ಆರ್‌ಬಿಐ ಗವರ್ನರ್‌ ಆಗಿ ಶಕ್ತಿಕಾಂತ್‌ ದಾಸ್‌ ನೇಮಕ ತಪ್ಪು: ಸುಬ್ರಮಣಿಯನ್‌ ಸ್ವಾಮಿ

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ನ ನೂತನ ಗವರ್ನರ್‌ ಆಗಿ ಶಕ್ತಿಕಾಂತ್‌ ದಾಸ್‌ ಅವರನ್ನು ಸರ್ಕಾರ ನೇಮಿಸಿರುವುದು ತಪ್ಪು ಎಂದು ಬಿಜೆಪಿ ಹಿರಿಯ ನಾಯಕ, ಶಾಸಕ ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದಾರೆ.

ದಾಸ್‌ ಅವರು ಕೇಂದ್ರದ ಮಾಜಿ ಹಣಕಾಸು ಸಚಿವ, ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ ಅವರೊಂದಿಗೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ನ್ಯಾಯಾಲಯದ ಪ್ರಕರಣಗಳಲ್ಲಿ ಅವರನ್ನು ಉಳಿಸಲು ಪ್ರಯತ್ನಿಸಿದರು. ಆದರೆ, ಇದೆಲ್ಲ ಯಾಕಾಗಿದೆ ಎಂದು ನನಗೆ ತಿಳಿದಿಲ್ಲ. ಈ ನಿರ್ಧಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ.

ಶಕ್ತಿಕಾಂತ್‌ ದಾಸ್‌ 15ನೇ ಹಣಕಾಸು ಆಯೋಗದ ಸದಸ್ಯರು ಮತ್ತು ಆರ್ಥಿಕ ವ್ಯವಹಾರಗಳ ಮಾಜಿ ಕಾರ್ಯದರ್ಶಿಯಾಗಿದ್ದು, ಊರ್ಜಿತ್‌ ಪಟೇಲ್‌ರ ರಾಜೀನಾಮೆ ಬಳಿಕ ಮಂಗಳವಾರವಷ್ಟೇ ಆರ್‌ಬಿಐನ ನೂತನ ಗವರ್ನರ್‌ ಆಗಿ ನೇಮಕಗೊಂಡಿದ್ದರು. ಕಳೆದ ವರ್ಷವಷ್ಟೇ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಹುದ್ದೆಯಿಂದ ನಿವೃತ್ತಿಗೊಂಡಿದ್ದರು. ತರುವಾಯ ಅವರನ್ನು 15ನೇ ಹಣಕಾಸು ಆಯೋಗದ ಸದಸ್ಯರನ್ನಾಗಿ ಮಾಡಲಾಗಿತ್ತು. (ಏಜೆನ್ಸೀಸ್)