ಕಾರವಾರ: ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ, ಕಾರವಾರ ಪ್ರಾದೇಶಿಕ ಕೇಂದ್ರದ ವತಿಯಿಂದ, ಭಾರತದಲ್ಲಿ ಮೀನುಗಾರಿಕೆ ಹಾಗೂ ಜಲಕೃಷಿಗೆ ಸಂಬಂಧಿಸಿದ ಸೂಕ್ಷ್ಮಾಣು ಜೀವಿಗಳಲ್ಲಿ ಅಂಟಿ ಮೈಕ್ರೋಬಿಯಲ್ ರೆಸಿಸ್ಟೆನ್ಸ್ ಬಗ್ಗೆ ಮೌಲ್ಯ ಮಾಪನ ಮಾಡುವ ಯೋಜನೆಯ ಅಡಿಯಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹೊನ್ನವಾರ ಮೀನುಗಾರರು ಹಾಗೂ ಪಂಜರ ಮೀನು ಕೃಷಿಕರಿಗೆ ಸೋಷಿಯಲ್ ಕ್ಲಬ್ (ರಿ), ಹೊನ್ನವಾರದಲ್ಲಿ ಜಾಗೃತಿ ಕಾರ್ಯಕ್ರಮ ಮಂಗಳವಾರ ಜರುಗಿತು.
ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ ಕೊಚ್ಚಿ, ಕೇರಳದ ಪ್ರಧಾನ ವಿಜ್ಞಾನಿ ಹಾಗೂ ಪ್ರಧಾನ ಯೋಜನಾಧಿಕಾರಿ ಡಾ.ಎಸ್.ಆರ್. ಕೃಪೇಶ್ ಶರ್ಮ ಮಾತನಾಡಿ, ಜಲಕೃಷಿ ಪದ್ಧತಿಯ ಮೀನುಸಾಕಣೆಯಲ್ಲಿ ಅಂಟಿಬಯೋಟಿಕ್ಸ್ ಅತಿಯಾದ ಬಳಕೆ ಅಥವಾ ದುರುಪಯೋಗವು ರೋಗಾಣು ಹಾಗೂ ರೋಗಕಾರಕಗಳ ಅಂಟಿ ಮೈಕ್ರೋಬಿಯಲ್ ರೆಸಿಸ್ಟೆನ್ಸ್ ವಿಕಸನಗೊಳ್ಳಲು ಕಾರಣವಾಗುತ್ತದೆ, ಇದರಿಂದ ಮೀನಿನ ಸೋಂಕುಗಳಿಗೆ ಚಿಕಿತ್ಸೆ ನೀಡಲು ಕಷ್ಟಕರವಾಗುತ್ತದೆ. ಅಂಟಿಬಯೋಟಿಕ್ಸ್ ಬಳಕೆಯನ್ನು ನಿಯಂತ್ರಿಸದಿದ್ದರೆ ಅಂಟಿ ಮೈಕ್ರೋಬಿಯಲ್ ರೆಸಿಸ್ಟೆನ್ಸ್ ನ ಅನಿಯಂತ್ರಿತ ಹರಡುವಿಕೆಯು ಆರ್ಥಿಕ ನಷ್ಟಕ್ಕೆ ದಾರಿ ಮಾಡಿ ಕೊಡುವುದಲ್ಲದೆ, ಮೀನಿನ ಉತ್ಪಾದಕತೆ ಕಡಿಮೆಯಾಗುವುದು ಮತ್ತು ಸಾರ್ವಜನಿಕ ಆರೋಗ್ಯ ಹಾಗೂ ಜೀವ ವೈವಿದ್ಯತೆಗೆ ದೀರ್ಘಕಾಲೀನ ಹಾನಿಗೆ ಕಾರಣವಾಗಬಹುದು ಎಂದು ತಿಳಿಸಿದರು
ಕಾರವಾರದ ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ಕಡಲ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶಿವಕುಮಾರ್ ಹರಗಿ ಮಾತನಾಡಿ , ಅತಿಯಾದ ಅಂಟಿಬಯೋಟಿಕ್ಸ್ ಬಳಕೆಯಿಂದ ಜಲಚರ ಹಾಗೂ ಮಾನವನ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ಮೀನುಕೃಷಿಕರಿಗೆ ವಿವರಿಸಿದರು.
ಸಿ.ಎಮ್.ಎಫ್.ಅರ್.ಐ ನ ಹಿರಿಯ ವಿಜ್ಞಾನಿ ಡಾ.ಜಿ.ಬಿ. ಪುರುಷೋತ್ತಮ ಪಂಜರ ಮೀನು ಕೃಷಿಯ ಬಗ್ಗೆ ಉಪನ್ಯಾಸ ನೀಡಿ,
ಹೊನ್ನವಾರ ತಾಲ್ಲೂಕ್‌ನಲ್ಲಿ ಪಂಜರ ಮೀನು ಕೃಷಿಕರು ಎದುರಿಸುವ ಸವಾಲುಗಳು ಹಾಗೂ ಅವಕಾಶಗಳ ಬಗ್ಗೆ ಕೃಷಿಕರೊಂದಿಗೆ
ಸಂವಾದ ನಡೆಸಿ, ಸೂಕ್ತ ಸಲಹೆಗಳನ್ನು ನೀಡಿದರು. ಸಿ.ಎಂ.ಎಪ್.ಆರ್.ಐ ನ ಮುಖ್ಯಸ್ಥ ಹಾಗೂ ಪ್ರಧಾನ ವಿಜ್ಞಾನಿ ಡಾ. ಸಿ. ಕಾಳಿದಾಸ್ ಸ್ವಾಗತಿಸಿದರು. ವಿಜ್ಞಾನಿ ಡಾ. ಕುರುವ ರಘು ರಾಮುಡು ವಂದಿಸಿದರು.