ಜಿಲ್ಲೆಯ ವಿವಿಧೆಡೆ ಮಳೆಯ ಆರ್ಭಟ

ಹಾಸನ: ಜಿಲ್ಲೆಯ ಅರಕಲಗೂಡು, ಬೇಲೂರು ಹಾಗೂ ಹಾಸನ ತಾಲೂಕಿನಲ್ಲಿ ಭಾನುವಾರ ಸಂಜೆ ಅರ್ಧ ಗಂಟೆಗೂ ಅಧಿಕ ಕಾಲ ಜೋರು ಮಳೆ ಸುರಿದು ಇಳೆಗೆ ತಂಪೆರೆಯಿತು.
ಸಂಜೆ 4 ಗಂಟೆಗೆ ಆರಂಭವಾದ ಮಳೆ 4.40ರವರೆಗೆ ಜೋರಾಗಿ ಸುರಿಯಿತು. ಹಾಸನ ನಗರ, ಬಿ. ಕಾಟಿಹಳ್ಳಿ, ದುದ್ದ, ನಿಟ್ಟೂರು ಭಾಗದಲ್ಲಿ ಮಳೆಯಾಯಿತು. ಅರಕಲಗೂಡು ತಾಲೂಕಿನ ಕೆಲವೆಡೆ ಗುಡುಗು, ಸಿಡಿಲು ಆರ್ಭಟಿಸಿದರೆ ಮತ್ತೆ ಕೆಲ ಪ್ರದೇಶಗಳಲ್ಲಿ ಮಳೆ ಸುರಿದಿದೆ. ಬೇಲೂರು ತಾಲೂಕಿನಾದ್ಯಂತ 20 ನಿಮಿಷ ಬಿಡದೆ ಮಳೆ ಸುರಿದಿದೆ. ಅರಸೀಕೆರೆಯಲ್ಲಿ ಜಿಟಿಜಿಟಿ ಮಳೆಯಾಗಿದ್ದು, ಚನ್ನರಾಯಪಟ್ಟಣ, ಹೊಳೆನರಸೀಪುರ, ಸಕಲೇಶಪುರ ಹಾಗೂ ಆಲೂರು ಭಾಗದಲ್ಲಿ ಮಳೆಯಾಗಿಲ್ಲ.
ಸಾರ್ವಜನಿಕರ ಹರ್ಷ: ಬಿಸಿಲ ಬೇಗೆಗೆ ಬಸವಳಿದಿದ್ದ ನಗರದ ಜನತೆಗೆ ಭಾನುವಾರ ಸುರಿದ ಮಳೆ ತಂಪೆರೆದಿದ್ದು ಹರ್ಷವನ್ನುಂಟು ಮಾಡಿದೆ. ಶನಿವಾರ ರಾತ್ರಿ ಮಳೆಯ ಮುನ್ಸೂಚನೆ ಇತ್ತಾದರೂ ವರುಣ ಕೃಪೆ ತೋರಲಿಲ್ಲ. ಭಾನುವಾರ ಬೆಳಗ್ಗೆಯಿಂದಲೇ ತೀವ್ರ ಬಿಸಿಲು ಕಾಣಿಸಿಕೊಂಡಿತು. ಮಧ್ಯಾಹ್ನ 3 ಗಂಟೆಯಾಗುತ್ತಿದ್ದಂತೆ ಮೋಡ ಮುಸುಕಿ ಮಳೆಯ ಆಶಾಭಾವ ಮೂಡಿತು. ಶಾಲಾ ಕಾಲೇಜುಗಳಿಗೆ ರಜೆ ದಿನವಾದ್ದರಿಂದ ರಸ್ತೆಯಲ್ಲಿ ಸಾರ್ವಜನಿಕ ಸಂಚಾರವೂ ಇರಲಿಲ್ಲ. ಹೊಸ ಬಸ್ ನಿಲ್ದಾಣ, ಡೇರಿ ವೃತ್ತ, ಮಹಾವೀರ ವೃತ್ತದಲ್ಲಿ ನಿಂತಿದ್ದ ಜನರು ಮಳೆಯಿಂದ ಆಶ್ರಯ ಪಡೆಯಲು ಹತ್ತಿರದ ಕಟ್ಟಡಗಳ ಮೊರೆ ಹೋದರೆ ಮತ್ತೆ ಕೆಲವರು ಆಟೋಗಳಲ್ಲಿ ಪ್ರಯಾಣ ಬೆಳೆಸಿದರು.
ಅರ್ಧ ಗಂಟೆ ಸುರಿದ ಮಳೆಗೆ ನಗರದ ಪ್ರಮುಖ ರಸ್ತೆಗಳು ಜಲಾವೃತವಾದವು. ಅಮಿರ್ ಮೊಹಲ್ಲಾ, ರಂಗೋಲಿ ಹಳ್ಳ ವ್ಯಾಪ್ತಿಯ ಇಳಿಜಾರು ಮನೆಗಳಲ್ಲಿ ನೀರು ಪ್ರವೇಶಿಸಿ ನಿವಾಸಿಗಳಿಗೆ ತೊಂದರೆಯಾಯಿತು. ಮನೆಯೊಳಗೆ ಸೇರಿದ ನೀರನ್ನು ಹೊರತೆಗೆಯಲು ಮಹಿಳೆಯರು ಹರಸಾಹಸಪಟ್ಟರು. ಜೋರು ಮಳೆಯಿಂದಾಗಿ ನಗರದಲ್ಲಿ ಕೆಲ ಕಾಲ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು.
ಬಿತ್ತನೆಗೆ ಬೇಕು ಮಳೆ: ಮುಂಗಾರು ಹಂಗಾಮಿನಲ್ಲಿ ಜಿಲ್ಲಾದ್ಯಂತ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ದ್ವಿದಳ ಧಾನ್ಯ ಹಾಗೂ ಆಲೂಗಡ್ಡೆ ಬಿತ್ತನೆಗೆ ಇದು ಸಕಾಲ. ಬಿತ್ತನೆಗಾಗಿ ರೈತರು ಭೂಮಿ ಸಿದ್ಧಪಡಿಸಿಕೊಂಡಿದ್ದು ಮಳೆಗಾಗಿ ಕಾಯುತ್ತಿದ್ದಾರೆ. ಬಿತ್ತನೆ ಕಾರ್ಯ ಕೈಗೊಳ್ಳಲು ಇನ್ನೂ ಮಳೆ ಬೇಕಾಗುತ್ತದೆ. ವಾಡಿಕೆಯಂತೆ ಇಷ್ಟು ಹೊತ್ತಿಗೆ ಐದಾರು ಮಳೆ ಬೀಳಬೇಕಿತ್ತು. ಈ ವರ್ಷ ಮಳೆಯ ಅಭಾವ ಎದುರಾಗಿದ್ದು ಈ ವಾರದಲ್ಲಿ ನಾಲ್ಕೈದು ಮಳೆಯಾದರೆ ಬಿತ್ತನೆ ಕಾರ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಕೃಷಿ ಇಲಾಖೆ ಉಪನಿರ್ದೇಶಕ ಕೆ.ಮಧುಸೂದನ್ ಹೇಳಿದರು.
ವಿವಿಧೆಡೆ ಸಾಧಾರಣ ಮಳೆ
ಚನ್ನರಾಯಪಟ್ಟಣ: ಪಟ್ಟಣ ಸೇರಿದಂತೆ ತಾಲೂಕು ವ್ಯಾಪ್ತಿಯ ವಿವಿಧೆಡೆ ಮಿಂಚು ಗುಡುಗಿನೊಂದಿಗೆ ಭಾನುವಾರ ಸಂಜೆ ಸುಮಾರಿನಲ್ಲಿ ಮಳೆ ಸುರಿಯಿತು.
ಸಂಜೆ 5.30 ಕ್ಕೆ ಪ್ರಾರಂಭವಾದ ಮಳೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದಿದ್ದು, ಮಳೆಯ ನಡುವೆ ಹಲವು ಬಾರಿ ಸಿಡಿಲು ಅಬ್ಬರಿಸಿತು. ಗಾಳಿಯ ಪ್ರಮಾಣ ಕಡಿಮೆಯಿದ್ದರಿಂದ ಮಳೆ ಒಂದೇ ಸಮನೆ ಸುರಿಯಿತು. ಶ್ರವಣಬೆಳಗೊಳ, ಮಟ್ಟನವಿಲೆ, ಕಲ್ಕೆರೆ, ಉದಯಪುರದಲ್ಲಿ ವಿವಿಧೆಡೆ ಸಾಧಾರಣ ಮಳೆಯಾಗಿದೆ.

ಅರಕಲಗೂಡು: ತಾಲೂಕಿನ ಕೆಲವೆಡೆ ಭಾನುವಾರ ಭಾರಿ ಮಿಂಚು ಗುಡುಗಿನ ಆರ್ಭಟದೊಂದಿಗೆ ಸಾಧಾರಣ ಮಳೆ ಸುರಿಯಿತು. ಬಸವಾಪಟ್ಟಣ, ಬೆಳವಾಡಿ, ನಿಲುವಾಗಿಲು ಭಾಗದಲ್ಲಿ ಮಳೆಯ ಸಿಂಚನವಾಗಿದೆ. ಸಂಜೆ 4.30ರ ಸುಮಾರಿಗೆ ಕಾಳೇನಹಳ್ಳಿ, ಹೊನ್ನೇನಹಳ್ಳಿ, ಕೇರಳಾಪುರ, ರಾಮನಾಥಪುರ ಭಾಗದಲ್ಲಿ ಸುಮಾರು ಅರ್ಧ ತಾಸು ಕಾಲ ಉತ್ತಮ ಮಳೆಯಾಗಿದೆ. ಬಸವನಹಳ್ಳಿ, ಬೆಟ್ಟಸೋಗೆ, ಆನಂದೂರು ಭಾಗದಲ್ಲಿ ಮಿಂಚು ಗುಡುಗು ಸಹಿತ ಜೋರಾಗಿ ಆರ್ಭಟಿಸುತ್ತಿದ್ದ ಸಿಡಿಲಿನ ಅಬ್ಬರ ಜನರನ್ನು ಬೆಚ್ಚಿ ಬೀಳಿಸಿತು.
ಕೆಲ ಭಾಗದಲ್ಲಿ ಮಳೆ ಸುರಿಯುತ್ತಿದ್ದರೆ ಇನ್ನು ಕೆಲವೇ ಅಂತರದಲ್ಲಿ ಬಿಸಿಲು ಕಾಣಿಸಿಕೊಳ್ಳುತ್ತಿತ್ತು. ಮೋಡ ಮುಸುಕಿದ ವಾತಾವರಣ ಕಂಡರೂ ಕಾದು ಕಾವಾಲಿಯಂತಾಗಿರುವ ಭೂಮಿಯನ್ನು ತಂಪಾಗಿಸದೆ ಮಳೆ ಮುನಿಸಿಕೊಂಡಿರುವುದು ತಾಲೂಕಿನ ರೈತಾಪಿ ವರ್ಗದ ಜನರನ್ನು ನಿರಾಸೆಗೊಳಿಸಿತು.