VIDEO: ಆಂಧ್ರ ಪ್ರದೇಶದ ಮಾಜಿ ರಾಜ್ಯಪಾಲ ಎನ್​.ಡಿ. ತಿವಾರಿ ಪುತ್ರ ರೋಹಿತ್​ ಸಾವಿನ ಹಿಂದೆ ಪತ್ನಿಯ ಕೈವಾಡ

ನವದೆಹಲಿ: ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಮಾಜಿ ಸಿಎಂ ಹಾಗೂ ಆಂಧ್ರ ಪ್ರದೇಶದ ಮಾಜಿ ರಾಜ್ಯಪಾಲ ಎನ್​.ಡಿ. ತಿವಾರಿ ಪುತ್ರ ರೋಹಿತ್​ ಶೇಖರ್​ ತಿವಾರಿ ಅವರದ್ದು ಕೊಲೆ ಎಂದು ಪೊಲೀಸರು ನಿರ್ಧರಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯನ್ನು ಆಧರಿಸಿ ಪೊಲೀಸರು ಈ ನಿರ್ಧಾರಕ್ಕೆ ಬಂದಿದ್ದಾರೆ.

ಈ ಹತ್ಯೆಯ ಹಿಂದೆ ರೋಹಿತ್​ ಅವರ ಪತ್ನಿ ಅಪೂರ್ವ ತಿವಾರಿ ಅವರ ಕೈವಾಡ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಏ.11ರಂದು ನಡೆದಿದ್ದ ಮೊದಲ ಹಂತದ ಚುನಾವಣೆಯಲ್ಲಿ ಮತದಾನ ಮಾಡಿ, ಏ.15ರಂದು ನವದೆಹಲಿಯ ಡಿಫೆನ್ಸ್​ ಕಾಲನಿಯಲ್ಲಿರುವ ತಮ್ಮ ನಿವಾಸಕ್ಕೆ ಮರಳಿದ್ದ ರೋಹಿತ್​ ಸಂಜೆ 4.30ರ ವೇಳೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೂಗಿನಿಂದ ರಕ್ತ ಒಸರುತ್ತಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿತ್ತಾದರೂ, ಮಾರ್ಗಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. ಇವರ ಸಾವಿನ ಬಗ್ಗೆ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದ್ದರು. (ಏಜೆನ್ಸೀಸ್​)