ಬರ್ಮಾ ಅಡಕೆ ನಿಷೇಧ ಸಾಧ್ಯತೆ

ಪುತ್ತೂರು: ಕಳೆದ ಹಲವು ದಿನಗಳಿಂದ ಮಾರುಕಟ್ಟೆಯಲ್ಲಿ ಅಡಕೆ ಧಾರಣೆ ಇಳಿಮುಖ ಕಾಣುತ್ತಿದೆ. ಬರ್ಮಾದಿಂದ ಅಕ್ರಮವಾಗಿ ಕಳಪೆ ಗುಣಮಟ್ಟ ಹಾಗೂ ಕಡಿಮೆ ಬೆಲೆ ಅಡಕೆ ಭಾರತದ ಮಾರುಕಟ್ಟೆಗೆ ಬರುತ್ತಿರುವುದು ಇದಕ್ಕೆ ಮೂಲ ಕಾರಣ.

ಈ ಬಗ್ಗೆ ಕ್ಯಾಂಪ್ಕೊ ನೇತೃತ್ವದ ನಿಯೋಗ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಸುರೇಶ್ ಪ್ರಭು ಅವರನ್ನು ಭೇಟಿ ಮಾಡಿ, ಅಕ್ರಮ ಅಡಕೆ ಸರಬರಾಜನ್ನು ತಡೆ ಹಿಡಿಯುವಂತೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿರುವ ಸರ್ಕಾರ ಬರ್ಮಾ ಅಡಕೆಯನ್ನು ಭಾರತದಲ್ಲಿ ನಿಷೇಧಿಸುವ ಬಗ್ಗೆ ಚಿಂತನೆ ನಡೆಸಿದೆ.

ಈ ಬಗ್ಗೆ ಪುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಪ್ರಸ್ತುತ ಪರಿಸ್ಥಿತಿ ಅನುಕೂಲಕರವಾಗಿಲ್ಲ. ಹಾಗಾಗಿ ಅಡಕೆ ಅಕ್ರಮವಾಗಿ ಬರುವಿಕೆ ತಡೆಯಲು ಕಾಲಾವಕಾಶದ ಅಗತ್ಯವಿದೆ. ಲೋಕಸಭಾ ಚುನಾವಣೆ ಘೋಷಣೆಯಾದರೆ ಗಡಿ ಪ್ರದೇಶಗಳನ್ನು ಸಂಪೂರ್ಣ ಬಂದ್ ಮಾಡುವುದರಿಂದ ಅಡಕೆ ಸೇರಿದಂತೆ ಯಾವುದೇ ವಸ್ತುಗಳ ಅಕ್ರಮ ಸರಬರಾಜು ನಿಲ್ಲುತ್ತದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಅಡಕೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿ ಸ್ಥಿರ ಧಾರಣೆ ಕಂಡು ಬರುತ್ತದೆ. ಈ ಹಿಂದೆಯೂ ಲೋಕಸಭಾ ಚುನಾವಣೆ ಸಂದರ್ಭ ಅಡಕೆ ಧಾರಣೆ ಏರಿಕೆ ಕಂಡಿತ್ತು. ಮಯನ್ಮಾರ್‌ನಿಂದ ಬರುತ್ತಿರುವ ಅಡಕೆ ಗುಣಮಟ್ಟದ್ದಲ್ಲ. ಸ್ಥಳೀಯ ಗುಣಮಟ್ಟದ ಅಡಕೆಯನ್ನು ಸೇರಿಸಿಯೇ ಮಾರಾಟ ಮಾಡಬೇಕಾಗುತ್ತದೆ. ಅಡಕೆ ಧಾರಣೆ ಇಳಿಕೆ ಹಿನ್ನೆಲೆ ರೈತರು ಆತಂಕ ಪಡಬೇಕಾಗಿಲ್ಲ. ಒಂದು ವಾರದೊಳಗೆ ಅಡಕೆ ಧಾರಣೆ ಏರಿಕೆಯಾಗಲಿದೆ ಎಂದು ತಿಳಿಸಿದರು.