ಈ ಚುನಾವಣೇಲಿ ಆ್ಯಪ್ ದರ್ಬಾರ್

ಅವಿನ್ ಶೆಟ್ಟಿ ಉಡುಪಿ

ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳಿಂದ ಮತದಾರರಿಗೆ ಹಣ, ಮದ್ಯ, ಉಡುಗೊರೆಗಳ ಆಮಿಷಗಳು ಆರಂಭವಾಗುತ್ತವೆ. ನಡುವೆ ಸುಳ್ಳು ದೂರುಗಳಿಂದಲೂ ಅಧಿಕಾರಿಗಳು ಸಾಕಷ್ಟು ಕಿರಿಕಿರಿ ಅನುಭವಿಸುತ್ತಾರೆ. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು, ರಾಜಕೀಯ ಪಕ್ಷಗಳ ಸಭೆ, ಸಮಾರಂಭಗಳ ಅನುಮತಿ, ಮತದಾರರ ಗೊಂದಲ ಬಗೆಹರಿಸುವ ದೃಷ್ಟಿಯಿಂದ ಚುನಾವಣಾ ಆಯೋಗದ ಅಪ್ಲಿಕೇಷನ್ಸ್‌ಗಳು ಸಾರ್ವಜನಿಕರಿಗೆ ನೆರವಾಗಲಿದೆ.

ಸಮಾಧಾನ್, ಸುವಿಧಾ, ಸಿ-ವಿಜಿಲ್, ಪಿಡಬ್ಲುೃಡಿ, ಸುವಿಧಾ ಕ್ಯಾಂಡಿಡೇಟ್, ಚುನಾವಣಾ, ವೋಟರ್ ಹೆಲ್ಪ್‌ಲೈನ್ ಆ್ಯಪ್‌ಗಳನ್ನು ಆಂಡ್ರಾಯ್ಡಾ ಮೊಬೈಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಬಳಸಬಹುದಾಗಿದೆ.

ಸುವಿಧಾ ಕ್ಯಾಂಡಿಡೇಟ್: ರಾಜಕೀಯ ಪಕ್ಷದ ಅಭ್ಯರ್ಥಿಗಳಿಗೆ ಈ ಆ್ಯಪ್ ಅನುಕೂಲ. ಸಭೆ, ಸಮಾರಂಭ ಮೊದಲಾದ ಚುನಾವಣೆ ಸಂಬಂಧಿಸಿದ ಚಟುವಟಿಕೆಗಳಿಗೆ ಅನುಮತಿ ಪಡೆಯುವ ಬಗ್ಗೆ ಈ ಆ್ಯಪ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆ್ಯಪ್‌ನಲ್ಲೇ ಅರ್ಜಿ ಪರಿಶೀಲಿಸಿ, ನಿರ್ಧಾರವನ್ನು ಆಯೋಗ ಪ್ರಕಟಿಸುತ್ತದೆ.

ವೋಟರ್ ಹೆಲ್ಪ್‌ಲೈನ್: ಮತದಾರರು ಈ ಆ್ಯಪ್ ಮೂಲಕ ತಮ್ಮ ಎಪಿಕ್ ಕಾರ್ಡ್‌ನ ವಿವರ ತಿಳಿದುಕೊಳ್ಳಬಹುದು. ಮತದಾನಕ್ಕೆ ಸಂಬಂಧಿಸಿದ ಮಾಹಿತಿ, ಮತಗಟ್ಟೆ, ಪಟ್ಟಿಯಲ್ಲಿ ಹೆಸರು ಸೇರ್ಪಡೆ ಖಚಿತಪಡಿಸಿಕೊಳ್ಳಬಹುದು. ಚುನಾವಣೆಗೆ ಸಂಬಂಧಿಸಿ ಎಲ್ಲ ವಿವರಗಳು ಲಭ್ಯ.

ಸಮಾಧಾನ್: ಚುನಾವಣೆಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಒಳಗೊಂಡ ಮಾಹಿತಿ ಇರುವ ಇನ್ನೊಂದು ಆ್ಯಪ್ ಇದಾಗಿದ್ದು, ಸಲಹೆ, ದೂರು ನೀಡಲು ಈ ಆ್ಯಪ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ.

 ಚುನಾವಣಾ: ಇದರಲ್ಲಿ ಹಿಂದಿನ ಎಲ್ಲ ಚುನಾವಣೆಗಳ ಡಾಟಾ ಸಂಗ್ರಹವಿದೆ. ಇದರಲ್ಲೂ ದೂರು ಮತ್ತು ಸಲಹೆ ನೀಡುವ ಸೌಲಭ್ಯ ಕಲ್ಪಿಸಲಾಗಿದೆ.

ಪಿಡಬ್ಲೂೃಡಿ: ಚುನಾವಣೆ ಮತ್ತು ಮತದಾನದ ಸಮಯದಲ್ಲಿ ಅಂಗವಿಕಲ ಮತದಾರರು ಆಯೋಗದಿಂದ ಪಡೆದುಕೊಳ್ಳಬಹುದಾದ ಸವಲತ್ತು, ನೆರವಿನ ಮಾಹಿತಿ ಲಭ್ಯ. ಅಂಗವಿಕಲರ ಮತದಾರರ ವಿವರ, ಸಾರಿಗೆ ಸೌಲಭ್ಯ ಮೊದಲಾದ ವಿವರಗಳಿವೆ.

‘ಸಿ’ ವಿಜಿಲ್: ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಸಾರ್ವಜನಿಕರೇ ನೇರವಾಗಿ ದಾಖಲಿಸಬಹುದು. ಮೊಬೈಲ್ ನಂಬರ್ ಹಾಕುವ ಮೂಲಕ ಆ್ಯಪ್‌ಗೆ ಲಾಗಿನ್ ಆಗಬಹುದು ಅಥವಾ ಅನಾನಿಮಸ್ (ಅನಾಮಧೇಯ) ಆಗಿಯೂ ಲಾಗಿನ್ ಆಗಬಹುದು. ಆ್ಯಪ್‌ಗೆ ಫೋಟೊ ಮತ್ತು ವಿಡಿಯೋಗಳನ್ನು ತೆಗೆದು ಜಿಪಿಎಸ್ ಲೊಕೇಶನ್ ಸಹಿತ ಅಪ್‌ಲೋಡ್ ಮಾಡಲು ಅವಕಾಶವಿದೆ.

ಅಧಿಕಾರಿ, ಸಿಬ್ಬಂದಿಗೂ ಆ್ಯಪ್: ಚುನಾವಣಾ ಅಧಿಕಾರಿ ಮತ್ತು ಸಿಬ್ಬಂದಿಗಾಗಿ ಅಬ್ಸರ್ವರ್ ಆ್ಯಪ್, ಸುವಿಧಾ, ಸುಗಮ್, ಇಎಂಎಸ್, ಎಲೆಕ್ಷನ್ ಮಾನಿಟರಿಂಗ್ ಡ್ಯಾಶ್‌ಬೋರ್ಡ್ ಆ್ಯಪ್‌ಗಳಿವೆ. ಸಾರ್ವಜನಿಕ ಮಾಹಿತಿ, ದೂರು, ಸಲಹೆಗೆ ತುರ್ತು ಸ್ಪಂದನೆ, ಪ್ರತಿಕ್ರಿಯೆ ನೀಡಲು ಆಯೋಗ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದೆ. ಎಲ್ಲ ಆ್ಯಪ್‌ಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿ ಅಧಿಕಾರಿ ಸಿಬ್ಬಂದಿಗೆ ಜಿಲ್ಲಾ ಮಟ್ಟದಲ್ಲಿ 3 ಹಂತದ ತರಬೇತಿ ನೀಡಲಾಗಿದೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿ ಸಿ-ವಿಜಿಲ್, ವೋಟರ್ ಹೆಲ್ಪ್‌ಲೈನ್ ಆಯೋಗದ ಇತರೆ ಅಧಿಕೃತ ಆ್ಯಪ್‌ಗಳ ಮೂಲಕ ಸಾರ್ವಜನಿಕರು ದೂರು, ಸಲಹೆ, ಮಾಹಿತಿ ನೀಡಬಹುದು.
– ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾಧಿಕಾರಿ