ಚೆಂಡು ವಿರೂಪ ಪ್ರಕರಣ: ಮೌನ ಮುರಿದು ಕ್ಷಮೆಯಾಚಿಸಿದ ಡೇವಿಡ್‌ ವಾರ್ನರ್‌

ಸಿಡ್ನಿ: ಚೆಂಡು ವಿರೂಪಗೊಳಿಸಿದ ಪ್ರಕರಣ ನಡೆದ ನಂತರ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡದ ಉಪನಾಯಕ ಡೇವಿಡ್ ವಾರ್ನರ್ ಮೌನ ಮುರಿದಿದ್ದು, ತಮ್ಮ ತಪ್ಪಿಗೆ ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಕ್ಷಮೆಯಾಚಿಸಿದ್ದಾರೆ.

ಈ ಕುರಿತು ಟ್ವಿಟರ್‌ನಲ್ಲಿ ಬರೆದುಕೊಂಡಿರುವ ವಾರ್ನರ್, ಆಸ್ಟ್ರೇಲಿಯಾ ಹಾಗೂ ಇಡೀ ವಿಶ್ವದ ಕ್ರಿಕೆಟ್ ಅಭಿಮಾನಿಗಳಿಗೆ ಹೇಳಲು ಬಯಸುತ್ತೇನೆ. ಪ್ರಸ್ತುತ ನಾನು ಸಿಡ್ನಿಗೆ ಮರಳಿ ಹೋಗುತ್ತಿದ್ದೇನೆ. ನನ್ನ ತಪ್ಪಿಗೆ ಕ್ಷಮೆಯಾಚಿಸುತ್ತೇನೆ. ತಪ್ಪಿನ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತೇನೆ. ನನ್ನ ತಪ್ಪಿನಿಂದಾಗಿ ಕ್ರೀಡೆ ಹಾಗೂ ಅಭಿಮಾನಿಗಳಿಗೆ ಎಷ್ಟು ನೋವಾಗಿದೆ ಎಂಬುದು ನನಗೆ ಅರ್ಥವಾಗುತ್ತದೆ. ಎಲ್ಲರಂತೆ ನಾನು ಕೂಡ ಚಿಕ್ಕ ಹುಡುಗನಾಗಿದ್ದಾಗಿನಿಂದಲೂ ಕ್ರೀಡೆಯನ್ನು ಪ್ರೀತಿಸುತ್ತೇನೆ ಎಂದು ಹೇಳಿದ್ದಾರೆ.

ಸದ್ಯಕ್ಕೆ ಕ್ಲಬ್‌ ಕ್ರಿಕೆಟ್‌ನಲ್ಲಿ ಆಡುತ್ತಿದ್ದ 31 ವರ್ಷದ ವಾರ್ನರ್‌, ನನ್ನ ಭವಿಷ್ಯವನ್ನು ಪುನರ್‌ ಸ್ಥಾಪಿಸಿಕೊಳ್ಳಲು ನನಗೆ ಸಮಯದ ಅಗತ್ಯವಿದೆ. ನಾನು ನಿರಾಳವಾಗುವ ಅಗತ್ಯವಿದೆ. ನನ್ನ ಕುಟುಂಬದೊಂದಿಗೆ, ಸ್ನೇಹಿತರೊಂದಿಗೆ ಮತ್ತು ನನ್ನನ್ನು ನಂಬಿರುವ ಸಲಹೆಗಾರರೊಂದಿಗೆ ಕಾಲ ಕಳೆಯಲು ಇಚ್ಛಿಸುತ್ತಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ನಾನು ಈ ಕುರಿತು ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದ್ದಾರೆ.

ಚೆಂಡನ್ನು ವಿರೂಪಗೊಳಿಸುವ ಯೋಜನೆಯನ್ನು ವಾರ್ನರ್‌ ರೂಪಿಸಿದ್ದರು. ಆದರೆ ಈ ಯೋಜನೆಯು ತಿಳಿದಿದ್ದರೂ ಸ್ಟೀವ್‌ ಸ್ಮಿತ್‌ ಮತ್ತು ಕ್ಯಾಮರೂನ್ ಬ್ಯಾಂಕ್ರಾಫ್ಟ್​ ಯಾರ ಗಮನಕ್ಕೂ ತರದೆ ಸುಮ್ಮನಿದ್ದದ್ದರು.

ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಕ್ರಿಕೆಟ್‌ ಆಸ್ಟ್ರೇಲಿಯ ತನಿಖೆ ಕೈಗೊಂಡ ನಂತರ, ಸ್ಟೀವನ್ ಸ್ಮಿತ್ ಹಾಗೂ ವಿಧ್ವಂಸಕ ಬ್ಯಾಟ್ಸ್​ಮನ್ ಡೇವಿಡ್ ವಾರ್ನರ್​ಗೆ ಚೆಂಡು ವಿರೂಪ ಪ್ರಕರಣದಲ್ಲಿ ಒಂದು ವರ್ಷ ನಿಷೇಧ ಶಿಕ್ಷೆ ವಿಧಿಸಿದೆ. ಕೇಪ್​ಟೌನ್ ಟೆಸ್ಟ್​ನಲ್ಲಿ ಸ್ಯಾಂಡ್​ಪೇಪರ್ ಬಳಸಿ ಚೆಂಡನ್ನು ವಿರೂಪ ಮಾಡಲು ಯತ್ನಿಸಿದ್ದ ಯುವ ಆರಂಭಿಕ ಬ್ಯಾಟ್ಸ್​ಮನ್ ಕ್ಯಾಮರೂನ್ ಬ್ಯಾಂಕ್ರಾಫ್ಟ್​ಗೆ 9 ತಿಂಗಳ ನಿಷೇಧ ಶಿಕ್ಷೆಯನ್ನು ಪ್ರಕಟಿಸಲಾಗಿದೆ. ವಾರ್ನರ್ ಹಾಗೂ ಸ್ಮಿತ್ 11ನೇ ಆವೃತ್ತಿಯ ಐಪಿಎಲ್‌ನಿಂದ ವಜಾಗೊಂಡಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *