ಗ್ರಾಪಂ ವ್ಯಾಪ್ತಿ ದೂರಿಗೂ ಆ್ಯಪ್

– ವೇಣುವಿನೋದ್ ಕೆ.ಎಸ್. ಮಂಗಳೂರು
ಸಾಮಾನ್ಯವಾಗಿ ವಿದ್ಯಾರ್ಥಿಗಳು ಪ್ರಾಜೆಕ್ಟ್ ಸಿದ್ಧಪಡಿಸುವಾಗ ಅದರ ಸಾಮಾಜಿಕ ಅನ್ವಯಿಕತೆ ಬಗ್ಗೆ ಚಿಂತಿಸುವುದು ಕಡಿಮೆ..
ಆದರೆ ಈ ನಾಲ್ವರು ವಿದ್ಯಾರ್ಥಿಗಳು ಮಾತ್ರ ಇಡೀ ಜಿಲ್ಲಾ ಪಂಚಾಯಿತಿಯ ದೂರು ವ್ಯವಸ್ಥೆಯನ್ನೇ ಕಾಗದ ರಹಿತ ಮಾಡುವ ಬಗ್ಗೆ ಯೋಚಿಸಿದ್ದಾರೆ. ಅದಕ್ಕಾಗಿ ‘ವಾಯ್ಸ ಆಫ್ ಸಿಟಿಜನ್’ ಎಂಬ ಹೆಸರಿನ ಆ್ಯಪ್ ಮತ್ತು ಸಾಫ್ಟ್‌ವೇರ್ ಕೂಡ ಸಿದ್ಧಪಡಿಸಿದ್ದಾರೆ.
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸಿದ್ಧಪಡಿಸಿದ ಈ ಆ್ಯಪ್‌ನ್ನು ದ.ಕ ಜಿಲ್ಲಾ ಪಂಚಾಯಿತಿ ಸಿಇಒ ಆರ್.ಸೆಲ್ವಮಣಿ ವೀಕ್ಷಿಸಿ, ವಿದ್ಯಾರ್ಥಿಗಳ ಪರಿಶ್ರಮಕ್ಕೆ ಖುಷಿ ವ್ಯಕ್ತಪಡಿಸಿದ್ದು, ಕೆಲವೊಂದು ಬದಲಾವಣೆ ಸೂಚಿಸಿದ್ದಾರೆ. ಬದಲಾವಣೆ ಬಳಿಕ ವಾಯ್ಸ ಆಫ್ ಸಿಟಿಜನ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಾಗಲಿದೆ. ಇದರ ಸರ್ವರನ್ನು ಜಿ.ಪಂ.ನಲ್ಲಿ ನಿರ್ವಹಿಸಬಹುದಾಗಿದೆ.

ಶುರುವಾಗಿದ್ದು ಹೀಗೆ?: ನಾವು ದ.ಕ ಹಾಗೂ ಉಡುಪಿಯ ಕೆಲವು ಗ್ರಾಮಗಳಿಗೆ ಹೋಗಿ ನೋಡಿದಾಗ ಅಲ್ಲಿ ಜನರು ದೂರುಗಳನ್ನು ಚೀಟಿಯಲ್ಲಿ ಬರೆದು ಕೊಡುವುದು ಅಥವಾ ಬಾಯಿಯಲ್ಲಿ ಹೇಳುತ್ತಿರುವುದನ್ನು ನೋಡಿದೆವು. ಪಿಡಿಒಗಳು ಆ ದೂರನ್ನು ದಾಖಲಿಸಿಕೊಡುತ್ತಿದ್ದರು. ಇದರ ಬದಲು ಪಾರದರ್ಶಕವಾಗಿರುವ ಕ್ರಮ ಯಾಕೆ ತರಬಾರದು ಎಂದು ಯೋಚಿಸಿ ಈ ಆ್ಯಪ್ ಸಿದ್ಧಪಡಿಸಲು ಮುಂದಾದೆವು, ಇದನ್ನು ನಮ್ಮ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ನೋಡಿ, ಖುಷಿಪಟ್ಟು ದ.ಕ ಜಿಪಂ ಸಿಇಒಗೆ ತಿಳಿಸಿದರು ಎಂದು ಆ್ಯಪ್ ಕರ್ತೃಗಳಲ್ಲೊಬ್ಬರಾದ ವಿದ್ಯಾರ್ಥಿ ಪ್ರಜ್ವಲ್ ಪೂಜಾರಿ ತಿಳಿಸುತ್ತಾರೆ.
ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಜ್ವಲ್ ಪೂಜಾರಿ, ಸಚಿನ್ ಪಂಡಿತ್, ಸುಶಾಂತ್ ಕುಂದರ್, ವಿಲಾಸ್‌ರಾಜ್ ಸುವರ್ಣ ನಾಲ್ವರು ತಮ್ಮ ಅಂತಿಮ ವರ್ಷದ ಪ್ರಾಜೆಕ್ಟ್ ಆಗಿ ಈ ಆ್ಯಪ್ ಸಿದ್ಧಪಡಿಸಿದ್ದು, ಪ್ರೊ.ಸಯೀಶ್ ಮಾರ್ಗದರ್ಶನ ನೀಡಿದ್ದಾರೆ.

ಹೇಗೆ ಕಾರ್ಯ?:  ಆ್ಯಪ್‌ನಲ್ಲಿ ನಾಗರಿಕರು ತಮ್ಮ ಜಿಲ್ಲೆ, ತಾಲೂಕು, ಗ್ರಾಮ, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆಗಳನ್ನು ನೋಂದಣಿ ಮಾಡಬೇಕು. ದೂರುಗಳಿದ್ದರೆ ಫೋಟೊ, ಜಿಪಿಎಸ್ ವಿವರ ಸಹಿತವಾಗಿ ನಮೂದಿಸಿ ರವಾನಿಸಬಹುದು. ಆಯಾ ಪಿಡಿಒಗಳಿಗೆ ದೂರು ತಲುಪುತ್ತದೆ. ಅವರು ಎಷ್ಟು ದಿನದಲ್ಲಿ ಪರಿಹರಿಸುವುದಾಗಿ ಮಾಹಿತಿ ಕೊಡಬಹುದು. ಇದು ದೂರು ನೀಡಿದವರ ಮೊಬೈಲ್‌ಗೆ ಬರುತ್ತದೆ. ದೂರು ಸಮರ್ಪಕವಿಲ್ಲವಾದರೆ ಸಕಾರಣ ನೀಡಿ ತಿರಸ್ಕರಿಸಲೂ ಅವಕಾಶವಿದೆ. ದೂರು ಸರಿಯಾಗಿ ವಿಲೇವಾರಿಯಾಗಿ ಕೆಲಸ ಪೂರ್ಣಗೊಂಡರೆ ನಾಗರಿಕರು ಫೀಡ್ ಬ್ಯಾಕ್ ಕೊಡಬಹುದು, ಅದು ಆಯಾ ಪಿಡಿಒಗೆ ತಲುಪುತ್ತದೆ.
ದೂರು ನೀಡಲು ಒಳಚರಂಡಿ, ಕುಡಿಯುವ ನೀರು, ಬೀದಿದೀಪ, ರಸ್ತೆ ಈ ನಾಲ್ಕು ಪ್ರಮುಖ ವಿಭಾಗಗಳನ್ನೂ ಇರಿಸಲಾಗಿದೆ. ಕೆಲವೊಂದು ಬದಲಾವಣೆಗಳನ್ನು ಸೂಚಿಸಲಾಗಿದ್ದು, ಅದನ್ನು ಅಪ್‌ಡೇಟ್ ಮಾಡಲಾಗುತ್ತಿದೆ. ಅಲ್ಲದೆ ಈ ಆ್ಯಪ್ ಕುರಿತು ಎಲ್ಲ ಪಿಡಿಒಗಳನ್ನೂ ಕರೆಸಿ ಮಾಹಿತಿ ನೀಡಲಾಗುವುದು. ಅವರ ಮುಂದೆ ಈ ಆ್ಯಪ್ ವಿವರವನ್ನು ನೀಡುವಂತೆ ವಿದ್ಯಾರ್ಥಿಗಳಿಗೂ ಸಿಇಒ ತಿಳಿಸಿದ್ದಾರೆ.

ಸಿಟಿಜನ್ ವಾಯ್ಸ ಮೂಲಕ ಜನರಿಗೆ ದೂರು ನೀಡಲು ಸುಲಭ ಸಾಧ್ಯ. ಒಂದು ವೇಳೆ ಸರಿಯಾಗದಿದ್ದರೆ ಅದು ಜಿಪಂ ಹಿರಿಯ ಅಧಿಕಾರಿಗಳಿಗೂ ಇದು ಬರುತ್ತದೆ. ಈ ಮೂಲಕ ತುಂಬ ಪ್ರಯೋಜನಕಾರಿ ಆ್ಯಪ್, ನಮ್ಮ ವಿದ್ಯಾರ್ಥಿಗಳು ಸಿದ್ಧಪಡಿಸಿದ ಬಗ್ಗೆ ಖುಷಿಯಿದೆ.
ವಿವೇಕ್ ಆಳ್ವ, ಮ್ಯಾನೇಜಿಂಗ್ ಟ್ರಸ್ಟಿ, ಆಳ್ವಾಸ್ ಶಿಕ್ಷಣ ಟ್ರಸ್ಟ್

ಆಳ್ವಾಸ್ ವಿದ್ಯಾರ್ಥಿಗಳು ಆ್ಯಪ್ ತೋರಿಸಿದ್ದಾರೆ. ಚೆನ್ನಾಗಿದೆ, ಅದರಲ್ಲಿ ಕೆಲವೊಂದು ತಿದ್ದುಪಡಿ ಹೇಳಿದ್ದು, ಅದಾದ ಬಳಿಕ ನಮ್ಮ ಅಧಿಕಾರಿಗಳಿಗೆ ಅದನ್ನು ಬಳಕೆ ಮಾಡುತ್ತೇವೆ.
ಸೆಲ್ವಮಣಿ ಆರ್, ಜಿಪಂ ಸಿಇಒ

Leave a Reply

Your email address will not be published. Required fields are marked *