ಸುಗುಣೇಂದ್ರ ತೀರ್ಥ ಶ್ರೀಗಳಿಂದ ಸ್ಮರಣೆ
ಕೃಷ್ಣ ಮಠದಲ್ಲಿ ಆರಾಧನಾ ಮಹೋತ್ಸವ
ವಿಜಯವಾಣಿ ಸುದ್ದಿಜಾಲ ಉಡುಪಿ
ಮಧ್ವಾಚಾರ್ಯರು ತಮ್ಮ ಶಿಷ್ಯಯರೊಂದಿಗೆ ಒಮ್ಮೆ ಉಡುಪಿಯಿಂದ ಬದರಿಗೆ ಯಾತ್ರೆ ಕೈಗೊಂಡಿದ್ದರು. ಸಂಚಾರದ ಮಧ್ಯದಲ್ಲಿ ಕಳ್ಳರು ಅಡ್ಡಗಟ್ಟಿದರು. ಆಗ ದೈಹಿಕವಾಗಿ ಬಲಾಢ್ಯರಾಗಿದ್ದ ತನ್ನ ಶಿಷ್ಯ ಉಪೇಂದ್ರ ತೀರ್ಥರಿಗೆ ಕಳ್ಳರನ್ನು ಓಡಿಸುವಂತೆ ಮಧ್ವರು ಸೂಚಿಸಿದ್ದರು. ಆ ಕಾರ್ಯವನ್ನು ಉಪೇಂದ್ರ ಶ್ರೀಗಳು ಸಮರ್ಥವಾಗಿ ನಿರ್ವಹಿಸಿದ್ದರು. ಬಳಿಕ ಅವರು ಶಕ್ತಿಯುತ ಶ್ರೀಪಾದರಾಗಿಯೇ ಖ್ಯಾತಿ ಗಳಿಸಿದ್ದ ಬಗ್ಗೆ ಅವರ ಚರಿತ್ರೆಯಲ್ಲಿ ದಾಖಲಾಗಿದೆ ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಸ್ಮರಿಸಿದರು.
ಪುತ್ತಿಗೆ ಮಠದ ಮೂಲ ಪುರುಷರಾದ ಉಪೇಂದ್ರ ತೀರ್ಥ ಶ್ರೀಪಾದರ ಆರಾಧನಾ ಮಹೋತ್ಸವ ಹಾಗೂ ಶ್ರೀ ವಾದಿರಾಜ ಜಯಂತಿ ಮಹೋತ್ಸವದ ನಿಮಿತ್ತ ರಾಜಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಶೀರ್ವಚನದೊಂದಿಗೆ ಸಂಸ್ಮರಣೆ ಮಾಡಿದರು.
ಗುರು ಮಹಿಮೆ ಅಪಾರ
ವಿದ್ವಾನ್ ಹೃಷಿಕೇಶ ಮಠದ ಮಾತನಾಡಿ, ಅಧ್ಯಾತ್ಮದಲ್ಲಿ ಉನ್ನತ ಸಾಧನೆ ಮಾಡಿದ್ದ ಯತಿದ್ವಯರ ಸ್ಮರಣೆ ಚೇತೋಹಾರಿಯಾಗಿದೆ. ಗುರು ಮಹಿಮೆ ಎಂದಿಗೂ ಅಪಾರ ಹಾಗೂ ಶ್ರೇಷ್ಠವಾಗಿಯೇ ಇರುತ್ತದೆ. ಅಂತಹ ಸಾಧಕ ದ್ವಯರ ಜಯಂತಿ ಒಂದೇ ದಿನ ಬಂದಿದ್ದು, ಅವರನ್ನು ಪೂಜಿಸುವ, ಆರಾಧಿಸುವ ಅವಕಾಶ ಭಾಗ್ಯ ನಮಗೆ ಲಭಿಸಿದೆ ಎಂದರು.
ಕೃಷ್ಣನಿಗೆ ವಿಶೇಷ ಪೂಜೆ
ಭಾನುವಾರ ಬೆಳಗ್ಗೆ ಪುತ್ತಿಗೆ ಪಟ್ಟದ ಕಿರಿಯ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದರೊಂದಿಗೆ ಸುಗುಣೇಂದ್ರ ಶ್ರೀಗಳು ಕೃಷ್ಣನ ಸಮ್ಮುಖದಲ್ಲಿ ಅರ್ಘ್ಯ ಪಾದ್ಯಾ ನೆರವೇರಿಸಿದರು. ಬಳಿಕ ವಿಶೇಷ ಪೂಜೆ ಕೈಗೊಂಡರು.
ಮೆರವಣಿಗೆ, ರಥೋತ್ಸವ
ಬೆಳಗ್ಗೆಯಿಂದ ಸಂಜೆಯವರೆಗೆ ಸ್ಥಳಿಯ ಭಜನಾ ಮಂಡಳಿಯ ಸದಸ್ಯರು ರಾಜಾಂಗಣದಲ್ಲಿ ಶ್ರೀ ವಾದಿರಾಜರ ಕೀರ್ತನೆ ಮಾಡಿದರು. ಮಧ್ವ ಮಂಟಪದಲ್ಲಿ ಮಂಗಳೂರಿನ ಶ್ರೀ ಹಯವದನ ಭಜನಾ ಮಂಡಳಿಯ ಸದಸ್ಯರು ಭಜನಾ ಸೇವೆ ಸಲ್ಲಿಸಿದರು. ಸಂಜೆ 5 ಗಂಟೆಗೆ ಪರ್ಯಾಯ ಶ್ರೀಗಳ ಉಪಸ್ಥಿತಿಯಲ್ಲಿ ರಥಬೀದಿಯಲ್ಲಿ ಶ್ರೀ ವಾದಿರಾಜರ ಮತ್ತು ಉಪೇಂದ್ರ ತೀರ್ಥರ ಭಾವಚಿತ್ರದ ಮೆರವಣಿಗೆ ನಡೆಯಿತು. ಸಾಯಂಕಾಲ 7ರಿಂದ ರಾಜಾಂಗಣದಲ್ಲಿ ಭರತನಾಟ್ಯ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರಾತ್ರಿ ವೇಳೆ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಬ್ರಹ್ಮ ರಥೋತ್ಸವ ನಡೆಯಿತು.
ಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಮಹಿತೋಷ್ ಆಚಾರ್ಯ, ಆನಂದ ತೀರ್ಥ ಮಠದ, ಮಧ್ವ ರಮಣಾಚಾರ್ಯ, ರಮೇಶ್ ಭಟ್ ಇತರರಿದ್ದರು.
ಅಧ್ಯಾತ್ಮ ಸಾಧನೆಗೆ ಬೇಕು ದೇಹಬಲ
ಹೆಸರೇ ಸೂಚಿಸುವಂತೆ ಉಪೇಂದ್ರ ಎಂದರೆ ಇಂದ್ರನಿಗಿಂತ ಶ್ರೇಷ್ಠ ಎಂಬ ಅರ್ಥ ಬರುತ್ತದೆ. ಮಹಾ ತಪಸ್ವಿಗಳಾಗಿದ್ದ ಅವರ ಸಂಸ್ಮರಣೆಯು ಪುಣ್ಯದಾಯಕ ಕಾರ್ಯ. ಅಧ್ಯಾತ್ಮ ಸಾಧನೆಯಲ್ಲಿ ದೇಹಬಲವೂ ಕೂಡ ಅವಶ್ಯಕ ಎನ್ನುವುದನ್ನು ಉಪೇಂದ್ರ ತೀರ್ಥರಿಂದ ತಿಳಿಯುವಂತಾಗಿದೆ. ಶ್ರೀ ವಾದಿರಾಜರೂ ಸಹ ಉಪೇಂದ್ರ ತೀರ್ಥರಂತೆ ಮಹಾಮಹಿಮರು, ಶಕ್ತಿ ಸಂಪನ್ನರು ಹಾಗೂ ಸಮಾಜ ಸುಧಾರಕರೂ ಆಗಿದ್ದರು. ಅಂತಹ ಪೂಜ್ಯ ಯತಿ ದ್ವಯರ ಸಾಧನೆ, ಸಂಸ್ಮರಣೆಯಿಂದ ನಮ್ಮೆಲ್ಲರ ಜೀವನಕ್ಕೆ ಸ್ಫೂರ್ತಿ ಸಿಗಲಿ ಎಂದು ಸುಗುಣೇಂದ್ರ ಶ್ರೀ ಹಾರೈಸಿದರು.
