ಬಿ.ಗಣೇಕಲ್ ಗ್ರಾಮದಲ್ಲಿ ಶಂಕಿತ ಚಿಕೂನ್‌ಗುನ್ಯಾ

ಅರಕೇರಾ (ದೇವದುರ್ಗ): ಸಮೀಪದ ಬಿ.ಗಣೇಕಲ್ ಗ್ರಾಮದಲ್ಲಿ ಎರಡು ತಿಂಗಳಿಂದ ಬಹುತೇಕರಿಗೆ ಜ್ವರ, ಮೈ-ಕೈ, ಮೊಣಕಾಲು, ಕೀಲು ನೋವು ಕಾಣಿಸಿಕೊಂಡಿದ್ದು, ಜನರಲ್ಲಿ ಚಿಕೂನ್‌ಗುನ್ಯಾ ಜ್ವರದ ಭಯದಲ್ಲಿ ಬದುಕುತ್ತಿದ್ದಾರೆ.

ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಎನ್ ಕೆ.ನಸೀರ್‌ಸಾಬ್, ಡಾ.ನಾಗರಾಜ ವೈದ್ಯರ ತಂಡದೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಪರೀಶಿಲಿಸಿದರು. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕ ಚಿಕ್ಸಿತೆ ಆರಂಭಿಸಿದ್ದು, ಡಾ.ಭಾರತಿ, ಡಾ.ರಿಯಾಜ್, ಡಾ.ನಾಗೇಶ ಹಾಗೂ ಸಿಬ್ಬಂದಿ, 118 ಜನರಿಗೆ ಚಿಕ್ಸಿತೆ ನೀಡಿದ್ದಾರೆ. ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದ್ದು, ಸುಮಾರು 13 ಶಂಕಿತ ರೋಗಿಗಳ ರಕ್ತದ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿದೆ ಎಂದ ಅಧಿಕಾರಿಗಳು ತಿಳಿಸಿದರು.

ಚಿಕೂನ್‌ಗುನ್ಯಾ ರೋಗದಿಂದ ಯಾರು ಸಾವನ್ನಪ್ಪಿಲ್ಲ. ವೃದ್ಧರು, ಧಮ್ಮು ಕೆಮ್ಮು, ಮೂತ್ರಪಿಂಡ (ಕಿಡ್ನಿ) ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ಚಿಕೂನ್ ಗುನ್ಯಾ ರೋಗದಿಂದ ಮೃತಪಟ್ಟಿಲ್ಲ ಎಂದು ವೈದ್ಯರು ತಿಳಿಸಿದರು.

ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕಗೆ ಗ್ರಾಮಸ್ಥರು ಕರೆ ಮಾಡಿ ಸಮಸ್ಯೆ ತೋಡಿಕೊಂಡರು. ಸಮಸ್ಯೆಗೆ ಸ್ಪಂದಿಸಿದ ಅವರು, ಗ್ರಾಮಸ್ಥರು ಆತಂಕ ಪಡುವುದು ಬೇಡ. ಈಗಾಗಾಲೇ ಗ್ರಾಮಕ್ಕೆ ಚಿಕ್ಸಿತೆಗಾಗಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಆದೇಶ ನೀಡಿದ್ದು, ಆದೇಶದಂತೆ ಗ್ರಾಮಕ್ಕೆ ಬಂದು ಚಿಕ್ಸಿತೆ ನೀಡುತ್ತಾರೆ ಎಂದು ತಿಳಿಸಿದರು. ಗ್ರಾಪಂನಿಂದ ವಾರ್ಡ್‌ಗಳಲ್ಲಿ ಫಾಗಿಂಗ್ ಸಿಂಪಡಿಸಿದ್ದು, ಸ್ವಚ್ಛತೆಗೆ ಹೆಚ್ಚು ಗಮನಹರಿಸಬೇಕು. ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಗ್ರಾಪಂ ಸದಸ್ಯ ನಾಗರಾಜ ಅಬಕಾರಿ ತಿಳಿಸಿದರು.