ಸೇಬುಹಣ್ಣಿನ ಬಗ್ಗೆ ನಮಗೆ ತಿಳಿದೇ ಇದೆ. ನಾವು ಹೆಚ್ಚಾಗಿ ಇಷ್ಟಪಡುವ, ಸೇವಿಸುವ ಹಣ್ಣು ಸೇಬು. ಹೆಚ್ಚು ಪ್ರಚಲಿತ ಸಹ ಹೌದು. ಆದರೆ ಸೇಬು ಸಿಪ್ಪೆಯು ಒಳಗಿನ ತಿರುಳಿಗಿಂತ ಹೆಚ್ಚು ಔಷಧೀಯ ಗುಣಗಳನ್ನು ಹೊಂದಿದೆ. ಒಂದು ಇಡೀ ಸೇಬುಹಣ್ಣು ಪ್ರಕೃತಿ ಎಂಬ ವೈದ್ಯ ಕೊಟ್ಟ ಉತ್ತಮ ಔಷಧ.
ಪಾಲಿಫಿನಾಲ್ಗಳು, ಫ್ಲೇವನೈಡ್ಗಳು, ವಿಟಮಿನ್ ಸಿ, ನಾರಿನಂಶ, ಪೊಟ್ಯಾಷಿಯಂಗಳನ್ನು ಒಳ್ಳೆಯ ಪ್ರಮಾಣದಲ್ಲಿ ಹೊಂದಿದೆ. ಅನೇಕಾನೇಕ ಸಂಶೋಧನೆಗಳು ಸಿಪ್ಪೆ ಸಹಿತ ಇಡಿಯ ಸೇಬುಹಣ್ಣಿನ ಸೇವನೆಯು ಹಲವು ರೀತಿಯ ಕ್ಯಾನ್ಸರ್ಗಳು, ಹೃದಯಸಂಬಂಧಿತ ಸಮಸ್ಯೆಗಳು, ಅಸ್ತಮಾ ಹಾಗೂ ಮಧುಮೇಹ ಬರುವಂತಹ ಸಂಭವವನ್ನು ಕಡಿಮೆ ಮಾಡುತ್ತದೆ. ಕಾರ್ನೆಲ್ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರದಲ್ಲಿ ನಡೆದ ಸಂಶೋಧನೆಯು ಸಿಪ್ಪೆ ಸಹಿತವಾಗಿ ಸೇಬು ಸೇವಿಸುವುದರಿಂದಾಗುವ ಅತ್ಯದ್ಭುತ ಪರಿಣಾಮವನ್ನು ಸಾಬೀತುಪಡಿಸಿದೆ. ದೇಹದಲ್ಲಾಗುವ ಆಕ್ಸಿಡೇಶನ್ ಪ್ರಕ್ರಿಯೆಯನ್ನು ಐದು ಪಟ್ಟು ನಿಧಾನಗೊಳಿಸುವ ಸಾಮರ್ಥ್ಯ ಸಿಪ್ಪೆ ಸಹಿತವಾದ ಸೇಬು ಸೇವನೆಗಿದೆ. ತನ್ಮೂಲಕ ಬೇಗನೆ ವಯಸ್ಸಾಗುವುದನ್ನು ತಡೆಯಬಹುದು.
ಆಂಟಿ-ಆಕ್ಸಿಡೇಶನ್, ಆಂಟಿ-ಪ್ರೋಲಿಫೆರೇಟಿಂಗ್ ಕಾರ್ಯಗಳಿಗೆ ಸೇಬು ಸಿಪ್ಪೆಯಲ್ಲಿರುವ ಫಿನಾಲಿಕ್ ಫೈಟೋಕೆಮಿಕಲ್ಗಳು ಮೂಲವಾಗಿ ಉತ್ತಮ ಪರಿಣಾಮಗಳಿಗೆ ಎಡೆಮಾಡಿಕೊಡಬಲ್ಲವು ಎಂಬುದಾಗಿ ವೈದ್ಯವಿಜ್ಞಾನಿಗಳ ಅಭಿಪ್ರಾಯ. ಹಾಗಾಗಿ ಸಿಪ್ಪೆ ಸಹಿತವಾಗಿಯೇ ಸೇಬುವನ್ನು ಸೇವಿಸುವುದು ಮುಖ್ಯ. ಒಳ್ಳೆಯ ಗುಣಮಟ್ಟದ ಸೇಬುವನ್ನು ಮಾರುಕಟ್ಟೆಯಿಂದ ಖರೀದಿಸಿ ತಂದ ನಂತರ ಉಪ್ಪುನೀರಿನಲ್ಲಿ ನೆನೆಸಿಟ್ಟು, ತದನಂತರ ಚೆನ್ನಾಗಿ ತೊಳೆದು ಸೇವಿಸಬೇಕು. ಹೊಳಪಿಗಾಗಿ ಅನೇಕ ಬಾರಿ ಸೇಬುವಿಗೆ ವ್ಯಾಕ್ಸ್ ಹಾಕಿರುತ್ತಾರೆ. ಆದುದರಿಂದ ಅದರ ಸೀಸನ್ನಲ್ಲಿಯೇ ಸರಿಯಾಗಿ ಪರೀಕ್ಷಿಸಿ ತಂದು ಸೇವಿಸುವುದು ಒಳಿತು.