ಬೆಂಗಳೂರು: ಸರ್ಕಾರಿ ಜಮೀನು ಒತ್ತುವರಿ ಪ್ರಕರಣಗಳ ವಿಚಾರಣೆ ನಡೆಸಲು ಸ್ಥಾಪಿಸಲಾಗಿರುವ ಕರ್ನಾಟಕ ಭೂಕಬಳಿಕೆ (ನಿಷೇಧ) ವಿಶೇಷ ನ್ಯಾಯಾಲಯಕ್ಕೆ ಕಾಯಂ ಸಿಬ್ಬಂದಿ ನೇಮಕ ಮಾಡುವ
ಬಗ್ಗೆ ಕಾಲಮಿತಿಯೊಳಗೆ ಯೋಜನೆ ರೂಪಿಸಿ ಸಲ್ಲಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ.
ನಿವೃತ್ತ ಅಧಿಕಾರಿಗಳು ಮತ್ತು ನೌಕರರನ್ನು ಸರ್ಕಾರದ ವಿವಿಧ ಇಲಾಖೆಗಳಿಗೆ ಅರೆಕಾಲಿಕ ವಾಗಿ ನೇಮಕ ಮಾಡುವುದನ್ನು ಪ್ರಶ್ನಿಸಿ ಎಂ.ಎನ್. ವೇಣುಗೋಪಾಲ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಿಜೆ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಹಂಗಾಮಿ ನೌಕರರು, ಸಿಬ್ಬಂದಿಯಿಂದ ವಿಶೇಷ ಕೋರ್ಟ್ ಅನ್ನು ಸರಿಯಾದ ರೀತಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಆದ್ದರಿಂದ, ಎಷ್ಟು ಅವಧಿಯಲ್ಲಿ ಕಾಯಂ ಸಿಬ್ಬಂದಿ ನೇಮಕಕ್ಕೆ ನಿಯಮ ರೂಪಿಸಿ, ನೇಮಕಾತಿ ನಡೆಸಲಾಗುತ್ತದೆ ಎಂಬ ಬಗ್ಗೆ ಫೆ.14ರೊಳಗೆ ಪ್ರಮಾಣಪತ್ರ ಸಲ್ಲಿಸಬೇಕೆಂದು ನ್ಯಾಯಪೀಠ ಸರ್ಕಾರಕ್ಕೆ ಸೂಚಿಸಿತು.