More

    ಸಕ್ರಮಕ್ಕೆ ಅರ್ಜಿಗಳ ಮಹಾಪೂರ !

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸರ್ಕಾರಿ ಭೂಮಿ, ಅರಣ್ಯ ಜಮೀನು, ಗಾಯರಾಣ ಜಮೀನು ಮತ್ತಿತರ ಖಾಸಗಿ ಜಾಗಗಳಲ್ಲಿ ನಿರ್ಮಾಣಗೊಂಡಿರುವ ಅನಧಿಕೃತ ಕಟ್ಟಡಗಳ ಸಕ್ರಮ ಮಾಡುವಂತೆ ಸರ್ಕಾರಕ್ಕೆ ಅರ್ಜಿಗಳ ಮಹಾಪೂರವೇ ಹರಿದು ಬಂದಿದೆ.

    ಜಿಲ್ಲಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಿಸಿಕೊಂಡಿರುವ ಅನಧಿಕೃತ ಕಟ್ಟಡಗಳ ಸಕ್ರಮಕ್ಕೆ ಕೋರಿ ವರ್ಷದಲ್ಲಿ 49,402 ಅರ್ಜಿಗಳು ಸಲ್ಲಿಕೆಯಾಗಿವೆ. ಒಟ್ಟಾರೆಯಾಗಿ 504 ಗ್ರಾಪಂಗಳ ವ್ಯಾಪ್ತಿಯಲ್ಲಿ 1751 ಎಕರೆ ಪ್ರದೇಶದಲ್ಲಿನ ಅನಧಿಕೃತ ಕಟ್ಟಡಗಳ ಸಕ್ರಮಕ್ಕಾಗಿ ಅರ್ಜಿಗಳು ಬಂದಿವೆ. ಇದರಲ್ಲಿ ವಿವಿಧ ಕಾರಣಗಳಿಂದ 20 ಸಾವಿರಕ್ಕೂ ಅಧಿಕ ಅರ್ಜಿಗಳು ವಿಲೇವಾರಿ ಹಂತದಲ್ಲಿಯೇ ಬಾಕಿ ಉಳಿದುಕೊಂಡಿವೆ.

    ಕಳೆದ ನಾಲ್ಕೈದು ವರ್ಷಗಳ ಅವಧಿಯಲ್ಲಿ ಅಕ್ರಮ ಸಕ್ರಮ ಯೋಜನೆ ( 94ಸಿ ಮತ್ತು 94ಸಿಸಿ)ಯಡಿ ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳಲ್ಲಿ ಸ್ಮಶಾನ ಭೂಮಿ, ಅರಣ್ಯ ಜಮೀನು ಹೊರತು ಪಡಿಸಿ ಇತರ ಪ್ರದೇಶಗಳಲ್ಲಿ ನಿರ್ಮಾಣಗೊಂಡಿರುವ ಅನಧಿಕೃತ ಕಟ್ಟಡಗಳು ಸಕ್ರಮಗೊಂಡಿವೆ. ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣಗಳನ್ನು ಕೈಬಿಡಲಾಗಿದೆ.

    ಕೆಲ ಅರ್ಜಿ ವಿಲೇವಾರಿ: ಜಿಲ್ಲೆಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ 32 ಸಾವಿರಕ್ಕೂ ಅಧಿಕ ಅರ್ಜಿಗಳು ಅಕ್ರಮ-ಸಕ್ರಮ ಅಡಿ ಸಲ್ಲಿಕೆಯಾಗಿವೆ. ಈಗಾಗಲೇ ನಿಯಮದ ಪ್ರಕಾರ ಕೆಲ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ನಿಯಮ ಉಲ್ಲಂಘಿಸಿದ ಅರ್ಜಿಗಳು ತಿರಸ್ಕೃತಗೊಂಡಿವೆ. ಕೆಲವರು ಸರ್ಕಾರ ಸ್ಮಶಾನ ಭೂಮಿ ಒತ್ತುವರಿ ಮಾಡಿಕೊಂಡು ಜಾನುವಾರಗಳ ಶೆಡ್ ನಿರ್ಮಿಸಿದ್ದಾರೆ. ಅವುಗಳನ್ನು ಸಕ್ರಮಗೊಳಿಸಿಲು ಕೆಲವರು ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಸಾವಿರಕ್ಕೂ ಅಧಿಕ ಅರ್ಜಿಗಳು ವಿವಿಧ ಕಾರಣಗಳಿಂದ ತಿರಸ್ಕೃತಗೊಂಡಿವೆ.

    ಕಟ್ಟಡ ನಿರ್ಮಾಣ: ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿನ ಖಾಸಗಿ ಜಮೀನುಗಳಲ್ಲಿ ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಆದರೆ, ಗ್ರಾಮ ಪಂಚಾಯಿತಿ ದಾಖಲೆಗಳಲ್ಲಿ ಕಟ್ಟಡ ಒಬ್ಬರ ಹೆಸರಿನಲ್ಲಿದ್ದರೆ ಜಮೀನು ಇನ್ನೊಬ್ಬರ ಹೆಸರಿನಲ್ಲಿದೆ. ಇಂತಹ ಪ್ರಕರಣಗಳಲ್ಲಿ ಕೆಲವರು ಜಮೀನು ಇನ್ನೊಬ್ಬರಿಗೆ ಮಾರಾಟ ಮಾಡಿದ್ದರಿಂದ ಸಕ್ರಮಗೊಳಿಸುವುದು ಸಮಸ್ಯೆಯಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಅಕ್ರಮ ಕಟ್ಟಡಗಳಿಗೂ ಉತಾರ !

    ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣಕ್ಕೆ ಸ್ಥಳೀಯ ಗ್ರಾಪಂಗಳಿಂದ ಅನುಮತಿ ಪಡೆದಿಲ್ಲ. ಬಳಿಕ ಗ್ರಾಪಂ ಸದಸ್ಯರ ಮೂಲಕ ಆ ಕಟ್ಟಡಗಳಿಗೆ ಉತಾರ, ಇತರ ದಾಖಲೆ ಪಡೆದುಕೊಂಡಿದ್ದಾರೆ. ಅಲ್ಲದೆ, ಮೂಡಲಗಿ, ಗೋಕಾಕ, ಚಿಕ್ಕೋಡಿ, ರಾಯಬಾಗ ತಾಲೂಕಿನ ಗ್ರಾಪಂ ಆಡಳಿತವು ಅಕ್ರಮ ಕಟ್ಟಡಗಳಿಗೆ ಉತಾರ ನೀಡಿದ್ದರಿಂದ ಹಳ್ಳಿಗಳಲ್ಲಿ ಅನಧಿಕೃತ ಕಟ್ಟಡಗಳು ಹೆಚ್ಚಾಗಲು ಪ್ರಮುಖ ಕಾರಣವಾಗಿದೆ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ಚಿಕ್ಕೋಡಿ, ಅಥಣಿ, ಗೋಕಾಕನಲ್ಲಿ ಹೆಚ್ಚು

    ಜಿಲ್ಲೆಯಲ್ಲಿ ಚಿಕ್ಕೋಡಿ, ಗೋಕಾಕ, ಅಥಣಿ ತಾಲೂಕಿನ ವ್ಯಾಪ್ತಿಯ 945ಕ್ಕೂ ಅಧಿಕ ಎಕರೆ ಪ್ರದೇಶಗಳಲ್ಲಿ ನಿರ್ಮಾಣಗೊಂಡಿರುವ ಅನಧಿಕೃತ ಕಟ್ಟಡಗಳ ಸಕ್ರಮಕ್ಕಾಗಿ 32 ಸಾವಿರಕ್ಕೂ ಅಧಿಕ ಅರ್ಜಿ ಸಲ್ಲಿಕೆಯಾಗಿವೆ. ಇದರಲ್ಲಿ ಶೇ. 65ರಷ್ಟು ಅರ್ಜಿ ವಿಲೇವಾರಿ ಮಾಡಲಾಗಿದೆ. ಕೆಲ ಅರ್ಜಿಗಳಲ್ಲಿ ಸರ್ವೇ ನಂ. ಒಂದೇ ಇದ್ದರೂ ಹೆಸರು ಬೇರೆ ಬೇರೆಯಾಗಿವೆ. ಸರ್ಕಾರಿ ಜಮೀನುಗಳಲ್ಲಿಯೇ ಹೆಚ್ಚು ಅನಧಿಕೃತ ಕಟ್ಟಡಗಳು ನಿರ್ಮಾಣಗೊಂಡಿವೆ ಎಂದು ತಾಲೂಕು ಅಧಿಕಾರಿಗಳು ತಿಳಿಸಿದ್ದಾರೆ.


    ಗ್ರಾಮೀಣ ಪ್ರದೇಶಗಳಲ್ಲಿ ಅನಧಿಕೃತ ಕಟ್ಟಡಗಳ ಸಕ್ರಮ ಕೋರಿ 94ಸಿ ಅಡಿಯಲ್ಲಿ ಸಾವಿರಾರು ಪ್ರಮಾಣದಲ್ಲಿ ಅರ್ಜಿಗಳು ಬಂದಿವೆ. ಅವುಗಳಲ್ಲಿ ನಿಯಮ ಅನುಸಾರವಾಗಿರುವ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿದೆ.
    | ಡಾ. ಎಸ್.ಬಿ. ಬೊಮ್ಮನಹಳ್ಳಿ,  ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts