ಶ್ರೀರಂಗಪಟ್ಟಣ: ಕಿರಂಗೂರು ಗ್ರಾಮದ ವಿವಿಧ ಬೀದಿಗಳಲ್ಲಿ ಸಮರ್ಪಕ ನೀರು ಪೂರೈಸುವಂತೆ ಗ್ರಾಮ ಸಭೆಯಲ್ಲಿ ಆಗ್ರಹಿಸಿ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಕಿರಂಗೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಮಂಡ್ಯ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಜಮಾವಣೆಗೊಂಡ ಗ್ರಾಮಸ್ಥರು ಜಿಲ್ಲಾ ಪಂಚಾಯಿತಿ ಇಂಜಿನಿಯರ್ ರಾಮಕೃಷ್ಣೇಗೌಡ ಹಾಗೂ ಪಿಡಿಒ ಪ್ರಶಾಂತ್ ಬಾಬು ಅವರೆದುರು ಸಮಸ್ಯೆ ತೋಡಿಕೊಂಡು ತಕ್ಷಣ ಪರಿಹರಿಸಿಕೊಡುವಂತೆ ಮನವಿ ಮಾಡಿದರು.
ಬಳಿಕ ಗ್ರಾಮಸ್ಥ ಹಾಗೂ ಮರವೇ ಅಧ್ಯಕ್ಷ ಶಂಕರ್‌ಬಾಬು ಮಾತನಾಡಿ, ಕಿರಂಗೂರು ಗ್ರಾಮದ ಹೆದ್ದಾರಿ ಪಕ್ಕದ ಮೂರ್ನಾಲ್ಕು ಬೀದಿಗಳಲ್ಲಿ ರಾತ್ರಿ 10.30ರ ಬಳಿಕ ಕೊಳಾಯಿಗಳಿಗೆ ನೀರು ಬಿಡಲಾಗುತ್ತಿದ್ದು ಸಣ್ಣ ಪ್ರಮಾಣದಲ್ಲಿ ಬರುತ್ತಿದೆ. ಮುಸ್ಲಿಂ ಬಡಾವಣೆಗಳಿಲ್ಲ 3 ದಿನಗಳಿಂದ ನೀರಿಲ್ಲದೆ ಹೆಚ್ಚು ಸಮಸ್ಯೆಯಾಗಿದೆ. ಸಾರ್ವಜನಿಕರಿಗೆ ಕೊಡುವ ನೀರನ್ನು ಜನ ಮಲಗುವ ಹೊತ್ತಲ್ಲಿ ಬಿಡುತ್ತಿರುವ ಕಾರಣ ಕೂಲಿ ಮಾಡುವ ಶ್ರಮಿಕರು, ಕಾರ್ಮಿಕರು, ಗಾರ್ಮೆಂಟ್ಸ್‌ಗೆ ಹೋಗುವ ಮಹಿಳೆಯರಿಗೆ ಇತ್ತ ನೀರು ಸಂಗ್ರಹಿಸಲಾಗದೆ ಅತ್ತ ಸರಿಯಾದ ನಿದ್ರೆ ಸಿಗದೆ ಅತ್ಯಂತ ಸಮಸ್ಯೆಯಾಗಿ ಪರಣಮಿಸಿದ್ದು, ಈ ಸಮಸ್ಯೆ ಶೀಘ್ರವೇ ಪರಿಹಾರ ನೀಡುವ ಜತೆಗೆ ಬೆಳಗಿನ ಅಥವಾ ಸಂಜೆಯ 6 ಸಮಯದಲ್ಲಿ ಪ್ರಮಾಣದಲ್ಲಿ ನೀರು ನೀಡುವಂತೆ ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್ ಸಮ್ಮುಖದಲ್ಲಿ ಸಮಸ್ಯೆ ಆಲಿಸಿದ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಎದುರಾಗಿರುವ ಬೀದಿಗಳಲ್ಲಿ ನೀರುಗಂಟಿಗಳ ಮೂಲಕ ದುರಸ್ತಿಗೊಳಿಸಿ ಸಮರ್ಪಕ ನೀರು ಪೂರೈಸಲು ಕ್ರಮವಹಿಸುವ ಭರವಸೆ ನೀಡಿದರು.
ಮರವೇ ಸಂಘಟನಾ ಕಾರ್ಯದರ್ಶಿ ಜಗದೀಶ್, ಗ್ರಾಮದ ನಿವಾಸಿಗಳಾದ ಭಾಗ್ಯಮ್ಮ, ಆಶಾರಾಣಿ, ಜ್ಯೋತಿ, ಶಿಲ್ಪಶ್ರೀ, ಶಬ್ರೀನ್ ತಾಜ್, ಆಸ್ಪಿಯಾಭಾನು, ರಿಜ್ವಾನಾ, ರಿಹಾನಾ, ಬೇಬಿನಾಜ್, ಬಾಬು ಇತರರು ಉಪಸ್ಥಿತರಿದ್ದರು.