ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳಿಗೆ ವಾಸ್ತವ್ಯ ಶಿಬಿರ

ಚಿಕ್ಕಮಗಳೂರು: ಅಲ್ಲಿ ಊಟೋಪಚಾರದ ಕೊರತೆ ಇಲ್ಲ. ವಸತಿ ಸೌಲಭ್ಯವೂ ಇದೆ. ಕಲಿಕೆಯ ವಾತಾವರಣವೂ ಇಲ್ಲಿದೆ. ಬೋಧಕರೂ ಇದ್ದಾರೆ. ತಂದೆ-ತಾಯಿಯ ಪ್ರೀತಿಯೂ ಇಲ್ಲಿ ಲಭ್ಯವಿದೆ. ಸಾಕ್ಷಾತ್ ಮನೆಯ ವಾತಾವರಣ.

ಹಾಗೆಂದು ಇದು ಶಾಲೆಯೂ ಅಲ್ಲ. ವಸತಿ ಶಾಲೆಯೂ ಅಲ್ಲ. ಮನೆಯೂ ಅಲ್ಲ. ಶುಲ್ಕ ಪಾವತಿಸಿ ಪ್ರವೇಶ ಪಡೆದುಕೊಳ್ಳಬೇಕಾದ ಹಾಸ್ಟೆಲ್ ಅಂತೂ ಅಲ್ಲವೇ ಅಲ್ಲ. ಇಲ್ಲಿ ದೊರೆಯುವುದೆಲ್ಲವೂ ಉಚಿತವೆ. ಇದೇನಪ್ಪಾ ಎಂದು ಹುಬ್ಬೇರಿಸಬೇಡಿ. ವ್ಯಕ್ತಿಯೊಬ್ಬರ ಉದಾತ್ತ ಚಿಂತನೆಯ ಫಲವಾಗಿ ಒಡಮೂಡಿದ ಎಸ್​ಎಸ್​ಎಲ್​ಸಿ ಪರೀಕ್ಷಾರ್ಥಿಗಳ ಶಿಬಿರ.

27 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿರುವ ಈ ಶಿಬಿರ ಇದೀಗ 28ನೇ ವರ್ಷಕ್ಕೆ ಕಾಲಿಟ್ಟಿದೆ. ಅವರು ಬೇರೆ ಯಾರೂ ಅಲ್ಲ, ನಗರದ ಎರಡು ಶಿಕ್ಷಣ ಸಂಸ್ಥೆಗಳ ಮೂಲಕ ಸುಮಾರು 350 ವಿದ್ಯಾರ್ಥಿಗಳಿಗೆ ಶಿಕ್ಷಣದ ನೀರೆರೆಯುತ್ತಿರುವ ಉದ್ಯಮಿ ಕೆ.ಎಸ್.ರಮೇಶ್. ತಮ್ಮ ಕುಟುಂಬದ ವಿಶ್ವಸ್ತ ಸಂಸ್ಥೆಯಾದ ಶ್ರೀಮತಿ ಲಕ್ಷ್ಮೀದೇವಮ್ಮ ಕೆ.ಸೂರಪ್ಪ ಶೆಟ್ಟಿ ವೈಶ್ಯ ಹಾಸ್ಟೆಲ್​ನ ಮುಖ್ಯ ವಿಶ್ವಸ್ತರಾಗಿ 24 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮೊಳಕೆಯೊಡೆದಿದ್ದು ಹೀಗೆ: 1991ರ ಏಪ್ರಿಲ್​ನ ಅದೊಂದು ಮುಂಜಾನೆ ವಾಯುವಿಹಾರದಲ್ಲಿದ್ದ ರಮೇಶ್ ಅವರಿಗೆ ಶಾಲೆಯೊಂದರ ಆವರಣದಲ್ಲಿ ವಾಸ್ತವ್ಯ ಹೂಡಿದ್ದ 40-50 ವಿದ್ಯಾರ್ಥಿಗಳು ಕಂಡು ಬಂದರು. ಪರೀಕ್ಷಾ ಕೇಂದ್ರಗಳಿಗೆ ಹೊರಡಲು ಅಣಿಯಾಗುತ್ತಿದ್ದರು. ದಿನ ಮುಂಚಿತವಾಗಿ ಬಂದ ಮಳೆಯಿಂದಾಗಿ ಅವರ ಬಟ್ಟೆಗಳು ಹಾಗೂ ಪುಸ್ತಕಗಳು ತೊಯ್ದು ಹೋಗಿದ್ದವು.

ಅವರೆಲ್ಲ 40-50 ಕಿ.ಮೀ. ಅಂತರದ ಓದುವ ಕನಸಿಟ್ಟುಕೊಂಡ ಕುಗ್ರಾಮಗಳ ಕಡು ಬಡ ವಿದ್ಯಾರ್ಥಿಗಳು ಎಸ್​ಎಸ್​ಎಲ್​ಸಿ ಪರೀಕ್ಷೆಗಾಗಿ ಬಂದು ಬಿಡಾರ ಹೂಡಿದ್ದರೆಂಬುದು ವಿಚಾರಿಸಿದಾಗ ತಿಳಿದು ಬಂದಿತು. ಆ ವಿದ್ಯಾರ್ಥಿಗಳು 10-12 ದಿನಗಳ ಕಾಲ ಆ ಆವರಣದಲ್ಲೇ ಇದ್ದುಕೊಂಡು ಪರೀಕ್ಷೆಗಾಗಿ ಸಿದ್ಧತೆ ನಡೆಸಬೇಕಿತ್ತು. ಅವರ ಮನಸು ವಿದ್ಯಾರ್ಥಿಗಳಿಗಾಗಿ ಮರುಗಿತು. ಅಂದೇ ಆ ಮಕ್ಕಳಿಗೆ ವ್ಯವಸ್ಥೆ ಕಲ್ಪಿಸುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡ ರಮೇಶ್ ಮುಂದಿನ ವರ್ಷ ವ್ಯವಸ್ಥಿತ ಸ್ವರೂಪ ನೀಡಿ ಎಸ್​ಎಸ್​ಎಲ್​ಸಿ ಪರೀಕ್ಷಾರ್ಥಿಗಳಿಗೆ ಆಸರೆ ನೀಡುವ ಸಲುವಾಗಿ ಶಿಬಿರ ಆರಂಭಿಸಿಯೇ ಬಿಟ್ಟರು.

ಮೊದಲ ವರ್ಷ 56, ಈಗ 164 ವಿದ್ಯಾರ್ಥಿಗಳು: ಮೊದಲ ಶಿಬಿರ 1992ರಲ್ಲಿ ಆರಂಭಗೊಂಡಾಗ 56 ವಿದ್ಯಾರ್ಥಿಗಳು ಪ್ರವೇಶ ಪಡೆದು ಪರೀಕ್ಷೆ ಬರೆದರು. ಮುಂದೆ 2001ರಲ್ಲಿ 223, 2005ರಲ್ಲಿ 221 ಹಾಗೂ 2015ರಲ್ಲಿ 208 ಪರೀಕ್ಷಾರ್ಥಿಗಳು ಇಲ್ಲಿ ಆಸರೆ ಪಡೆದು ಪರೀಕ್ಷೆಗೆ ಹಾಜರಾದರು. ಉಳಿದ ವರ್ಷಗಳಲ್ಲಿ 150 ರಿಂದ 175ರ ವರೆಗೂ ಇಲ್ಲಿ ಶಿಬಿರದಲ್ಲಿ ಪಾಲ್ಗೊಂಡು ಪರೀಕ್ಷೆಗೆ ಹಾಜರಾಗಿ ಮುಂದಿನ ಶಿಕ್ಷಣಕ್ಕೂ ಸ್ಪೂರ್ತಿ ಪಡೆದುಕೊಂಡರು. ಈ ವರ್ಷ 91 ಬಾಲಕರು, 73 ಬಾಲಕಿಯರು ಸೇರಿ 164 ವಿದ್ಯಾರ್ಥಿಗಳು ಬುಧವಾರದಿಂದ ಇಲ್ಲಿ ಸೇರಿದ್ದಾರೆ. ಆಯಾ ಶಾಲೆಗಳ ಇಬ್ಬರು ಶಿಕ್ಷಕರು ಪರೀಕ್ಷಾ ದಿನಗಳಲ್ಲಿ ಇಲ್ಲಿ ತಂಗಿದ್ದು, ವಿದ್ಯಾರ್ಥಿಗಳ ಕಲಿಕೆಗೆ ನೆರವಾಗಬೇಕು. ಹಾಗೆಯೇ ಪ್ರತೀ ಶಿಬಿರಕ್ಕೂ ಪ್ರತ್ಯೇಕವಾಗಿ ವಿವಿಧ ವಿಷಯಾಧಾರಿತ ಬೋಧಕರನ್ನು ನೇಮಿಸುತ್ತಿದ್ದಾರೆ. ಬುಧವಾರ ಶಿಬಿರ ಸೇರಿಕೊಂಡಿದ್ದು, ಗುರುವಾರದಿಂದ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ದಿನಗಳ ನಡುವೆ ಬರುವ ರಜಾದಿನಗಳಲ್ಲಿ ಸಹ ಇಲ್ಲಿ ಊಟೋಪಚಾರ ನಡೆಯುತ್ತವೆ ಎನ್ನುವುದು ವಿಶೇಷ.

11 ಕುಗ್ರಾಮದ ವಿದ್ಯಾರ್ಥಿಗಳಿಗೆ ಆಶ್ರಯ: ಉದಾತ್ತ ನೆರವಿನ ಫಲವಾಗಿ ಅತ್ಯುತ್ತಮ ಪ್ರತಿಕ್ರಿಯೆ ಬಂದಿತು. ಕುಗ್ರಾಮದ ಬಡ ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನಗಳಲ್ಲಿ ತಮ್ಮೂರಿನ ದುರ್ಗಮ ಹಾದಿ ತುಳಿಯುವ ಅನಿವಾರ್ಯತೆ ತಪ್ಪಿತು. ಹೆಣ್ಣು ಮಕ್ಕಳಂತೂ ಎಲ್ಲ ರೀತಿಯಿಂದ ಎಲ್ಲ ರೀತಿಯಿಂದ ಸುರಕ್ಷಿತರಾದರು. ಹೀಗಾಗಿ ನಗರದಿಂದ ಸಾಕಷ್ಟು ದೂರದಲ್ಲಿರುವ, ಆದರೆ ಉತ್ತಮ ನಾಗರಿಕ ವ್ಯವಸ್ಥೆ ಇಲ್ಲದ ಕುಗ್ರಾಮಗಳಾದ ಆವತಿ, ಸಿರವಾಸೆ, ಬೆರಣಗೋಡು, ಬೊಗಸೆ, ಮಲ್ಲಂದೂರು, ತೊಗರಿಹಂಕಲ್, ಆಣೂರು, ಮಲ್ಲೇನಹಳ್ಳಿ, ಅಷ್ಟೇ ಏಕೆ ಈ ಸಲದಿಂದ ಅತ್ತಿಗುಂಡಿ, ಸಂಪಿಗೆ ಕಟ್ಟೆ, ಮಹಲ್ ಭಾಗಗಳಿಂದ ನೂರಾರು ವಿದ್ಯಾರ್ಥಿಗಳು ಈ ಶಿಬಿರದಿಂದಲೇ ವರ್ಷ ವರ್ಷ ಪರೀಕ್ಷೆ ಬರೆಯಲು ಸೇರ್ಪಡೆಯಾಗತೊಡಗಿದರು.

ಪರೀಕ್ಷಾ ಕೇಂದ್ರವನ್ನೇ ತಿರಸ್ಕರಿಸಿದ ಮಕ್ಕಳು: ಈ ನಡುವೆ ಮಲ್ಲಂದೂರು, ಆವತಿ, ಸಿರವಾಸೆ, ಬೊಗಸೆ ಗ್ರಾಮಗಳಿಗೆ ಸಂಬಂಧಿಸಿದಂತೆ ಪರೀಕ್ಷಾ ಕೇಂದ್ರವನ್ನು ಶಿಕ್ಷಣ ಇಲಾಖೆ ಆರಂಭಿಸಿದರೂ ವಿದ್ಯಾರ್ಥಿಗಳು ಅದನ್ನು ಒಪ್ಪಿಕೊಳ್ಳಲೇ ಇಲ್ಲ. ಹಿರಿಯ ವಿದ್ಯಾರ್ಥಿಗಳಿಂದ ಮಾಹಿತಿ ಅರಿತುಕೊಂಡಿದ್ದ ಪರೀಕ್ಷಾರ್ಥಿಗಳು ಇಲ್ಲಿರುವ ಸೌಲಭ್ಯ, ನಿತ್ಯ ಶಿಕ್ಷಕರಿಂದ ದೊರೆಯುವ ಪರೀಕ್ಷಾ ಪೂರ್ವ ಸಿದ್ಧತೆಗಳಿಂದಾಗಿ ಚಿಕ್ಕಮಗಳೂರು ಪರೀಕ್ಷಾ ಕೇಂದ್ರವೇ ತಮಗೆ ಬೇಕು ಎಂದು ಆ ಹೊಸ ಕೇಂದ್ರವನ್ನು ತಿರಸ್ಕರಿಸಿದರು. ರೋಟರಿ, ಜೇಸಿಸ್, ವಾಸವಿ ಯುವಕ ಸಂಘ, ಆರ್ಯ ವೈಶ್ಯ ಮಂಡಳಿ, ಶಿಕ್ಷಣ ಸಂಸ್ಥೆಗಳಲ್ಲಿ ವಾಸವಿ ವಿವಿಧೋದ್ದೇಶ ಸೌಹಾರ್ದ ಸಹಕಾರ ಬ್ಯಾಂಕ್, ವಾಸವಿ ವಿದ್ಯಾ ಸಂಸ್ಥೆಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಕೆ.ಎಸ್.ರಮೇಶ್ ಅವರ ಎಲ್ಲ ಕಾಯಕಕ್ಕೇ ತಾಯಿ ಎಸ್.ನಾಗರತ್ನ, ಪತ್ನಿ ಗಾಯತ್ರಿ, ಪುತ್ರ ಕಾರ್ತಿಕ್, ಸೊಸೆ ಕಾವ್ಯಾ ಸಾಥ್ ನೀಡುತ್ತಿದ್ದಾರೆ.

25 ವರ್ಷದಿಂದ ಒಬ್ಬರದೇ ಅಡುಗೆ : ಪ್ರತಿ ದಿನ ಬೆಳಗಿನ ಉಪಾಹಾರದಲ್ಲಿ ಬೇರೆ ಬೇರೆ ರೀತಿಯ ತಿಂಡಿಗಳು, ಮಧ್ಯಾಹ್ನ ಊಟಕ್ಕೆ ಅನ್ನ, ಸಾಂಬಾರು, ರಾತ್ರಿಗೆ ಅನ್ನ, ಸಾರು, ಎರಡು ಹೊತ್ತಿಗೂ ಮೊಸರು, ಉಪ್ಪಿನಕಾಯಿ, ರಜಾದಿನಗಳಲ್ಲಿ ಚಿತ್ರಾನ್ನ, ಪಲಾವು, ಮೊಸರನ್ನ. ಹೀಗೆ ಗುಣಮಟ್ಟದ ಊಟ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಪರೀಕ್ಷಾರ್ಥಿಗಳ ಶಿಬಿರಕ್ಕೆ 25 ವರ್ಷಗಳಿಂದ ಒಬ್ಬರದೇ ತಂಡ ಅಡುಗೆ ತಯಾರಿಯ ಹೊಣೆ ಹೊತ್ತುಕೊಂಡಿರುವುದು ವಿಶೇಷ. ನಗರದಲ್ಲಿ ಕ್ಯಾಟರಿಂಗ್ ನಡೆಸುತ್ತಿರುವ ಮುರಳೀಧರ್ ಅವರಿಗೆ ಈ ಕ್ರೆಡಿಟ್ ಸಲ್ಲುತ್ತದೆ. ಅದಕ್ಕಾಗಿ ಅವರಿಗೆ 25ನೇ ವರ್ಷಾಚರಣೆ ಸಂದರ್ಭ ರಮೇಶ್ ಬೆಳ್ಳಿಯ ಸೌಟನ್ನು ಉಡುಗೊರೆಯಾಗಿ ನೀಡಿದ್ದಾರೆ.