣ್ಯಗಳನ್ನು ವಸ್ತು, ವಡವೆಗಳನ್ನು ನೀಡಿ ಖರೀದಿಸಲು ಸಾಧ್ಯವಿಲ್ಲ. ನಾವು ಮಾಡುವ ಕಾರ್ಯ ಅದನ್ನು ಅವಲಂಬಿಸಿರುತ್ತದೆ. ಬದುಕಿರುವ ವೇಳೆ ಉದಾತ್ತ ಚಿಂತನೆ, ದಯಾಪರ ಗುಣಗಳನ್ನು ಬೆಳೆಸಿಕೊಂಡು ಮಾನವ ಕಲ್ಯಾಣಕ್ಕೆ ಚಿಂತಿಸಬೇಕು. ಆಗ ಮಾತ್ರವೇ ಮನುಷ್ಯ ಜೀವನ ಸಾರ್ಥಕವಾಗಲಿದೆ ಎಂದರು.


ಗದಗದ ಅಧ್ಯಾತ್ಮ ವಿದ್ಯಾಶ್ರಮದ ಶಿವಶರಣೆ ಮೈತ್ರಾದೇವಿ ಪ್ರವಚನ ನೀಡಿದರು. ಕೇದಿಗೆ ಮಠದ ಜಯಚಂದ್ರಶೇಖರ ಸ್ವಾಮೀಜಿ, ಮಾಡಾಳು ವಿರಕ್ತ ಮಠದ ರುದ್ರಮುನಿ ಸ್ವಾಮೀಜಿ, ಉದ್ಯಮಿ ಮೃತ್ಯುಂಜಯ ಸಂಕೇಶ್ವರ, ಸಿದ್ದೇಶ್ ನಾಗೇಂದ್ರ, ಶ್ರೀ ಮಠದ ಆಡಳಿತಾಧಿಕಾರಿ ದಕ್ಷಿಣಮೂರ್ತಿ, ಎಚ್.ಪಿ.ಬಸವಲಿಂಗಪ್ಪ, ಓಂಕಾರಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *