ವಿವೇಚನೆ ಮೆರೆಯೋಣ, ಮೂರ್ಖರಾಗದಿರೋಣ…ಮತದಾನ ನಮ್ಮ ಹಕ್ಕೂ, ಕರ್ತವ್ಯವೂ ಹೌದು

ಇಂದು ಏಪ್ರಿಲ್ 1. ಮೂರ್ಖರ ದಿನ ಎಂಬುದು ಜನಜನಿತ ಆಚರಣೆ. ಆದರೆ ಇದೇ ತಿಂಗಳು ಮತದಾನದ ಹಬ್ಬವೂ ಇದೆ. ನಾವು ನಮ್ಮ ಹಕ್ಕು ಚಲಾಯಿಸುವ ಮೂಲಕ ಮೂರ್ಖರಾಗುವುದರಿಂದ ತಪ್ಪಿಸಿಕೊಳ್ಳೋಣ, ಸಂಭ್ರಮಿಸೋಣ. ಹದಿನೇಳನೇ ಲೋಕಸಭೆಗೆ ಸಂಸದರನ್ನು ಕಳುಹಿಸಲು ಮತದಾನ ಮಾಡಬೇಕಾದ ಸಮಯ ಸನಿಹವಾಗಿದೆ. ವೋಟು ಅಥವಾ ಮತವೆಂಬುದು ಜನರ ಕೈಲಿರುವ ಪ್ರಬಲ ಅಸ್ತ್ರವಾಗಿದ್ದು, ಅದನ್ನು ಯಥೋಚಿತವಾಗಿ ಪ್ರಯೋಗಿಸಿದಲ್ಲಿ ನಮ್ಮಿಚ್ಛೆಯ ಆಡಳಿತವನ್ನು ತರಲು ಸಾಧ್ಯವಿದೆ. ಆದರೆ, ವ್ಯವಸ್ಥೆಯ ಬಗ್ಗೆ ನಿರಾಶೆ ಹೊಂದಿದರೆ ಬೇಕಷ್ಟು ನಕಾರಾತ್ಮಕ ಸಂಗತಿಗಳು ಕಾಣಸಿಗುತ್ತವೆ. ಒಂದು ವೋಟಿನಿಂದ ಏನೂ ಬದಲಾವಣೆಯಾಗದು; ವ್ಯವಸ್ಥೆ ಕೆಟ್ಟು ಹೋಗಿರುವಾಗ ನಮ್ಮ ಮತವನ್ನೂ ವ್ಯರ್ಥಗೊಳಿಸುವುದೇಕೆ?; ಯಾರು ಬಂದರೂ ನಾವು ರಾಗಿ ಬೀಸೋದು ತಪು್ಪತ್ತದೆಯಾ?; ಆಳುಗರು ಸರಿಯಾಗಿ ಆಡಳಿತ ನಡೆಸಿದ್ದಿದ್ದರೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ನಾವು ಅಭಿವೃದ್ಧಿಶೀಲ ದೇಶವಾಗಿಯೇ ಉಳಿಯಬೇಕಿತ್ತಾ?- ಹೀಗೆ ಹಲವರ ಮನಸ್ಸಿನಲ್ಲಿ ಪುಂಖಾನುಪುಂಖವಾಗಿ ಪ್ರಶ್ನೆಗಳು, ಅನುಮಾನಗಳು ಉದ್ಭವಿಸುತ್ತವೆ. ಹಾಗಂತ ಇಂಥ ಭಾವನೆಯೇ ತಪು್ಪ ಎಂದಲ್ಲ. ಆದರೆ, ನೈರಾಶ್ಯದಿಂದ ಏನೂ ಉಪಯೋಗವಿಲ್ಲ. ಹೀಗಾಗಿ ಮತದಾನ ಪ್ರಮಾಣ ಹೆಚ್ಚುವಲ್ಲಿ, ಅರ್ಹರನ್ನು ಆರಿಸಿ ತರುವಲ್ಲಿ ಪ್ರತಿಯೊಬ್ಬರ

ಯೋಗದಾನವೂ ಇದೆ. ಮತ ಚಲಾಯಿಸದಿರುವುದಕ್ಕೆ ನೆಪಗಳನ್ನು ಹೇಳುವುದು ಸರಿಯಲ್ಲ. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಕಮ್ಮಿಯಿರುತ್ತದೆ ಎಂಬ ಆಕ್ಷೇಪಗಳು ಲಾಗಾಯ್ತಿನಿಂದ ಇವೆ. ಇದಕ್ಕೆ ಅಂಕಿಅಂಶಗಳ ಸಮರ್ಥನೆಯೂ ಇದೆ. ಅದರಲ್ಲೂ, ಈ ಬಾರಿ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ದಿನವಾದ ಏಪ್ರಿಲ್ 18ರ ಆಸುಪಾಸು ರಜೆಗಳು ಬಂದಿರುವುದರಿಂದ ಮತಪ್ರಮಾಣ ಇನ್ನಷ್ಟು ಕಡಿಮೆಯಾಗಬಹುದೆಂಬ ಕಳವಳವೂ ಇದೆ. ಹೀಗಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಮತದಾರರ ಮೇಲಿದೆ.

ಭಾರತವನ್ನು ಯುವದೇಶ ಎಂದೇ ಬಣ್ಣಿಸಲಾಗುತ್ತದೆ. ಮೊದಲ ಸಲ ಮತಚಲಾಯಿಸಲು ಅರ್ಹತೆ ಪಡೆದಿರುವ ಯುವ ಮತದಾರರು ಈ ಬಾರಿ ದೇಶದ ಸುಮಾರು 280ಕ್ಕೂ ಅಧಿಕ ಕ್ಷೇತ್ರಗಳಲ್ಲಿ ನಿರ್ಣಾಯಕರಾಗುವ ಸಾಧ್ಯತೆ ಇದೆ. ಪ್ರತಿ ಕ್ಷೇತ್ರದಲ್ಲಿ ಈ ವಯೋಮಾನದ ಮತದಾರರ ಸಂಖ್ಯೆ ಸರಾಸರಿ 1.49 ಲಕ್ಷದಷ್ಟಿದೆ. ಕಳೆದ ಸಲ ಈ ಪ್ರಮಾಣಕ್ಕಿಂತ ಕಡಿಮೆ ಅಂತರದಲ್ಲಿ ಸೋತವರ ಲೆಕ್ಕದ ಮೇಲೆ ಯುವಕರು ನಿರ್ಣಾಯಕವಾಗಬಹುದಾದ ಕ್ಷೇತ್ರಗಳ ಅಂದಾಜು ಮಾಡಲಾಗಿದೆ. ಆದರೆ, ಅವರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಮತಗಟ್ಟೆಯತ್ತ ಬರಬೇಕಷ್ಟೆ! ಮತದಾನ ಪ್ರಮಾಣ ಕಡಿಮೆಯಾದಷ್ಟು ನಮ್ಮ ಇಷ್ಟದ ಆಯ್ಕೆಗಳ ಸಾಧ್ಯತೆಯೂ ಕಮ್ಮಿಯಾಗುತ್ತದೆ ಎಂಬುದನ್ನು ಗಮನಿಸಬೇಕು. ಕೆಲವೊಮ್ಮೆಯಂತೂ, ಕೇವಲ ಶೇ.25-30 ಮತಗಳನ್ನು ಪಡೆದ ಪಕ್ಷಗಳು ಸಹ ರಾಜ್ಯಗಳಲ್ಲಿ ಸರ್ಕಾರ ರಚಿಸಿದ ನಿದರ್ಶನಗಳಿವೆ. ಇನ್ನು, ಚುನಾವಣಾ ಕಣದಲ್ಲಿ ಕಾಂಚಾಣ ನರ್ತನದ ಬಗ್ಗೆ ಹೇಳಲೇಬೇಕಿದೆ. ಲೋಕಸಭಾ ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿಯ ವೆಚ್ಚಮಿತಿ 70 ಲಕ್ಷ ರೂ.ಗಳು.

ಆದರೆ ಅನಧಿಕೃತವಾಗಿ ವ್ಯಯಿಸುವ ಹಣದ ಮೊತ್ತ ಇದಕ್ಕಿಂತ ಎಷ್ಟೋ ಪಟ್ಟು ಹೆಚ್ಚಿರುತ್ತದೆ ಎಂಬುದು ಬಹಿರಂಗ ಗುಟ್ಟು. ಹೀಗಿದ್ದರೂ ಆ ಹಣದ ಹರಿವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲಾಗುತ್ತಿಲ್ಲ. ಈ ಚುನಾವಣಾ ಭ್ರಷ್ಟಾಚಾರವು ಮುಂದೆ ಇನ್ನೂ ದೊಡ್ಡ ಭ್ರಷ್ಟಾಚಾರಕ್ಕೆ ಎಡೆಮಾಡುತ್ತದೆ. ಈಗಂತೂ ಒಂದು ಮತಕ್ಕೆ ಇಷ್ಟು ಹಣ ಎಂದು ರಾಜಕೀಯ ಪಕ್ಷಗಳು ನಿರ್ಧರಿಸಿಬಿಡುತ್ತವೆ. ಆಯಾ ಕ್ಷೇತ್ರದಲ್ಲಿನ ಪೈಪೋಟಿ, ರಾಜಕೀಯ ವಾತಾವರಣ ಮುಂತಾದ ಅಂಶಗಳನ್ನು ಆಧರಿಸಿ ಈ ‘ಕೊಡುಗೆ’ ಮೊತ್ತ ಹೆಚ್ಚುವುದೂ ಇದೆ. ರಾಜಕೀಯ ಪಕ್ಷಗಳು, ‘ಏನು ಮಾಡೋದು? ಇಂದಿನ ಪರಿಸ್ಥಿತಿಯೇ ಹಾಗಿದೆ. ದುಡ್ಡು ಕೊಡದಿದ್ದರೆ ವೋಟು ಬೀಳುವುದಿಲ್ಲ’ ಎಂದು ಮತದಾರರ ಮೇಲೆಯೇ ಆರೋಪ ಹೊರಿಸುತ್ತವೆ. ಕೆಲ ಮತದಾರರೂ ಅಷ್ಟೇ ಜಾಣರಾಗಿದ್ದಾರೆ. ಎಲ್ಲ ಪಕ್ಷಗಳಿಂದಲೂ ಹಣ ಪಡೆಯುತ್ತಾರೆ! ದೇಶದಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕೆಂದರೆ ಮೊದಲು ಚುನಾವಣಾ ಭ್ರಷ್ಟಾಚಾರದ ಗಂಗೋತ್ರಿಯ ಹರಿವನ್ನು ತಗ್ಗಿಸಬೇಕು. ಇಲ್ಲಿ ಜನರು ಮತ್ತು ರಾಜಕೀಯ ಪಕ್ಷಗಳು ಇಬ್ಬರ ಜವಾಬ್ದಾರಿಯೂ ಇದೆ. ಒಂದೇ ಕೈನಿಂದ ಚಪ್ಪಾಳೆಯಾಗದು!

ರಾಜಕೀಯದ ರಂಗದ ಅಪರಾಧಿಕರಣ ಹೆಚ್ಚು ಚರ್ಚೆಯ ವಸ್ತು. ವರ್ಷದ ಹಿಂದೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ನೀಡಿದ ಮಾಹಿತಿ ಪ್ರಕಾರ, ದೇಶದ ಶಾಸನಸಭಾ ಸದಸ್ಯರಲ್ಲಿ (ಅಂದರೆ ಸಂಸದರು ಮತ್ತು ಶಾಸಕರು. ಒಟ್ಟು ಸಂಖ್ಯೆ 4,896.) ಶೇ.36 ಮಂದಿ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಯಾವುದೋ ಜನಪರ ಹೋರಾಟ ಮಾಡಿ ಚಿಕ್ಕಪುಟ್ಟ ಕೇಸ್ ದಾಖಲಾದರೆ ಅದು ಬೇರೆ ಮಾತು. ಏಕೆಂದರೆ, ರಾಜಕೀಯ ವಿರೋಧಿಗಳನ್ನು ಹಣಿಯಲು ಕ್ಷುಲ್ಲಕ ಕಾರಣಕ್ಕೂ ಕೇಸ್ ಹಾಕಿಸಲಾಗುತ್ತದೆ. ಆದರೆ, ಅಪರಾಧ ಚಟುವಟಿಕೆಗಾಗಿ ಪ್ರಕರಣ ದಾಖಲಾದರೆ ಅದು ಬೇರೆಯದೇ ಆಯಾಮದ್ದು. ಗಂಭೀರ ಅಪರಾಧ ಪ್ರಕರಣಗಳಲ್ಲಿ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಗೆ ಶಿಕ್ಷೆಯಾದಲ್ಲಿ ಅಂಥ ಶಾಸನಸಭಾ ಸದಸ್ಯರ ಸದಸ್ಯತ್ವ ತಕ್ಷಣ ರದ್ದಾಗುತ್ತದೆ ಮತ್ತು ಆರು ವರ್ಷಗಳವರೆಗೆ ಅವರು ಚುನಾವಣೆಗೆ ನಿಲ್ಲುವಂತಿಲ್ಲ ಎಂಬ ನಿಯಮ ಪ್ರಜಾಪ್ರಾತಿನಿಧ್ಯ ಕಾಯ್ದೆಯಲ್ಲಿದೆ. ಈ ಕಾಯ್ದೆಗೆ ಇನ್ನಷ್ಟು ಬಲತುಂಬಬೇಕು ಎಂಬ ಆಗ್ರಹ ದಶಕಗಳಿಂದ ಇದೆ. ಕಾನೂನಿನ ಜತೆಗೆ ಜನರ ವಿವೇಚನೆಯೂ ಜತೆಗೂಡಿದರೆ ಉತ್ತಮ ಫಲಿತಾಂಶ ಸಾಧ್ಯ. ರಾಜಕೀಯ ನಾಯಕರು ಯಾವುದೋ ಬೇರೆ ಲೋಕದಿಂದ ಬಂದವರಲ್ಲ; ನಮ್ಮನಡುವಿನಿಂದಲೇ ರೂಪುಗೊಂಡವರು. ಹೀಗಾಗಿ ಅಭ್ಯರ್ಥಿಯ ಜಾತಕ ಪರಿಶೀಲಿಸಿಯೇ ಮತದ ಮುದ್ರೆಯೊತ್ತ ಬೇಕು.

‘ರಾಜಕಾರಣ ಫಟಿಂಗನೊಬ್ಬನ ಕೊನೆಯ ನಿಲ್ದಾಣ’ ಎಂಬ ಜನಜನಿತ ಮಾತು ಸುಳ್ಳಾದಲ್ಲಿ ಮಾತ್ರ ಪ್ರಜಾಪ್ರಭುತ್ವ ಬೆಳಗೀತು. ಈಗ ಜಾಗತಿಕ ಭೂ-ರಾಜಕೀಯ ಸನ್ನಿವೇಶಗಳು ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುತ್ತವೆ. ಅದಕ್ಕೆ ತಕ್ಕಂತೆ ದೇಶ ಪ್ರತಿಕ್ರಿಯಿಸಬೇಕಾಗುತ್ತದೆ. ಹೀಗಾಗಿ ಮತದಾರರು, ವಿಶೇಷವಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯ ಅಂಶಗಳ ಜತೆಗೆ ವಿಶ್ವ ವಿದ್ಯಮಾನಗಳನ್ನೂ ಗಮನಿಸಬೇಕಾಗುತ್ತದೆ; ನಿರ್ಣಯ ಕೈಗೊಳ್ಳಬೇಕಾಗುತ್ತದೆ. ಉಳಿದಂತೆ, ಅಭಿವೃದ್ಧಿ, ಉದ್ಯೋಗಸೃಷ್ಟಿ, ಸಮಾನತೆ ಮುಂತಾದ ಸಂಗತಿಗಳ ಜತೆಗೆ ರಾಷ್ಟ್ರೀಯತೆಯೂ ಪ್ರಮುಖವಾಗಿ ಪರಿಗಣಿಸಲ್ಪಡಬೇಕು. ಅಂತಿಮವಾಗಿ, ದೇಶ ಇದ್ದರೆ ಮಾತ್ರ ತಾನೆ ನಾವು? 21ನೇ ಶತಮಾನದಲ್ಲಿ ಭಾರತ ಸಾಗಬೇಕಾದ ದಿಕ್ಕನ್ನು ನಿರ್ಧರಿಸುವುದಕ್ಕೆ ಅನುವು ಮಾಡಿಕೊಡುವಂತಹ ಮತ್ತೊಂದು ಮಹತ್ತರ ಅವಕಾಶ ನಮ್ಮೆದುರು ನಿಂತಿದೆ. ಆ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವ ವಿವೇಚನೆಯನ್ನು ಪ್ರದರ್ಶಿಸಬೇಕಷ್ಟೆ. ಅದಿಲ್ಲವಾದಲ್ಲಿ ಐದು ವರ್ಷಗಳ ಕಾಲ ನಾವೆಲ್ಲರೂ ಮೂರ್ಖರಾಗಬೇಕಾಗುತ್ತದೆ. ‘ಜನರಿಂದ ಜನರಿಗಾಗಿ ಜನರಿಗೋಸ್ಕರ’ ಎಂಬ ಪ್ರಜಾಪ್ರಭುತ್ವದ ವ್ಯಾಖ್ಯಾನವನ್ನು ಸಾಕಾರಗೊಳಿಸಬೇಕಾದವರೂ ನಾವೇ. ಮತದಾನ ನಮ್ಮ ಹಕ್ಕೂ ಹೌದು, ಕರ್ತವ್ಯವೂ ಹೌದು ಎಂಬುದನ್ನು ಮರೆಯದಿರೋಣ.